ಮಂಗಳೂರು, ಅ. 28: ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ನೇತ್ರತ್ವದಲ್ಲಿ ಅ.29ರಂದು ಆಯೋಜಿಸಲಾಗಿದ್ದ ಸರ್ವ ಧರ್ಮ ಸಂಗಮದ ‘ಭಾವೈಕ್ಯದ ದೀಪಾವಳಿ’ ಹಬ್ಬ ಆಚರಣೆ ಕಾರ್ಯಕ್ರಮ ಹಿಂದೂ ಸಂಘಟನೆಗಳ ತೀವ್ರ ವಿರೋಧದಿಂದಾಗಿ ಇದೀಗ ಕದ್ರಿ ದೇವಸ್ಥಾನದಿಂದ ಸ್ಥಳಾಂತರಗೊಂಡಿದೆ. ಈ ಮೂಲಕ ಕದ್ರಿ ದೇವಾಲಯದಲ್ಲಿ ಹಬ್ಬ ಆಚರಣೆಗೆ ಉಂಟಾಗಿದ್ದ ವಿವಾದಕ್ಕೆ ತೆರೆ ಬಿದ್ದಿದೆ.
ಈ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಐವನ್ ಡಿಸೋಜ ಅವರು, ದೇವಾಲಯದಲ್ಲಿ ಅನ್ಯಮತೀಯರು ದೀಪಾವಳಿ ಆಚರಣೆ ನಡೆಸುವುದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ” ಎಂದು ಕದ್ರಿ ದೇವಸ್ಥಾನದಲ್ಲಿ ಅಯೋಜಿಸಲಾಗಿದ್ದ ಭಾವೈಕ್ಯದ ದೀಪಾವಳಿ’ ಆಚರಣೆ ಕಾರ್ಯಕ್ರಮಕ್ಕೆ ಹಿಂದೂ ಸಂಘಟನೆಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಕಾರ್ಯಕ್ರಮವನ್ನು ಕದ್ರಿಯ ಗೋರಕ್ಷನಾಥ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.
ದೀಪಾವಳಿ ಭಾವೈಕ್ಯತಾ ಕಾರ್ಯಕ್ರಮ ನನ್ನೊಬ್ಬನ ನಿರ್ಧಾರವಲ್ಲ. ಇದಕ್ಕಾಗಿ ವಿವಿಧ ಧರ್ಮಗಳ ಪ್ರತಿನಿಧಿಗಳಿರುವ 50 ಮಂದಿಯ ಸಮಿತಿ ರಚಿಸಲಾಗಿತ್ತು. ಕಾರ್ಯಕ್ರಮವನ್ನು ಕದ್ರಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲು ದೇವಸ್ಥಾನದ ಆಡಳಿತ ಮಂಡಳಿಯ ಅನುಮತಿ ಕೂಡಾ ಪಡೆದಿದ್ದವು. ಹೀಗಿರುವಾಗ ಇದು ಹೇಗೆ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಅವರು ಪ್ರಶ್ನಿಸಿದರು.
ಕದ್ರಿ ದೇವಸ್ಥಾನದಲ್ಲಿ ಭಾವೈಕ್ಯತಾ ದೀಪಾವಳಿ ನಡೆಸುವ ಹಿಂದೆ ಯಾವುದೇ ದುರುದ್ದೇಶವಿರಲಿಲ್ಲ. ಆದರೆ, ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ ಎಂಬ ಆರೋಪ ಮಾಡಿರುವುದರಿಂದ ಅನಿವಾರ್ಯವಾಗಿ ಕಾರ್ಯಕ್ರಮವನ್ನು ಅಕ್ಟೋಬರ್ 29ರಂದು ಕದ್ರಿಯ ಗೋರಕ್ಷನಾಥ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಐವನ್ ಡಿಸೋಜ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ,ಪಕ್ಷದ ಪ್ರಮುಖರಾದ ಜೆ.ನಾಗೇಂದ್ರ. ಅಮೃತ ಕದ್ರಿ ಉಪಸ್ಥಿತರಿದ್ದರು.