ಕರಾವಳಿ

ಕೋಟತಟ್ಟು ಕೊರಗ ಕುಟುಂಬದವರಿಗೆ ಸೂಕ್ತ ರಕ್ಷಣೆ ನೀಡಲು ಗೃಹಮಂತ್ರಿಗಳಿಗೆ ಮನವಿ‌ ಮಾಡಲಾಗುತ್ತದೆ: ಸಚಿವ ಕೋಟ (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕೋಟ ಕೊರಗ ಸಮುದಾಯದ ಸಂತ್ರಸ್ಥ ಕುಟುಂಬಗಳ ನೋವಿನಲ್ಲಿ ನಾವೆಲ್ಲಾರೂ ಭಾಗಿಯಾಗಿದ್ದು ಅವರೊಂದಿಗೆ ಸದಾ ಬೆಂಬಲವಾಗಿ ನಿಲ್ಲುತ್ತೇವೆ. ಪ್ರಕರಣವನ್ನು ಹೊರಗಿನ ಅಧಿಕಾರಿಗಳಿಂದ ತನಿಖೆ ಮಾಡಿಸುವ ಆಗ್ರಹವಿದ್ದು ಅದರ ಕುರಿತು ಪರಿಶೀಲನೆ ನಡೆಸಲಾಗುವುದು. ಕಟ್ಟಕಡೆಯ ಸಮಾಜದವರಾದ ಕೊರಗ ಕುಟುಂಬಗಳ ಮೇಲೆ ದೌರ್ಜನ್ಯ ನಡೆದಿರುವುದು ನೋವು ತಂದಿದೆ. ಸಮುದಾಯದವರಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ಈ ಕುಟುಂಬಗಳಿಗೆ ಅಗತ್ಯ ಭದ್ರತೆ ನೀಡಲು ಗೃಹ ಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೋಟತಟ್ಟು ಗ್ರಾ.ಪಂ‌ ವ್ಯಾಪ್ತಿಯ ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮದಲ್ಲಿ ನಡೆದ ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬುಧವಾರ ರಾತ್ರಿ ಕೋಟತಟ್ಟು ಕೊರಗ ಕಾಲನಿಗೆ ಭೇಟಿ ನೀಡಿದ ಅವರು ಕೊರಗ ಸಮುದಾಯದವರ ನೋವುಗಳನ್ನು ಆಲಿಸಿ ಘಟನೆಯ ಕುರಿತು ಮನಸ್ಸಿಗೆ ತುಂಬಾ ನೋವಾಗಿದೆ‌‌. ಎಲ್ಲವನ್ನೂ ಮರೆತು ನೆಮ್ಮದಿಯಿಂದಿರಿ ಸರ್ಕಾರ ನಿಮ್ಮ ಜೊತೆಗಿದೆ ಎಂದು ನೊಂದ ಕೊರಗರಿಗೆ ಧೈರ್ಯ ತುಂಬಿದ್ದಾರೆ.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಕೊರಗರ ಕೇರಿ ಅನಾದಿ ಕಾಲದಿಂದಲೂ ಇದ್ದು ಇಲ್ಲಿಯ ಒಂಭತ್ತು ಕುಟುಂಬಗಳೊಂದಿಗೆ ನಾನು ಮತ್ತು ಊರಿನ ಜನರು ಭಾವನಾತ್ಮಕ ಸಂಬಂಧವನ್ನು ಇಟ್ಟುಕೊಂಡಿದ್ದೇವೆ. ನಾನು ಗ್ರಾಮ ಪಂಚಾಯತ್‌ ಸದಸ್ಯನಾಗಿದ್ದಾಗಿಂದಲೂ ಇಲ್ಲಿಯ ಕುಟುಂಬಗಳೊಂದಿಗೆ ಹಲವಾರು ಅಭಿವೃದ್ದಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಮೆಹಂದಿ ಕಾರ್ಯಕ್ರಮದಲ್ಲಿ ನಡೆದಿರುವ ಪೊಲೀಸ್‌ ದೌರ್ಜನ್ಯ ಹಿನ್ನಲೆಯಲ್ಲಿ ಈಗಾಗಲೇ ಹೇಳಿರುವಂತೆ ಪಿಎಸ್‌ಐ ಅವರನ್ನು ಅಮಾನತುಗೊಳಿಸಿ ಉಳಿದ ಏಳು ಮಂದಿ ಸಿಬ್ಬಂದಿಗಳನ್ನು ವರ್ಗಾವಣೆಗೊಳಿಸಲಾಗಿದೆ. ಜೊತೆಯಲ್ಲಿ ಇಡೀ ಪ್ರಕರಣವನ್ನು ಸಮಗ್ರವಾಗಿ ತನಿಖೆ ಮಾಡಲು ಸೂಚಿಸಿದ್ದೇನೆ ಎಂದರು.

ಇಲ್ಲಿನ ಕೊರಗ ಕುಟುಂಬಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಬೇಕು ಎನ್ನುವ ಬಹಳ ದಿನಗಳ ಬೇಡಿಕೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಎಲ್ಲಾ ಕುಟುಂಬಗಳಿಗೆ ಹಕ್ಕು ಪತ್ರದ ವಿಚಾರದಲ್ಲಿ ಸಮಸ್ಯೆ ಇದ್ದು ನಾಲ್ಕು ಜನರಿಗೆ ಕೂಡಲೇ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು. ಉಳಿದ ಐದು ಕುಟುಂಬಗಳಿಗೆ ಸಂಬಂಧಪಟ್ಟು ಭೂಸ್ವಾಧಿನ ಪ್ರಕ್ರಿಯೆ ನಡೆಸಿ ಅದಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವರು ಭರವಸೆ ನೀಡಿದರು‌.

ಪ್ರಕರಣದ‌ ತನಿಖೆ ಮುಗಿಯುವವರೆಗೂ ಪಿಎಸ್ಐ ಅವರನ್ನು ಅಮಾನತುಗೊಳಿಸಿದಂತೆ, ಉಳಿದ ಸಿಬ್ಬಂದಿಗಳನ್ನು ಅಮಾನತುಗೊಳಿಸಬೇಕು. ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ಹೊರ ಜಿಲ್ಲಾ ಅಧಿಕಾರಿಗಳಿಂದ ತನಿಖೆಯಾಗಬೇಕು. ಆದ್ದರಿಂದ ನಾಗರಿಕಾ ಹಕ್ಕು ಜಾರಿ ನಿರ್ದೇಶನಾಲಯದಿಂದ ತನಿಖೆಯಾಗಬೇಕು ಎಂದು ಮುಖಂಡರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ, ಕೊರಗ ಮುಖಂಡರಾದ ಗಣೇಶ್ ಕುಂಭಾಶಿ, ಗಣೇಶ್ ಬಾರ್ಕೂರು, ಶೇಖರ‌ ಮರವಂತೆ, ದ.ಸಂ.ಸ ಮುಖಂಡರಾದ ಉದಯ್ ಕುಮಾರ್ ತಲ್ಲೂರು, ಟಿ. ಮಂಜುನಾಥ ಗಿಳಿಯಾರ್, ಕೋಟತಟ್ಟು ಗ್ರಾ.ಪಂ‌ ಅಧ್ಯಕ್ಷೆ ಅಶ್ವಿನಿ, ಸದಸ್ಯರಾದ ಪ್ರಮೋದ್ ಹಂದೆ, ಪ್ರಕಾಶ ಹಂದಟ್ಟು, ಸತೀಶ್ ಕುಂದರ್, ವಾಸು ಪೂಜಾರಿ, ರಾಬರ್ಟ್ ರೋಡ್ರಿಗಸ್, ರವೀಂದ್ರ ತಿಂಗಳಾಯ, ಸರಸ್ವತಿ, ಜ್ಯೋತಿ, ವಿದ್ಯಾ ಎಸ್. ಸಾಲ್ಯಾನ್, ಸಾಯಿರಾ ಬಾನು, ಪೂಜಾ‌ ಹಂದಟ್ಟು, ನ್ಯಾಯವಾದಿ ಶ್ಯಾಮಸುಂದರ ನಾಯರಿ, ಸ್ಥಳೀಯರಾದ ರತ್ನಾಕರ ಬಾರಿಕೆರೆ, ರಂಜಿತ್ ಕುಮಾರ್ ಕೋಟ, ಪ್ರಸಾದ್ ಬಿಲ್ಲವ,  ಐಟಿಡಿಪಿ ಅಧಿಕಾರಿಗಳು ಇದ್ದರು.

Comments are closed.