ಕರ್ನಾಟಕ

ಅಸಂಬದ್ಧ ಯೋಗಾಭ್ಯಾಸದಿಂದ ದೇಹಕ್ಕೆ ಹಾನಿಯಾಗಿ ಶಾಶ್ವತ ಸಮಸ್ಯೆಗಳ ಬೀಡಾಗುವುದು ಎಚ್ಚರಿಕೆ.

Pinterest LinkedIn Tumblr

Benefits of Yoga14

ಮಂಗಳೂರು: ಇಂದು ಪ್ರತಿಯೊಬ್ಬರೂ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಲು ಏನೇನೋ ಕಸರತ್ತು ನಡೆಸುತ್ತಾರೆ. ಅದರಲ್ಲಿ ಯೋಗವೂ ಒಂದು. ಮೈಮನಸ್ಸುಗಳನ್ನು ಸುಸ್ಥಿತಿಯಲ್ಲಿಡುವ ಶಕ್ತಿ ಈ ಯೋಗಕ್ಕಿದೆ. ಇದು ಔಷಧಿ ರಹಿತ ಚಿಕಿತ್ಸಾ ವಿಧಾನ.

ಯೋಗಾಭ್ಯಾಸ ಮಾಡುವ ಮುನ್ನ ಆಸನಗಳನ್ನು ಸರಿಯಾಗಿ ಹಾಕದಿದ್ದರೆ, ಯೋಗ ಶಿಕ್ಷಕರ ಸೂಚನೆ ಪಾಲಿಸದಿದ್ದರೆ, ಇಲ್ಲವೇ ಶಿಕ್ಷಕರು ಸರಿಯಾಗಿ ಸೂಚನೆ ನೀಡದಿದ್ದರೆ ದೇಹಕ್ಕೆ ಹಾನಿಯಾಗಿ ಶಾಶ್ವತ ಸಮಸ್ಯೆಗಳಿಗೂ ಒಳಗಾಗಬಹುದು. ಈಗಾಗಲೇ ಯೋಗಾಭ್ಯಾಸ ಪೂರ್ವಾಪರ ತಿಳಿಯದೇ ಯೋಗಾಭ್ಯಾಸ ಕೈಗೊಂಡು ಮೂಳೆ ಮುರಿತದಿಂದ ಹಿಡಿದು ಮೆದುಳು ಹಾಗೂ ನರಮಂಡಲಕ್ಕೆ ಶಾಶ್ವತ ಹಾನಿ ಮಾಡಿಕೊಂಡ ಉದಾಹರಣೆಗಳೂ ಇವೆ. ಅಸಂಬದ್ಧ ಯೋಗಾಭ್ಯಾಸದಿಂದ ಕಾಲು, ತೊಡೆ ಮತ್ತು ಬೆನ್ನಿನ ಕೆಳಭಾಗದ ಸ್ನಾಯುಗಳಿಗೆ ತೊಂದರೆ ಸಾಮಾನ್ಯ.

ಒಂದಿಷ್ಟು ಎಚ್ಚರಿಕೆಗಳು:
1.ಯೋಗಾಸನ ಆರಂಭಿಸುವವರು ದೇಹಸ್ಥಿತಿ ಹಾಗೂ ಅದರ ಅಗತ್ಯಗಳಿಗೆ ಸರಿಹೊಂದುವ ಆಸನಗಳ ಬಗ್ಗೆ ಯೋಗ ಶಿಕ್ಷಕರು ಹಾಗೂ ವೈದ್ಯರಿಂದ ಸಲಹೆ ಪಡೆದೇ ಮುಂದುವರಿಯಬೇಕು.
2. ದುರ್ಬಲ ದೇಹ ಪ್ರಕೃತಿ ಉಳ್ಳವರು ವ್ಯಾಯಾಮ ಮಾಡುವ ಮೊದಲು ವೈದ್ಯರ ಸಲಹೆ ಪಡೆವ ಜೊತೆಗೆ ಆರಂಭದ ಕೆಲವು ತಿಂಗಳು ಸರಳ ಆಸನಗಳನ್ನು ಮಾತ್ರ ಮಾಡಬೇಕು.
3. ಯೋಗಾಭ್ಯಾಸವನ್ನು ಸಾಮೂಹಿಕ ಶಿಬಿರ, ಶಿಕ್ಷಕರ ಸಹಾಯವಿಲ್ಲದೆ ಕಲಿಯುವುದು, ಶಾಲೆಗಳಲ್ಲಿ ಇಲ್ಲವೇ ಟಿವಿ ಮುಂದೆ ನಿಂತು ಯೋಗಾಭ್ಯಾಸ ಮಾಡುವುದರಿಂದ ಅನಾನುಕೂಲವೇ ಹೆಚ್ಚು.
4. ಬಿಬಿ, ಸೈನಸ್ ಹಾಗೂ ಗಂಭೀರ ಕಾಯಿಲೆ ಇರುವವರು ತಲೆಕೆಳಗೆ ಮಾಡಬೇಕಾದ ಆಸನಗಳನ್ನು ಮಾಡಬಾರದು.
5. ಯೋಗ ಮಾಡುವಾಗ ಉಸಿರಿನ ಬಗ್ಗೆ ವಿಶೇಷ ಗಮನವಿರಲಿ. ಆ ಸಂದರ್ಭದಲ್ಲಿ ನೋವಿನ ಅನುಭವವಾದರೆ ತಕ್ಷಣ ಕ್ರಮ ಬದಲಿಸಿಕೊಳ್ಳಿ.
6. ಕೆಲವು ಆರೋಗ್ಯ ಸಮಸ್ಯೆಗಳಿದ್ದವರಿಗೆ ಕೆಲವು ಆಸನಗಳು ಸೂಕ್ತವಲ್ಲ. ಹಾಗಾಗಿ, ಯೋಗ ಆರಂಭಿಸುವ ಮುನ್ನ ಸೂಕ್ತ ತಪಾಸಣೆ ಒಳಿತು.
7. ಯೋಗಾಭ್ಯಾಸದ ಆರಂಭಿಕವಾಗಿ ಇಷ್ಟ ದೇವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಳಿಸಿ. ಮೊದಲಿಗೆ ಸರಳ ಆಸನಗಳನ್ನು ಮಾಡಿ. ಇದರಿಂದ ದೇಹ ಮತ್ತು ಮನಸ್ಸು ನಿಯಂತ್ರಣಕ್ಕೆ ಬರುವ ಜೊತೆಗೆ ಆಸನ ಮಾಡಲು ದೇಹ ಪಕ್ವಗೊಳ್ಳುತ್ತದೆ.
8. ಶಿಸ್ತುಬದ್ಧವಾಗಿ, ಕ್ರಮಬದ್ಧವಾಗಿ ಯೋಗ ಮಾಡುವುದರಿಂದ ಮತ್ತು ಹಂತಹಂತವಾಗಿ ದೀರ್ಘಕಾಲದವರೆಗೆ ಯೋಗಾಸನ ಮಾಡುವುದರಿಂದ ಮಾತ್ರ ದೇಹಸ್ಥಿತಿ ಮತ್ತು ಮಾನಸಿಕ ಸ್ಥಿತಿ ಸುಸ್ಥಿತಿಯಲ್ಲಿಡಲು ಸಾಧ್ಯ. ಆದರೆ, ಬಹುಬೇಗ ಯೋಗ ಕಲೆ ಸಿದ್ಧಿಸಿಕೊಳ್ಳಬೇಕೆಂಬ ಆತುರದಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚಿನ ವರ್ಕ್‌ಔಟ್ ಮಾಡಿದರೆ ಇರುವೆಯಂತಿದ್ದ ಸಮಸ್ಯೆ ಆನೆಯಂತಾಗುತ್ತದೆ.
9. ತೀವ್ರಗತಿಯಲ್ಲಿ ಉಸಿರಾಟ ಒಳಗೊಂಡಿರುವ ಕಪಾಲಭಾತಿ ಮತ್ತು ಭಸ್ತ್ರಿಕದಂಥ ಪ್ರಾಣಾಯಾಮ ಮಾಡುವಾಗ ಕೆಲವರು ಅತ್ಯುತ್ಸಾಹದಿಂದ ತಮ್ಮ ಮನಸ್ಸಿನ ಉಸಿರಾಟದ ಗತಿಯನ್ನು ವಿಪರೀತ ಹೆಚ್ಚಿಸಿಕೊಳ್ಳುತ್ತಾರೆ. ಇವುಗಳನ್ನು ಮಾಡುವಾಗ ಸ್ವನಿಯಂತ್ರಣ ಅಗತ್ಯ.
10.ನಿಗದಿತ ಸಮಯ ಅಂದರೆ ಬೆಳಗ್ಗೆ ಮತ್ತು ಸಂಜೆ ಮಾತ್ರ ಮಾಡಿ.
11. ಯೋಗಾಭ್ಯಾಸಕ್ಕೂ ಮುನ್ನ ಮಾನಸಿಕವಾಗಿ ಸಿದ್ಧಗೊಳ್ಳಿ. ಆಯಾಸವಿದ್ದಾಗ ಆಸನಗಳು ಬೇಡ.
12. ಖಾಲಿ ಹೊಟ್ಟೆಯಲ್ಲಿ ಯೋಗ ಮಾಡಲು ಆಗದಿದ್ದರೆ ಒಂದಿಷ್ಟು ದ್ರವ ಆಹಾರ ಸೇವಿಸಿ.
13. ಅಭ್ಯಾಸ ಮುಗಿದ ಕೂಡಲೇ ಲಘುಬಗೆಯಲ್ಲಿ ಕೆಲಸಗಳಿಗೆ ತೆರಳದಿರಿ. ಶವಾಸನದಲ್ಲಿ ಮಲಗಿ ಅಥವಾ ವಿರಮಿಸಿ.

ಪ್ರೀಯ ಓದುಗರೇ ಈ ಲೇಖನ ನಿಮಗೆ ಇಷ್ಟವಾದಲ್ಲಿ, ದಯಮಾಡಿ ಇದನ್ನು ಇತರಿಗೆ ಶೇರ್ ಮಾಡಿ ಅವರು ಇದರ ಉಪಯೋಗ ಪಡೆದುಕೊಳ್ಳಲು ಸಹಕರಿಸಿ.

Comments are closed.