ಕರಾವಳಿ

ಕೊಡೇರಿಯಲ್ಲಿ ಮೀನುಗಾರರ ಜಟಾಪಟಿ; ಪೊಲೀಸರು ಬೀಸಿದ್ರು ಲಾಠಿ..! (Video)

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ಸಮೀಪದ ಕೊಡೇರಿ ಕಿರುಬಂದರಿನಲ್ಲಿ ಮೀನು ಹರಾಜು ಪ್ರಕ್ರಿಯೆ ವಿಚಾರದಲ್ಲಿ ಉಪ್ಪುಂದ ಹಾಗೂ ಕೊಡೇರಿ ಭಾಗದ ಮೀನುಗಾರರ ಸಂಘರ್ಷ ಬೀದಿಗೆ ಬಿದ್ದಿದ್ದು ಎರಡು ಗುಂಪುಗಳು ‘ಜಲ ಯುದ್ಧ’ಕ್ಕೆ ಮುಂದಾಗಿದ್ದು ಪೊಲೀಸರು ಲಾಠಿ  ಬಳಸಿ ಇತ್ತಂಡಗಳನ್ನು ಚದುರಿಸಿದರು. ಪೊಲೀಸರ ಸಮಯೋಚಿತ ಕಾರ್ಯದಿಂದ ಬಾರೀ ಅನಾಹುತ ತಪ್ಪಿದೆ.  ಈ ಘಟನೆ ಶನಿವಾರ ಸಂಜೆ ಕೊಡೇರಿಯಲ್ಲಿ ನಡೆದಿದೆ.

ಮೀನು ಹರಾಜು ಪ್ರಾಂಗಣವನ್ನು ಕೊಡೇರಿ ಪಶ್ಚಿಮ ಭಾಗದಲ್ಲಿ ಮಾಡಿದ್ದು ಸರಿಯಲ್ಲ. ಸಮಪರ್ಕ ರಸ್ತೆಯಿಲ್ಲ, ಮೀನು ಹರಾಜು ಕೇಂದ್ರದಲ್ಲಿ ಮೂಲಸೌಕರ್ಯ ವ್ಯವಸ್ಥೆ ಇಲ್ಲ. ಕೊಡೇರಿ ಮೀನುಗಾರರು ಈ ಭಾಗಕ್ಕೆ ಬರಬೇಕಾದರೆ ಕೊಂಕಣ ಸುತ್ತಿ ಮೈಲಾರಕ್ಕೆ ಬರಬೇಕಿದ್ದು ಸೇತುವೆ ವ್ಯವಸ್ಥೆಯಿಲ್ಲ. ಇದೆಲ್ಲಾ ಸರಿಯಾಗುವರೆಗೆ ಮೀನು ಹರಾಜಿಗೆ ಅವಕಾಶ ಕೊಡಬಾರ್ದು ಎಂದು ಕೊಡೇರಿ ಭಾಗದ ಮೀನುಗಾರರು ಪ್ರತಿಭಟನೆಗೆ ಮುಂದಾಗಿದ್ದರು. ಉಪ್ಪುಂದ ಭಾಗ ಮೀನುಗಾರರು ಮೀನುಗಾರಿಕೆಗೆ ತೆರಳಿ ಮಧ್ಯಾಹ್ನ ವಾಪಾಸ್ ಕೊಡೇರಿ ಮೀನುಗಾರಿಕಾ ಹರಾಜು ಪ್ರಾಂಗಣ (ದಕ್ಕೆ)ಗೆ ಬರುವಾಗ ಕೊಡೇರಿ ಮೀನುಗಾರರು ತಮ್ಮ ದೋಣಿಗಳನ್ನು ಅಡ್ಡವಿಟ್ಟು ಮೀನುಗಾರಿಕೆಗೆ ತೆರಳಿ ವಾಪಾಸಾಗುತ್ತಿದ್ದ 350 ದೋಣಿಗಳಿಗೆ ಕೊಡೇರಿ‌ ಅಳಿವೆ ಸಮೀಪ ದಿಗ್ಬಂಧನ ಹಾಕಿದರು. ಅಂದಾಜು ಐದೂವರೆ ಗಂಟೆ ಹೊತ್ತು ಈ ಪ್ರಹಸನ ನಡೆದಿತ್ತು. ಸ್ಥಳದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗುತ್ತಲೇ ಪೊಲೀಸರು ತಂಡೋಪತಂಡವಾಗಿ ಸ್ಥಳದಲ್ಲಿ ಜಮಾಯಿಸಿ ಸಾಕಷ್ಟು ಮನವೊಲಿಕೆಗೆ ಯತ್ನಿಸಿದರು. ಖುದ್ದು ಬೈಂದೂರು ತಹಶಿಲ್ದಾರ್ ಕೂಡ ಮನವೊಲಿಕೆಗೆ ಯತ್ನಿಸಿದರು.

ಸಂಜೆ ಬಳಿಕ ಯಾವುದೇ ರಾಜಿ ತೀರ್ಮಾನವೂ ಆಗದೇ ಇದ್ದು ಇತ್ತ ಕಡೆ ತಮ್ಮ ದೋಣಿಗಳಲ್ಲಿದ್ದ ಮೀನನ್ನು ಖಾಲಿ ಮಾಡಲು ಅವಕಾಶವೂ ಸಿಗದಿದ್ದಾಗ ಮೀನುಗಾರರು ನುಗ್ಗುವ ನಿರ್ಧಾರವನ್ನು ಮಾಡಿ ತಮ್ಮ ದೋಣಿಗಳನ್ನು ಮುಂದಕ್ಕೆ ಚಲಾಯಿಸಿ ತಂದರು. ಬಳಿಕ ವಿದ್ಯಮಾನದಲ್ಲಿ ಇತ್ತಂಡಗಳ ನಡುವೆ ಸಂಘರ್ಷ ನಡೆಯುವ ಸಾಧ್ಯತೆಯಿದ್ದಿದ್ದು ಪೊಲೀಸರ ಮುಂಜಾಗ್ರತೆಯಿಂದ ಎಲ್ಲವೂ ತಪ್ಪಿ ಮೀನುಗಾರಿಕೆಗೆ ತೆರಳಿದ ದೋಣಿಗಳು ದಕ್ಕೆ ತೆರಳಿ ಮೀನುಗಳನ್ನು ಖಾಲಿ ಮಾಡಲಾಯಿತು. ಆದರೆ ಈ ವೇಳೆ ಇತ್ತಂಡಗಳ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಚದುರಿಸುವ ಕಾರ್ಯವನ್ನು ಮಾಡಿದರು.

ಪೊಲೀಸ್ ಬಿಗು ಭದ್ರತೆ…
ಉಡುಪಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ,ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಕುಂದಾಪುರ ಸಿಪಿಐ ಗೋಪಿಕೃಷ್ಣ, ಬೈಂದೂರು ಪಿಎಸ್ಐ ಸಂಗೀತಾ ಸೇರಿದಂತೆ ವಿವಿಧ ಠಾಣೆಯ ನೂರಾರು‌ ಪೊಲೀಸರು ಉಪಸ್ಥಿತರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

 

Comments are closed.