ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ಸಮೀಪದ ಬೆನಕ ಹಾರ್ಡ್‌ವೇರ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಹೊತ್ತಿ ಉರಿದ ಪರಿಣಾಮ ಇಡೀ ಅಂಗಡಿ ಸುಟ್ಟು ಹೋದ ಘಟನೆ ಶನಿವಾರ ರಾತ್ರಿ ವೇಳೆ ಸಂಭವಿಸಿದೆ.
ಹಾರ್ಡ್‌ವೇರ್ ಮಾಲೀಕ ಹರೀಶ್ ಜೋಗಿ ಎಂದಿನಂತೆ ಸಂಜೆ 7 ಗಂಟೆ ಸುಮಾರಿಗೆ ಅಂಗಡಿ ಬಾಗಿಲು ಮುಚ್ಚಿ ಮನೆಗೆ ತೆರಳಿದ್ದರು. ಕೆಲ ಹೊತ್ತಿನ ಬಳಿಕ ಅಂಗಡಿಯ ಶಟರ್ ಮೂಲಕ ಹೊಗೆ ಹೊರಕ್ಕೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಸಂಶಯ ವ್ಯಕ್ತಪಡಿಸಿ ಕೂಡಲೇ ಶಟರ್ ಬಾಗಿಲು ತೆಗೆಯುವಷ್ಟರಲ್ಲಿ ಬೆಂಕಿಯ ತೀವ್ರತೆ ಇಡೀ ಅಂಗಡಿಗೆ ವ್ಯಾಪಿಸಿಕೊಂಡಿತ್ತು. ಶಾಪ್ ಒಳಗೆ ಪೈಂಟ್, ಟರ್ಪಂಟೈಲ್ ಮೊದಲಾದ ಆಯಿಲ್ ಬೇಸ್ಡ್ ವಸ್ತುಗಳಿದ್ದ ಕಾರಣ ಸಂಪೂರ್ಣ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲೇ ಅಂಗಡಿ ಸುಟ್ಟು ಕರಕಲಾಗಿ ಹೋಗಿದೆ.
ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಯಿತಾದರೂ ಅವರು ಬರುವಷ್ಟರಲ್ಲಿ ಅಂಗಡಿಯೊಳಗಿನ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿದೆ. ಸುಮಾರು ಒಂದು ಕೋಟಿಗೂ ಅಧಿಕ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ ಎಂದು ಅಂದಾಜಿಸಲಾಗಿದೆ.
ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ನಂಜಾ ನಾಯ್ಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
Comments are closed.