ಕರಾವಳಿ

ಕೊರೋನಾ ಭೀತಿಯ ನಡುವೆ ಗಣೇಶ ಚತುರ್ಥಿ: ಆನೆಗುಡ್ಡೆಯಲ್ಲಿ ಭಕ್ತರ ದಂಡು (Video)

Pinterest LinkedIn Tumblr

ಕುಂದಾಪುರ: ಕೊರೋನಾ ಭೀತಿಯ ನಡುವೆಯೂ ಗಣೇಶ ಚತುರ್ಥಿ ಸಂಭ್ರಮದಿಂದ ನಡೆಯುತ್ತಿದ್ದು ಭಕ್ತರು ಸಂಕಷ್ಟಹರ ವಿನಾಯಕನ ಪೂಜೆಯಲ್ಲಿ ನಿರತರಾಗಿದ್ದಾರೆ.

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಭಕ್ತರ ದಂಡು ಹೆಚ್ಚಿದೆ. ಬೆಳಿಗ್ಗೆನಿಂದಲೇ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಗಣಪನ ದರ್ಶನಕ್ಕೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ. ಅರ್ಚಕರಿಂದ ವಿಶೇಷ ಪೂಜೆಗಳು ನಡೆಸಲಾಗಿದ್ದು ಭಕ್ತರಿಗೆ ಯಾವುದೇ ಸೇವೆಗೆ ಅವಕಾಶವಿರಲಿಲ್ಲ. ಹಣ್ಣು ಕಾಯಿ, ಅನ್ನ ಪ್ರಸಾದ ವ್ಯವಸ್ಥೆಯಿರಲಿಲ್ಲ.

ಆಗಮಿಸುವ ಭಕ್ತರಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಡೆಸಿ ದೇವಾಲಯದೊಳಕ್ಕೆ ಪ್ರವೇಶ ನೀಡಲಾಗುತ್ತಿತ್ತು. ಮಧ್ಯಾಹ್ನದವರೆಗೂ ಸಾವಿರಾರು ಮಂದಿ ಆನೆಗುಡ್ಡೆಗೆ ಆಗಮಿಸಿ ದೇವರ ದರ್ಶನ ಪಡೆದರು. ಮಾಜಿ ಸಚಿವ ಜೀವರಾಜ್, ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರರ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ ಮೊದಲಾದ ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿದರು.

ಉಡುಪಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ದೇವಳಕ್ಕೆ ಆಗಮಿಸಿದರು. ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಕುಂದಾಪುರ ನಗರ ಹಾಗೂ ಟ್ರಾಫಿಕ್ ಪೊಲೀಸರು ಭದ್ರತೆ ಹಾಗೂ ಟ್ರಾಫಿಕ್ ವ್ಯವಸ್ಥೆ ಸುಗಮಗೊಳಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.