ಕರಾವಳಿ

ಜನರಿಗೆ ತೊಂದರೆ ಕೊಡಬೇಡಿ, ಕೆಲಸ ಮಾಡಲಾಗದಿದ್ದರೆ ವರ್ಗಾವಣೆ ತೆಗೆದುಕೊಳ್ಳಿ: ಶಾಸಕ ಸುಕುಮಾರ್ ಶೆಟ್ಟಿ (Video)

Pinterest LinkedIn Tumblr

ಕುಂದಾಪುರ: ತಮ್ಮ ಬಗ್ಗೆ ಹಲವು ದೂರುಗಳಿದೆ. ಇಲ್ಲಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ ವರ್ಗಾವಣೆ ತೆಗೆದುಕೊಂಡು ಬೇರೆಡೆ ಹೋಗಿ. ಸಾಮಾನ್ಯ ಜನರಿಗೆ ಉಪಕಾರ ಆಗುವಂತಹ ಕೆಲಸ ಮಾಡಿ. ಜನರಿಗೆ ತೊಂದರೆ ಕೊಟ್ಟರೆ ಸುಮ್ಮನೆ ಕೂರುವುದಿಲ್ಲ. ನೊಂದ ಜನರನ್ನು ಸೇರಿಸಿ ನಿಮ್ಮ ಕಚೇರಿಯಲ್ಲೇ ಕೂರುತ್ತೇನೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ‌.ಎಂ ಸುಕುಮಾರ್ ಶೆಟ್ಟಿ ಕುಂದಾಪುರ ತಹಶಿಲ್ದಾರ್ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಅವರು ಶನಿವಾರ ತಾ.ಪಂ. ಸಭಾಂಗಣದಲ್ಲಿ ನಡೆದ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಲ ಇಲಾಖೆಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಜಿ.ಪಂ. ಸದಸ್ಯ ರೋಹಿತ್ ಕುಮಾರ್ ಶೆಟ್ಟಿ ಮಾತನಾಡಿ, ಹೊಸಂಗಡಿಯಲ್ಲಿ ಅನೇಕ ಕುಟುಂಬಗಳಿಗೆ ಈ ಹಿಂದೆ ೯೪ ಸಿ ಹಕ್ಕುಪತ್ರ ನೀಡಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಪಹಣಿಪತ್ರ ನೀಡಲು ಇದೀಗ ಡೀಮ್ಡ್ ಫಾರೆಸ್ಟ್ ನೆಪ ಹೇಳಿ ರದ್ದತಿ ಮಾಡಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಲು ಮುಂದಾದ ತಹಸೀಲ್ದಾರ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ನಮಗೆ ನೀವು ಕಾರಣ ಕೊಡಬೇಡಿ. ಇದು ಕೇವಲ ಒಂದು ಕಡೆಯಲ್ಲ ಇಡೀ ಬೈಂದೂರು ಕ್ಷೇತ್ರದಲ್ಲಿ ಈ ಸಮಸ್ಯೆಯಿದೆ. ಎಷ್ಟು ದಿನದೊಳಗೆ ಸರಿಪಡಿಸಿ ಕೊಡುತ್ತೀರಿ ಎಂದು ಖಚಿತವಾಗಿ ಹೇಳಿ. ಅದನ್ನು ಬಿಟ್ಟು ಆಶ್ವಾಸನೆಯ ಮಾತುಗಳನ್ನಾಡಬೇಡಿ. ಒಂದು ತಿಂಗಳೊಳಗೆ ಈ ಸಮಸ್ಯೆಯನ್ನು ಪರಿಹರಿಸಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಆನಂದಪ್ಪ ನಾಯ್ಕ್, ತಾಂತ್ರಿಕ ಕಾರಣದಿಂದ ಈ ರೀತಿಯಾಗಿ ಆಗಿದೆ. ಒಂದು ತಿಂಗಳೊಳಗೆ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಕುಂದಾಪುರ ತಾ| ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಚಿತ್ವ ಕೊರತೆ..!
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡಲಾಗುತ್ತಿಲ್ಲ ಎಂಬ ಆರೋಪಗಳು ಮೊದಲಿನಿಂದಲೂ ಇದೆ. ವೈದ್ಯಾಧಿಕಾರಿಗಳ ವಿರುದ್ದ ಆರೋಪ ಮಾಡಿದರೆ ಅವರು ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ ವಿನಃ ಸರಿಪಡಿಸಿಕೊಳ್ಳುತ್ತಿಲ್ಲ ಎಂದು ಜಿ.ಪಂ ಸದಸ್ಯರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಾಧಿಕಾರಿ ಡಾ. ರಾಬರ್ಟ್ ಆಸ್ಪತ್ರೆಯಲ್ಲಿ ಎಲ್ಲವೂ ಸರಿಯಾಗಿದೆ. ಸ್ವಚ್ಛತೆಗೆ ಮೊದಲ ಆದ್ಯತೆ ಕೊಟ್ಟಿದ್ದೇವೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಸುಕುಮಾರ್ ಶೆಟ್ಟಿ, ನಿಮ್ಮ ಸಮರ್ಥನೆಯನ್ನು ಕೇಳಿ ಕೇಳಿ ಸಾಕಾಗಿದೆ. ಎರಡು ಬಾರಿ ವರ್ಗಾವಣೆಗೊಳಿಸಿದರೂ ಕೇವಿಯಟ್ ಹಾಕಿ ಅದನ್ನು ರದ್ದುಗೊಳಿಸಿ ಇಲ್ಲೇ ನೆಲೆಯೂರಿದ್ದೀರಿ. ಜಿ. ಶಂಕರ್ ಅಷ್ಟು ಚೆಂದವಾದ ಕಟ್ಟಡವನ್ನು ಕಟ್ಟಿ ಕೊಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿಲ್ಲ ಎಂದು ಸ್ವತಃ ಜಿ ಶಂಕರ್ ಅವರೇ ಕೊಲ್ಲೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ. ತಪ್ಪನ್ನು ಸರಿಪಡಿಸಿಕೊಂಡು ಹೋಗಿ ಎಂದು ಸೂಚಿಸಿದರು.

ತಾ. ಆಸ್ಪತ್ರೆಯೊಳಕ್ಕೆ ಮಾಧ್ಯಮಕ್ಕೆ ನಿರ್ಬಂಧ: ಆಕ್ರೋಶ
ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಡುಬಡತನದಲ್ಲಿರುವ ಕುಟುಂಬವೊಂದಕ್ಕೆ ಆರ್ಥಿಕ ನೆರವಿನ ಸುದ್ದಿಗೆ ಮುಂದಾದ ಕುಂದಾಪುರದ ಪತ್ರಕರ್ತರಿಗೆ ಅನುಮತಿ ಕೊಟ್ಟಿಲ್ಲ. ಮಾನವೀಯ ನೆಲೆಯಲ್ಲಾದರೂ ಅನುಮತಿ ಕೊಡಿ ಎಂದು ಪತ್ರಕರ್ತರು ಮನವಿ ಮಾಡಿಕೊಂಡರೂ ಪತ್ರಕರ್ತರನ್ನು ಹಾಗೆ ವಾಪಾಸು ಕಳುಹಿಸಲಾಗಿದೆ. ಬೇರೆಯವರಿಗೆ ತೊಂದರೆಯಾಗದಂತೆ ಪತ್ರಕರ್ತರಿಗೆ ಅವಕಾಶ ಮಾಡಿಕೊಡಬಹುದಿತ್ತು ಎಂದು ಜಿ.ಪಂ ಸದಸ್ಯ ರೋಹಿತ್ ಶೆಟ್ಟಿ ಹೇಳಿದರು. ಇದಕ್ಕೆ ಬೈಂದೂರು ತಾ.ಪಂ ಅಧ್ಯಕ್ಷ ಮಹೇಂದ್ರ ಪೂಜಾರಿ ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಾಧಿಕಾರಿ ಡಾ. ರಾಬರ್ಟ್ ಮೆಡಿಕಲ್ ಎಥಿಕ್ಸ್ ಪ್ರಕಾರ ಮಾಧ್ಯಮಗಳಿಗೆ ಆಸ್ಪತ್ರೆಯ ಒಳಗಡೆ ಚಿತ್ರೀಕರಣ ಮಾಡಲು ಅವಕಾಶ ಇಲ್ಲ ಎಂದರು. ಎಲ್ಲಾ ಕಡೆಗಳಲ್ಲಿ ಮಾಧ್ಯಮಗಳಿಗೆ ಅವಕಾಶ ಮಾಡಿಕೊಡುತ್ತಾರೆ. ಇಲ್ಲೇಕೆ ಅಂತಹ ನಿರ್ಬಂಧ. ಈ ಕುರಿತು ಸರ್ಕಾರದ ಸ್ಪಷ್ಟ ಸುತ್ತೋಲೆಗಳಿದ್ದರೆ ಕೊಡಿ. ನಿಮ್ಮ ತಪ್ಪುಗಳನ್ನು ಮರೆಮಾಚಲು ಮಾಧ್ಯಮಗಳಿಗೆ ನಿರ್ಬಂಧ ಹೇರುತ್ತಿದ್ದೀರಿ. ಇದು ಸರಿಯಾದ ನಡೆಯಲ್ಲ ಎಂದರು. ಶಾಸಕರು ಕೂಡ ಇದಕ್ಕೆ ಪ್ರತಿಕ್ರಿಸಿಯಿಸಿ ಈ ಕುರಿತ ಸುತ್ತೋಲೆ ಇದ್ದರೆ ನೀಡಿ ಎಂದರು. ಶಾಸಕ್ರು ಹಾಗೂ ಜನಪ್ರತಿನಿಧಿಗಳು ಕೇಳಿದ ಪ್ರತಿ ಪ್ರಶ್ನೆಗೂ ಅದು ವೈಯಕ್ತಿಕ ಹಿತಾಸಕ್ತಿಯಲ್ಲಿ ಮಾಡುತ್ತಿರುವ ಆರೋಪ ಎನ್ನುವ ಆಡಳಿತ ವೈದ್ಯಾಧಿಕಾರಿಗಳ ಸಮಜಾಯಿಷಿ ನಿಜಕ್ಕೂ ಹಾಸ್ಯಾಸ್ಪದವಾಗಿತ್ತು.

ಜಿ.ಪಂ. ಸದಸ್ಯರಾದ ಬಾಬು ಶೆಟ್ಟಿ, ಶ್ರೀಲತಾ ಸುರೇಶ್ ಶೆಟ್ಟಿ, ಗೌರಿ ದೇವಾಡಿಗ, ಶಂಕರ್ ಪೂಜಾರಿ, ಸುರೇಶ ಬಟವಾಡಿ, ತಾ.ಪಂ. ಸದಸ್ಯ ಪುಷ್ಪರಾಜ್ ಶೆಟ್ಟಿ ವಿವಿಧ ಸಮಸ್ಯೆಗಳು, ವಿಚಾರಗಳ ಕುರಿತಂತೆ ಮಾತನಾಡಿದರು.

ಈ ಸಂದರ್ಭದಲ್ಲಿ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ. ಪುತ್ರನ್, ಕುಂದಾಪುರ ತಾ.ಪಂ. ಅಧ್ಯಕ್ಷೆ ಇಂದಿರಾ ಶೆಟ್ಟಿ, ಉಪಾಧ್ಯಕ್ಷ ರಾಮ್ ಕಿಶನ್ ಹೆಗ್ಡೆ, ಬೈಂದೂರು ತಾ.ಪಂ. ಅಧ್ಯಕ್ಷ ಮಹೇಂದ್ರ ಪೂಜಾರಿ, ಉಪಾಧ್ಯಕ್ಷೆ ಮಾಲಿನಿ ಕೆ., ಕಾರ್‍ಯನಿರ್ವಹಣಾಧಿಕಾರಿಗಳಾದ ಕುಂದಾಪುರದ ಕೇಶವ ಶೆಟ್ಟಿಗಾರ್, ಬೈಂದೂರಿನ ಭಾರತಿ ಉಪಸ್ಥಿತರಿದ್ದರು.

Comments are closed.