ಕರಾವಳಿ

ನಕ್ಸಲ್ ಪೀಡಿತ ಪ್ರದೇಶವೆಂಬ ಹಣೆಪಟ್ಟಿ ಹೊತ್ತ ಕಬ್ಬಿನಾಲೆ-ಕಟ್ಟಿನಾಡಿ ಸಂಪರ್ಕ ಸೇತುವೆ ಕಾಮಗಾರಿಗೆ ಚಾಲನೆ (Video)

Pinterest LinkedIn Tumblr

ಕುಂದಾಪುರ: ಹಳ್ಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಬ್ಬಿನಾಲೆ ಕಟ್ಟಿನಾಡಿ ಸೇತುವೆಗೆ ನಬಾರ್ಡಿನಿಂದ‌ ಮಂಜೂರಾದ 3 ಕೋಟಿ 48ಲಕ್ಷದ ಕಾಮಗಾರಿಗೆ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಭೂಮಿ ಪೂಜೆ ನೆರವೇರಿಸಿದರು.

ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ಜನರ ಬಹಳಷ್ಟು ವರುಷದ ಬೇಡಿಕೆ ಈಡೇರಿದೆ. ಇಲ್ಲಿನ ಜನರ ಇನ್ನಷ್ಟು ಬೇಡಿಕೆಗಳಿಗೆ ಅತೀ ಶೀಘ್ರದಲ್ಲಿ ಸ್ಪಂದನೆ ನೀಡಲಾಗುತ್ತದೆ. ಜನ ಹಿತಕ್ಕಾಗಿ ಮಾಡುವ ಕೆಲಸಕ್ಕೆ ಯಾರೇ ಅಡ್ಡಿ ಬಂದರು ಸಹಿಸಲ್ಲ ಎಂದರು.

ಈ ಭಾಗದ ನೂರಾರು ಜನರು ಭಾಗವಹಿಸಿ ಶಾಸಕರಿಗೆ ಸನ್ಮಾನಿಸಿದ್ದಲ್ಲದೆ ಶಾಸಕರು ಹಾಗೂ ಸಂಸದರ, ಜನಪ್ರತಿನಿಧಿಗಳ ಕಾರ್ಯಕ್ಕೆ ಅಭಿನಂದನೆ ತಿಳಿಸಿದರು.

ಬೈಂದೂರು ಬಿಜೆಪಿ‌ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಹಳ್ಳಿಹೊಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ಕೊಠಾರಿ, ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ, ಸದಸ್ಯರಾದ ನೇತ್ರಾವತಿ ನಾಯ್ಕ್, ಸುಜಾತಾ ಬೋವಿ, ಜಿಲ್ಲಾ ಪಂಚಾಯತ್ ಮಾಜಿ ಸದ್ಯಸ ರೋಹಿತ್ ಕುಮಾರ್ ಶೆಟ್ಟಿ, ಗುತ್ತಿಗೆದಾರರಾದ ಗೋಕುಲ್ ಶೆಟ್ಟಿ ಉಪ್ಪುಂದ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ದುರ್ಗಾ ದಾಸ್ ಮೊದಲಾದವರಿದ್ದರು. ಶಂಕರನಾರಾಯಣ ಚಾತ್ರ ಸ್ವಾಗತಿಸಿ, ರಂಜಿತ್ ಕುಲಾಲ್ ವಂದಿಸಿದರು.

ಇದೇ ಸಂದರ್ಭದಲ್ಲಿ ಸಾರ್ವಜನಿಕರು ಅರಣ್ಯ ಇಲಾಖೆಯಿಂದ ಆಗುತ್ತಿರುವ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದರು. ಇತ್ತೀಚೆಗೆ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಬೇಡಿಕೆ ಇಟ್ಟಿರುವ ನೂತ‌ ಅಂಗನವಾಡಿ ಬೇಡಿಕೆ ಹಾಗೂ ಈ ಭಾಗದಲ್ಲಿನ ನೆಟ್ವರ್ಕ್ ಸಮಸ್ಯೆ, 94‌ಸಿ ಸಮಸ್ಯೆಗಳ ಶೀಘ್ರ ಪರಿಹಾರದ ಭರವಸೆಯನ್ನು ಶಾಸಕರು ಈ ವೇಳೆ ನೀಡಿದರು.

ನಕ್ಸಲ್‌ ಪೀಡಿತ ಪ್ರದೇಶವೆಂಬ ಹಣೆಪಟ್ಟಿ ಹೊತ್ತ ಕಬ್ಬಿನಾಲೆ ಹಾಗೂ ಕಟ್ಟಿನಾಡಿ ಎನ್ನುವ ಎರಡು ಊರುಗಳನ್ನು ಬೆಸೆಯುವ ಚಕ್ರಾ ನದಿಗೆ ಹಲವು ವರ್ಷಗಳಿಂದ ಸಂಪರ್ಕ ಸೇತುವೆ ಬೇಡಿಕೆಯಿತ್ತು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಬ್ಬಿನಾಲೆಯಲ್ಲಿ ಸುಮಾರು 40 ಮನೆಗಳಿದ್ದು,  ದೇವರಬಾಳುವಿನಲ್ಲಿ ಸುಮಾರು 35, ಕಟ್ಟಿನಾಡಿಯಲ್ಲಿ 25 ಮನೆಗಳಿವೆ. ಕಾರೇಬೈಲಿನಲ್ಲಿ ಸುಮಾರು 60 ಮನೆಗಳಿವೆ.

Comments are closed.