ಕರ್ನಾಟಕ

ಸ್ಪೀಚ್ ತೆರೆಫಿಯಿಂದ ತೊದಲುವಿಕೆ ನಿವಾರಣೆ

Pinterest LinkedIn Tumblr

shutter_stock_1

ತೊದಲುವಿಕೆ ಅನ್ನುವುದು ಈ ದಿನಗಳಲ್ಲಿ ಅನೇಕ ಜನರಲ್ಲಿ ಕಂಡುಬರುತ್ತಿರುವ ಒಂದು ತೊಂದರೆ. ತೊದಲುವ ತೊಂದರೆ ಇರುವ ವ್ಯಕ್ತಿಯು ಬಹಳಷ್ಟು ಭಯ, ಆತಂಕ, ಕೀಳರಿಮೆಗಳಿಂದ ಬಳಲುತ್ತಿರುತ್ತಾರೆ. ತೊದಲುವ ಸಮಸ್ಯೆ ಇರುವ ವ್ಯಕ್ತಿಗಳು ಜನರ ಜತೆ ಮಾತನಾಡಲು ಹಿಂದೇಟು ಹಾಕುತ್ತಾರೆ. ಕೆಲವರಲ್ಲಿ ಈ ಸಮಸ್ಯೆಯು ಸಾಮಾನ್ಯವಾಗಿ ಬಾಲ್ಯದಲ್ಲಿ ಆರಂಭವಾಗಿ ಪ್ರೌಢ ವಯಸ್ಸಾಗುವವರೆಗೆ ಮುಂದುವರಿಯುತ್ತದೆ.

ತೊದಲುವಿಕೆಗೆ ನಿಖರ ಕಾರಣ ಏನು ಎಂಬುದು ಇನ್ನಷ್ಟೆ ತಿಳಿದು ಬರಬೇಕಿದೆ. ಆದರೆ ಬೇರೆ ಬೇರೆ ಅಂಶಗಳು ತೊದಲುವಿಕೆಗೆ ಕಾರಣವಾಗುತ್ತವೆ ಎಂಬುದಾಗಿ ವರದಿಗಳು ಹೇಳುತ್ತವೆ. ಇವುಗಳಲ್ಲಿ ಆನುವಂಶಿಕ ಅಂಶಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅಂದರೆ ತೊದಲುವ ತೊಂದರೆಯು ವಂಶಪಾರಂಪರ್ಯವಾಗಿ ಬರಬಹುದು. ಒಂದು ಕುಟುಂಬದಲ್ಲಿ ಒಬ್ಬರಿಗೆ ತೊದಲುವಿಕೆಯ ತೊಂದರೆ ಇದ್ದರೆ, ಅದೇ ಕುಟುಂಬದಲ್ಲಿ ಬೇರೆಯವರಿಗೂ ಸಹ ಈ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಂದು ಮಗುವಿನ ಜೀವನದಲ್ಲಿ ಭಾಷಾ ಕಲಿಕೆಯ ಅವಧಿ ಅಂದರೆ ಅದು ಬಹಳಷ್ಟು ವಿಷಯಗಳನ್ನು ಕಲಿಯಲು ಇರುವಂತಹ ಒಂದು ಅವಧಿಯಾಗಿದ್ದು, ಈ ಅವಧಿಯಲ್ಲಿ ಮಗುವಿನ ಭಾಷೆಯ ನಿರರ್ಗಳತೆಯ ಮೇಲೆ ಸಮಸ್ಯೆ ಉಂಟಾಗುವ ಸಾಧ್ಯತೆಯೂ ಇದೆ. ಹಿರಿಯರಿಗೆ ಹೋಲಿಸಿದರೆ ಮಕ್ಕಳ ತೊದಲುವಿಕೆಯನ್ನು ನಿವಾರಿಸುವುದು ಹೆಚ್ಚು ಸುಲಭ, ಆದರೆ ಇದಕ್ಕೆ ವೃತ್ತಿಪರರ ಎಚ್ಚರಿಕೆಯ ಮಾರ್ಗದರ್ಶನ ಅತ್ಯಾವಶ್ಯಕ.

ಒಬ್ಬ ವ್ಯಕ್ತಿಯಲ್ಲಿ ಉಗ್ಗುವ ಅಥವಾ ತೊದಲುವಿಕೆಯ ತೊಂದರೆ ಇದ್ದಲ್ಲಿ , ಅದು ಆತನ ಜೀವನದ ಇನ್ನಿತರ ಚಟುವಟಿಕೆಗಳಾದ ಸರಿಯಾದ ಉದ್ಯೋಗವನ್ನು ಪಡೆಯುವುದು, ಜೀವನ ಸಂಗಾತಿಯ ಆಯ್ಕೆ ಇತ್ಯಾದಿ ಅಂಶಗಳ ಮೇಲೆ ಪ್ರಭಾವ ಬೀರಬಹುದು. ಆದರೆ ತೊದಲುವಿಕೆಗೆ ಚಿಕಿತ್ಸೆ ನೀಡಬಹುದು ಎನ್ನುವುದು ತೊದಲುವ ತೊಂದರೆ ಇರುವ ಎಲ್ಲರಿಗೂ ಒಂದು ಭರವಸೆಯ ಬೆಳಕು!

ಸ್ಪೀಚ್‌ ತೆರಪಿ ಎನ್ನುವುದು ತೊದಲುವ ತೊಂದರೆ ಇರುವ ಜನರಿಗೆ ಬಹಳ ಪ್ರಯೋಜನಕಾರಿಯಾದ ಒಂದು ಚಿಕಿತ್ಸೆ. ಈ ಚಿಕಿತ್ಸೆಯು ವ್ಯಕ್ತಿಯು ಮಾತನಾಡುತ್ತಿರುವಾಗ ಎದುರಿಸುವ ತೊಂದರೆಯನ್ನು ನಿವಾರಿಸುವುದಷ್ಟೆ ಅಲ್ಲದೆ, ವ್ಯಕ್ತಿಯು ತನಗಿಂತ ಹಿರಿಯರ ಜತೆಗೆ ಮಾತನಾಡುವಾಗ, ಅನ್ಯಲಿಂಗಿಗಳ ಜತೆಗೆ ಮಾತನಾಡುವಾಗ ಅಥವಾ ಅಪರಿಚಿತರ ಜತೆಗೆ ಮಾತನಾಡುವಾಗ ಎದುರಾಗುವ ಕೆಲವು ನಿರ್ದಿಷ್ಟ ಅಡಚಣೆಗಳ ಬಗ್ಗೆಯೂ ಸಹ ನಿಗಾ ವಹಿಸುತ್ತದೆ. ಸಕಾಲದಲ್ಲಿ ಸ್ಪೀಚ್‌ ತೆರಪಿ-ಅಂದರೆ ಮಾತಿನ ಚಿಕಿತ್ಸೆಯನ್ನು ಪಡೆಯುವುದರಿಂದ ಬಹಳಷ್ಟು ಪ್ರಯೋಜನಗಳಿವೆ ಮತ್ತು ಈ ಬಗ್ಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಲಹೆ-ಸಹಾಯವನ್ನು ಪಡೆಯುವುದು ಉತ್ತಮ.

Comments are closed.