
ಮಂಗಳೂರು: ಯುವಕನೋರ್ವ ತನ್ನ ಮೇಲೆ ದಿನನಿತ್ಯಾ ದೌರ್ಜನ್ಯ ನಡೆಸುತ್ತಿದ್ದಾನೆ ಎಂದು ಆರೋಪಿಸಿ ಯುವಕನ ವಿರುದ್ಧ ದೂರು ನೀಡಲು ಬಂದ ಅಪ್ರಾಪ್ತೆ ಬಾಲಕಿಯ ಮೇಲೆಯೇ ಮಹಿಳಾ ಪೊಲೀಸರು ಹಲ್ಲೆ ನಡೆಸಿರುವ ಘಟನೆ ಮಂಗಳೂರು ಹೊರವಲಯದಲ್ಲಿ ನಡೆದಿದ್ದು, ಇದೀಗ ಹಲ್ಲೆ ಮಾಡಿದ್ದಾರೆ ಎನ್ನಲಾದ ಅ ಮೂವರು ಮಹಿಳಾ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾದ ಬಗ್ಗೆ ವರದಿಯಾಗಿದೆ.
ಮಂಗಳೂರಿನ ಹೊರವಲಯದ ಗಂಜಿಮಠದ ಈ ಅಪ್ರಾಪ್ತೆ ಬಾಲಕಿಯನ್ನು ಮೂಡಬಿದ್ರೆಯ ಯುವಕನೋರ್ವ ಪ್ರೀತಿಸುತ್ತಿದ್ದ. ಅತನ ಪರಿಚಯ ಇರುವ ಹಿನ್ನೆಲೆಯಲ್ಲಿ ಈ ಹುಡುಗಿ ಅ ಹುಡುಗನ ಜೊತೆ ಮಾತನಾಡುತ್ತಿದ್ದಳು.
ಆದರೆ ಈ ಹುಡುಗ ಈ ಹುಡುಗಿಗೆ ಪ್ರತಿದಿನ ಫೋನ್ ಮಾಡಿ ಟಾರ್ಚರ್ ಕೊಡುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಹೆತ್ತವರೊಂದಿಗೆ ಬಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ನೀಡಿದ್ದಳು.

ಈ ವೇಳೆ ಅ ಹುಡುಗನನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಅತನ ಬಳಿ ಈ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಬಳಿಕ ಯುವಕನ ವಿರುದ್ಧ ಪ್ರಕರಣ ದಾಖಲಿಸುವ ಬದಲು ಬಜ್ಪೆ ಪೊಲೀಸ್ ಠಾಣೆಯ ಪೊಲೀಸರು ದೂರು ದಾಖಲಿಸಿಕೊಳ್ಳದೆ, ದೂರು ನೀಡಲು ಬಂದಿದ್ದ ಆಕೆಯನ್ನು ವಿಚಾರಣೆ ನಡೆಸುವ ನೆಪದಲ್ಲಿ ಮಹಿಳಾ ಪೊಲೀಸರು ಲಾಠಿಯಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂಬ ಆರೋಪ ಮಾಡಲಾಗಿದೆ.
ಮೂವರು ಮಹಿಳಾ ಪೊಲೀಸರು ಕೈ, ಸೊಂಟ ಹಾಗೂ ಕಾಲಿನ ಅಡಿಭಾಗಕ್ಕೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ರಕ್ತ ಹೆಪ್ಪುಗಟ್ಟಿದೆ ಎಂದು ಆರೋಪಿಸಲಾಗಿದ್ದು, ಪೊಲೀಸರ ಲಾಟಿ ಏಟಿನಿಂದ ಗಂಭೀರ ಗಾಯಗೊಂಡಿರುವ ಅಪ್ರಾಪ್ತೆ ಬಾಲಕಿ ಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಈ ಮಾಹಿತಿ ತಿಳಿದ ದ.ಕ.ಜಿಲ್ಲಾ ಕಾಂಗ್ರೆಸ್ ಘಟಕದ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ಸದಸ್ಯರ ನಿಯೋಗ ಬಾಲಕಿ ದಾಖಲಾಗಿರುವ ಆಸ್ಪತ್ರೆಗೆ ತೆರಳಿ ಬಾಲಕಿಯನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದು, ಹಲ್ಲೆ ನಡೆಸಿರುವ ತಪ್ಪಿತಸ್ಥ ಪೊಲೀಸರ ವಿರುದ್ದ ಕ್ರಮಕೈಗೊಳ್ಳುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ಈ ಬಳಿಕ ಅಪ್ರಾಪ್ತೆ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದ ಮೂವರು ಮಹಿಳಾ ಪೊಲೀಸರ ವಿರುದ್ಧ ಮಂಗಳೂರಿನ ಪಾಂಡೇಶ್ವರದಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.
ಆರೋಪ ಮಾಡಲಾಗಿರುವ ಮೂವರು ಮಹಿಳಾ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಹಿಳಾ ಠಾಣೆಯ ಇನ್ಸ್ ಪೆಕ್ಟರ್ ತನಿಖೆ ನಡೆಸುತ್ತಾರೆ. ವಿಚಾರಣೆ ನಡೆಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ತನಿಖೆ ನಡೆಸಿ ತಪ್ಪಿದ್ದರೆ ಆಡಳಿತಾತ್ಮಕ ಕ್ರಮಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
Comments are closed.