ಕರಾವಳಿ

ಕೋವಿಡ್-19 ನಡುವೆ ನಡೆದ ಪ್ರಥಮ ಬ್ರಹ್ಮರಥೋತ್ಸವ- ಕೋಟೇಶ್ವರ ‘ಕೊಡಿ ಹಬ್ಬ’ ಸಂಪನ್ನ (Video)

Pinterest LinkedIn Tumblr

ಕುಂದಾಪುರ: ಕೊರೋನಾ ಸಂದಿಗ್ಧತೆಯ ಕಾಲಘಟ್ಟದ ನಡುವೆ ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಕೊಡಿ ಹಬ್ಬ ಸರಳವಾಗಿ ಸಾಂಪ್ರದಾಯಿಕ ವಿಜೃಂಭಣೆಯಿಂದ ಸೋಮವಾರ ಜರುಗಿತು. ಕೊಟೇಶ್ವರದ ಅಧಿದೇವ ಶ್ರೀ ಕೋಟಿಲಿಂಗೇಶ್ವರನ ವಾರ್ಷಿಕ ಬ್ರಹ್ಮರಥೋತ್ಸವವೇ ‘ಕೊಡಿಹಬ್ಬ’ ಎಂದು ಕರೆಯಲ್ಪಡುತ್ತಿದ್ದು ಈ ಬಾರಿ ಕೊರೋನಾ ಹಿನ್ನೆಲೆ ಪಾರಂಪರಿಕವಾಗಿ ಕೊಡಿಹಬ್ಬ ಸಂಪನ್ನಗೊಳಿಸಲಾಗಿದೆ.

ಸಾಂಪ್ರದಾಯಿಕ ಆಚರಣೆ…
ಕೊರೋನಾ ಹಿನ್ನೆಲೆ ಸರಕಾರದ ನಿಯಮಾವಳಿಯಂತೆ ಜಿಲ್ಲಾಡಳಿತ ಹಲವು ನಿಬಂಧನೆಗಳನ್ನು ಹಾಕಿತ್ತು. ಅಲ್ಲದೇ ವಾರಗಳ ಹಿಂದೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಕೂಡ ಸಭೆ ನಡೆಸಿ ಪರಂಪರಾಗತವಾಗಿ ಸರಳ ರೀತಿಯಲ್ಲಿ ಉತ್ಸವ ನಡೆಸಲು ಸೂಚಿಸಿದ್ದರು. ಹಬ್ಬದ ಪೂರ್ವಭಾವಿಯಾಗಿ ಕಟ್ಟೆ ಪೂಜೆ ಮೊದಲಾದ ಧಾರ್ಮಿಕ ಕಾರ್ಯಗಳು ದೇವಸ್ಥಾನದಲ್ಲಿ ಸಂಪ್ರದಾಯಬದ್ಧವಾಗಿ ನಡೆದವು. ಜಾತ್ರೆಗೆ ಆಗಮಿಸುವ ಭಕ್ತರು ಮಾಸ್ಕ್ ಧಾರಣೆ ಮಾಡಿದ್ದರು. ಸೋಮಮಾರ ಮಧ್ಯಾಹ್ನ 11.15 ಕ್ಕೆ ದೇವಸ್ಥಾನದಿಂದ ವೈಭವದ ಮೆರವಣಿಗೆಯಲ್ಲಿ ಬಂದ ಬಿದಿರಿನ ಕೊಡಿ, ತಾಂಡವೇಶ್ವರ ದೇವರು, ತ್ರಿಶೂಲ, ಗೋಳೆ ದೇವರು ಹಾಗೂ ಕೋಟಿಲಿಂಗೇಶ್ವರ ಉತ್ಸವ ಮೂರ್ತಿಗಳನ್ನು ಜಯಕಾರಗಳೊಂದಿಗೆ ಸ್ವಾಗತಿಸಲಾಯಿತು. ಬಿದಿರಿನ ಕೊಡಿಯನ್ನು ಮೊದಲು ರಥದ ಮೇಲಕ್ಕೆ ಕೊಂಡೊಯ್ಯುವ ಮೂಲಕ ರಥಾರೋಹಣಕ್ಕೆ ಚಾಲನೆ ನೀಡಲಾಯಿತು. ನಂತರ ತಾಂಡವೇಶ್ವರ ದೇವರು, ತ್ರಿಶೂಲ ಹಾಗೂ ಗೋಳೆ ದೇವರು ರಥದ ಮೇಲಕ್ಕೆ ಏರಿಸಲಾಯಿತು.ದೇವರ ಮೂರ್ತಿಗಳು ರಥವನ್ನು ಏರಿದ ಬಳಿಕ ಕೋಟಿಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ತಲೆ ಮೇಲಿರಿಸಿ ಚಂಡೆಗಳ ತಾಳಕ್ಕೆ ತಾಂಡವ ನರ್ತನದ ಮೂಲಕ ದೇವರೊಂದಿಗೆ ರಥದ ಮೇಲೇರಿದರು. ಉತ್ಸವ ಮೂರ್ತಿಯ ರಥಾರೋಹಣವಾದ ಬಳಿಕ ಮಂಗಳಾರತಿ, ಮೊದಲಾದ ಧಾರ್ಮಿಕ ಸೇವೆಗಳನ್ನು ಸಲ್ಲಿಸಲಾಯಿತು. ದೇವಸ್ಥಾನ ತಂತ್ರಿ ಪ್ರಸನ್ನ ಕುಮಾರ ಐತಾಳ್ ನೇತ್ರತ್ವದಲ್ಲಿ ಧಾರ್ಮಿಕ ವಿಧಿ ನೆರವೇರಿಸಲಾಯಿತು. ರಥೋತ್ಸವದ ವೇಳೆ ‘ಹರಹರ ಮಹಾದೇವ’ ಉದ್ಘಾರ ಭಕ್ತಾಧಿಗಳಲ್ಲಿ ಭಕ್ತಿ ಪರವಶಗೊಳ್ಳುವಂತೆ ಮಾಡಿತು.

ಸರಳತೆ ಒತ್ತು…ಹಲವು ಬದಲಿ ವ್ಯವಸ್ಥೆ….
ಈ ಬಾರಿ ಕೋಟಿತೀರ್ಥದಲ್ಲಿ ತೀರ್ಥ ಸಂಪ್ರೋಕ್ಷಣೆಗೆ ಅವಕಾಶವಿರಲಿಲ್ಲ. ಬದಲಾಗಿ ಕೋಟಿತೀರ್ಥದ ಸಮೀಪ ಬ್ಯಾರಿಕೇಡ್ ಇಟ್ಟು ಅಡ್ಡಗಟ್ಟಿ ಕೋಡಿತೀರ್ಥದ ಜಲವನ್ನು ದೊಡ್ಡ ಪಾತ್ರೆಯಲ್ಲಿ ತುಂಬಿಸಿಟ್ಟು ಕೈಕಾಲು ತೊಳೆಯಲು ಅನುಕೂಲ ಕಲ್ಪಿಸಲಾಗಿತ್ತು. ಅಲ್ಲಿಯೇ ಸಮೀಪ ದೊಡ್ಡ ಪ್ಲಾಸ್ಟಿಕ್ ಬಕೇಟ್ ಇಟ್ಟು ಸುತ್ತಕ್ಕಿ ಸೇವೆ ಸಮರ್ಪಣೆಗೆ ಅವಕಾಶ ಕಲ್ಪಿಸಲಾಗಿತ್ತು. ಕಬ್ಬಿನ ಮಾರಾಟವೂ ಅತ್ಯಂತ ಕಡಿಮೆ ಪ್ರಮಾಣದಲ್ಲಿತ್ತು. ದೇವಸ್ಥಾನದ ಒಳಗೆ ಸರತಿ ಸಾಲಿಗೆ ಅವಕಾಶ ಕಲ್ಪಿಸಲಾಗಿತ್ತು. ಸ್ವಯಂ ಸೇವಕರು, ಪೊಲೀಸರು ಸುವ್ಯವಸ್ಥೆ ಪಾಲನೆಗೆ ಸಹಕರಿಸಿದರು.

ಅಂಗಡಿಗಳಿಲ್ಲ…ರಥೋತ್ಸವ ಸಂದರ್ಭ ಜನದಟ್ಟಣೆ..!
ಕೊರೋನಾ ಹಿನ್ನೆಲೆ ಕಬ್ಬು ವ್ಯಾಪಾರಕ್ಕೆ ಸೀಮಿತಗೊಳಿಸಿ ಬೇರ್ಯಾವುದೇ ಅಂಗಡಿಗಳನ್ನು ಇಡದಂತೆ ಸೂಚಿಸಲಾಗಿತ್ತು. ಕೊಡಿ ಹಬ್ಬದಲ್ಲಿ ನವ ಜೋಡಿ ಕಬ್ಬು ಮನೆಗೆ ಕೊಂಡೊಯ್ಯುವ ಪಾರಂಪರಿಕ ಸಂಪ್ರದಾಯವಿದ್ದ ಹಿನ್ನೆಲೆ ಅದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಉಳಿದಂತೆ ಕೋಟೇಶ್ವರ ಪೇಟೆಯಲ್ಲಿನ ನಿತ್ಯ ತೆರೆಯುವ ಅಂಗಡಿಗಳನ್ನು ಹೊರತುಪಡಿಸಿ ಜಾತ್ರೆಗೆ ಬರುವ ಯಾವುದೇ ಅಂಗಡಿಗಳಿರಲಿಲ್ಲ. ಕೋಟೇಶ್ವರ ಜಾತ್ರೆ ಜಿಲ್ಲೆಯಲ್ಲೇ ನಡೆಯುವ ಅತೀ ದೊಡ್ಡ ಜಾತ್ರೆಗಳಲ್ಲಿ ಪ್ರಮುಖವಾಗಿದ್ದು ವಾರಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆಟಿಕೆಗಳ ಮಳಿಗೆ, ಸಿಹಿತಿಂಡಿ ಅಂಗಡಿ, ಫ್ಯಾನ್ಸಿ, ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರು ಆಡಬಹುದಾದ ಆಟದ ಉಪಕರಣಗಳು (ಜಾಯಿಂಟ್ ವೀಲ್ ಮೊದಲಾದವುಗಳು), ಬಟ್ಟೆ, ಚಪ್ಪಲಿ ಅಂಗಡಿಗಳು ಇಡೀ ಪೇಟೆಯಲ್ಲಿ ಬೀಡುಬಿಟ್ಟು ವ್ಯಾಪಾರ ನಡೆಸುತ್ತಿದ್ದರು. ಹಬ್ಬದ ಮಾರನೇ ದಿನ ವ್ಯಾಪಾರಕ್ಕೆಂದೆ ಇತರ ಸಮುದಾಯದ ಮಂದಿ ಜಾತ್ರೆಗೆ ಬರುವ ಪರಿಪಾಠವೂ ಇತ್ತು. ಆದರೆ ಈ ಬಾರಿ ಜಾತ್ರೆಗೆ ಮಾರಾಟ ಮಳಿಗೆಗಳು ಇರಲಿಲ್ಲ. ಆಗಮಿಸುವ ಭಕ್ತರು ದೇವರ ದರ್ಶನ ಪಡೆದು ವಾಪಾಸ್ಸಾಗುತ್ತಿದ್ದ ದೃಶ್ಯ ಕಂಡುಬಂತು. ಪ್ರತಿ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೆಳಿಗ್ಗೆನಿಂದ ರಥೋತ್ಸವ ಸಂದರ್ಭ ಆಗಮಿಸಿದ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡಿತ್ತು‌. ಆದರೆ ಮಧ್ಯಾಹ್ನದ ರಥೋತ್ಸವದ ವೇಳೆ ಒಮ್ಮೆಗೆ ಜನದಟ್ಟಣೆಯಾಗಿದ್ದು ಬಳಿಕ ಕಡಿಮೆಯಾಗಿತ್ತು.

ನೀರಸವಾದ ಜಾತ್ರೆ…ಜನರಿಂದ ಅಸಮಾಧಾನ..!
ಪ್ರಸಿದ್ಧವಾದ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವೈಭವದ ಬ್ರಹ್ಮ ರಥೋತ್ಸವದಲ್ಲಿ ಪ್ರತಿವರ್ಷವೂ ಅತ್ಯಾಕರ್ಷಣೀಯವಾಗಿರುವುದು ವಿದ್ಯುತ್ ದೀಪಾಲಂಕಾರ ಮತ್ತು ಕಟ್ಟೇ ಫ್ರೆಂಡ್ಸ್ ಹಾಗೂ ಸಂಘಟನೆಗಳು ಮಾಡುವ ವಿವಿಧ ಕಲಾಕೃತಿಗಳು. ಆದರೆ ಈ ಬಾರಿ ಅಂತಹ ಯಾವುದೇ ಆಕರ್ಷಣೆಯಿರಲಿಲ್ಲ. ಮೂರು ದಿನಗಳ ಕಾಲ ಅಲ್ಲಲ್ಲಿ ನಡೆಯುತ್ತಿದ್ದ ಮನೋರಂಜನಾ ಸಾಂಸ್ಕ್ರತಿಕ ಕಾರ್ಯಕ್ರಮಗಳು ಇಲ್ಲದ ಹಿನ್ನೆಲೆ ಜನರಲ್ಲಿ ಜಾತ್ರಾ ಉತ್ಸವ ಇರಲಿಲ್ಲ. ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಿಗಿಲ್ಲದ ಕೆಲವು ಕೋವಿಡ್ ನಿಯಮಾವಳಿಗಳು ಧಾರ್ಮಿಕ ವ್ಯವಸ್ಥೆಗಳಿಗೆ ಹೇರಿಕೆ ಮಾಡುವುದು ಎಷ್ಟು ಸರಿ? ಎಂಬ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬಂದವು.

ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಪ್ರಭಾರ ಆಡಳಿತಾಧಿಕಾರಿ ರಾಘವೇಂದ್ರ, ವ್ಯವಸ್ಥಾಪನಾ ಸಮಿತಿಯ ಮಾಜಿ ಪದಾಧಿಕಾರಿಗಳು, ಊರಪರವೂರ ಭಕ್ತರು ಉತ್ಸವ ಅಚ್ಚುಕಟ್ಟಾಗಿ ನಡೆಯಲು ಸಹಕಾರ ನೀಡಿದರು. ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ಮಾರ್ಗದರ್ಶನದಲ್ಲಿ ಕುಂದಾಪುರ ನಗರ ಠಾಣೆ ಪ್ರಭಾರ ಪಿಎಸ್ಐ ಸುಬ್ಬಣ್ಣ, ಗ್ರಾಮಾಂತರ ಠಾಣೆ ಪಿಎಸ್ಐ ರಾಜಕುಮಾರ್, ಅಪರಾಧ ವಿಭಾಗದ ಪಿಎಸ್ಐ ಸುಧಾ ಪ್ರಭು, ಕೊಲ್ಲೂರು ಠಾಣೆಯ ಪಿಎಸ್ಐ ಮಹಾದೇವ ಬೋಸ್ಲೆ ಹಾಗೂ ವಿವಿಧ ಠಾಣೆಯ ಸಿಬ್ಬಂದಿಗಳು ಬಂದೋಬಸ್ತ್ ಏರ್ಪಡಿಸಿದ್ದು ಕುಂದಾ ಸಂಚಾರಿ ಠಾಣೆ ಪಿಎಸ್ಐ ಸುದರ್ಶನ್ ಹಾಗೂ ಸಿಬ್ಬಂದಿಗಳು ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು.

ಕೊಡಿ ಹಬ್ಬದ ಹಿನ್ನೆಲೆ…..
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಪ್ತಕ್ಷೇತ್ರಗಳಲ್ಲಿ ಒಂದಾಗಿರುವ ಇತಿಹಾಸ ಪ್ರಸಿದ್ಧ ಕುಂದಾಪುರ ತಾಲೂಕಿನ ಕೋಟೇಶ್ವರದ ಮಹತೋಬಾರ ಕೋಟಿಲಿಂಗೇಶ್ವರ ದೇವಸ್ಥಾನ ಹಲವಾರು ಶತಮಾನಗಳಷ್ಟು ಪುರಾತನವಾದ ದೇವಳಗಳಲ್ಲಿ ಒಂದಾಗಿದೆ. ಇಲ್ಲಿ ನಡೆಯುವ ಕೊಡಿ ಹಬ್ಬದ ಉತ್ಸವದ ಹಿಂದೆ ಪರಂಪರಾನುಗತ ನಂಬಿಕೆ ಇದೆ. ವ್ಯವಹಾರಸ್ಥರಿಗೆ ಹೊಸ ಲೆಕ್ಕಚಾರ ಪ್ರಾರಂಭವಾಗಿ ಅಭಿವೃದ್ಧಿಯ ಕುಡಿಯೊಡೆಯುತ್ತದೆ, ಅವಿವಾಹಿತರಿಗೆ ಬಾಳಜೋಡಿ ಸಿಗುತ್ತದೆ, ನವ ವಿವಾಹಿತರಿಗೆ ಕರುಳ ಕುಡಿ ಚಿಗುರಿ ಸಂತಸ ಚಿಮ್ಮುತ್ತದೆ, ಕೃಷಿಕರಿಗೆ ಫಸಲು ತುಂಬಿ ಸಮೃದ್ಧಿಯ ಕುಡಿ ಮೊಳೆಯುತ್ತದೆ ಎಂಬ ನಂಬಿಕೆಯೇ ಜಿಲ್ಲೆಯ ಈ ಅತಿದೊಡ್ಡ ರಥೋತ್ಸವಕ್ಕೆ ‘ಕೊಡಿಹಬ್ಬ’ ಎಂದು ಹೆಸರು ಬಂದಿದೆ. ಇನ್ನು ರಥೋತ್ಸವದ ಮೊದಲು ಮಧ್ಯಾಹ್ನದ ಸುಮಾರಿಗೆ ದೇವಳದ ಎದುರಿಗಿನ ಬ್ರಹ್ಮರಥದ ಮೇಲೆ ಗರುಡ ಪಕ್ಷಿ ಮೂರು ಸುತ್ತು ಸುತ್ತುತ್ತದೆ, ಇದು ಜಾತ್ರೆಯ ಆರಂಭಕ್ಕೆ ಶುಭ ಸೂಚನೆ ಎಂಬ ನಿಟ್ಟಿನಲ್ಲಿ ರಥೋತ್ಸವ ಆರಂಭಗೊಳ್ಳುತ್ತದೆ. ಅಲ್ಲದೇ ರಾಜ್ಯದ ಪ್ರಮುಖ ದೊಡ್ದ ಗಾತ್ರದ ರಥಗಳಲ್ಲಿ ಕೋಟೇಶ್ವರದ ಈ ರಥವೂ ಒಂದು. ಈ ಬ್ರಹತ್ ಗಾತ್ರದ ಬ್ರಹ್ಮ ರಥದಲ್ಲಿ ವಿವಿಧ ಶಿಲ್ಪ ಕಲೆಯ ಕೆತ್ತನೆಗಳು ರಚಿಸಲ್ಪಟ್ಟಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.