ಕರಾವಳಿ

ಮತ್ತೆಮತ್ತೆ ಕೆರೆಯಂತಾಗುತ್ತಿದೆ ಕುಂದಾಪುರ ಹೈವೇ; ಆದೇಶ, ಆಗ್ರಹಕ್ಕೆ ಕ್ಯಾರೇ ಅಂತಿಲ್ಲ ಸಂಬಂದಪಟ್ಟವರು..!(Video)

Pinterest LinkedIn Tumblr

ಕುಂದಾಪುರ: ಚತುಷ್ಪತ ಕಾಮಗಾರಿಯಿಂದ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಶಾಸ್ತ್ರಿ ಪಾರ್ಕ್ ಬಳಿಯಿಂದ ವಿನಾಯಕ ಕೋಡಿ ಜಂಕ್ಷನ್ ತನಕ ರಾಡಿಯೆದ್ದು ಹೋಗಿದ್ದು ಕ್ರತಕ ಕೆರೆ ಸ್ರಷ್ಟಿಯಾಗುತಿದೆ. ಮಳೆ ಹೆಚ್ಚಾದರೆ ಇಲ್ಲಿನ ಹೆದ್ದಾರಿ ಅಕ್ಷರಶಃ ಕೆರೆಯಾಗಿಯೇ ಮಾರ್ಪಾಟಾಗುತ್ತಿದ್ದು ಮದ್ಯೆಮದ್ಯೆ ಹೊಂಡಗುಂಡಿ ನಿರ್ಮಾಣವಾಗಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ.

ಮತ್ತೆ ಕೆರೆಯಾದ ಹೆದ್ದಾರಿ!
ಶನಿವಾರ ಈ ಸಮಸ್ಯೆಯಿಂದ ಇಡೀ ದಿನ ವಾಹನ ದಟ್ಟಣೆ ಹೆಚ್ಚಿ ಕಿಲೋಮೀಟರುಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಶನಿವಾರ ಬೆಳಿಗ್ಗೆ ಕುಂದಾಪುರಕ್ಕೆ ಮೀನುಗಾರಿಕೆ ಇಲಾಖೆ ಕಾರ್ಯಕ್ರಮಕ್ಕೆ ಬಂದ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರು ಅಡ್ಡಗಟ್ಟಿದ ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯವರು ಹಾಗೂ ಸ್ಥಳಿಯ ಆಟೋ ಚಾಲಕರು ಆಕ್ರೋಷ ವ್ಯಕ್ತಪಡಿಸಿದ್ದರು. ಸ್ಥಳದಲ್ಲೇ ಸಚಿವ ಕೋಟ ಉಡುಪಿ ಜಿಲ್ಲಾಧಿಕಾರಿಯವರಿಗೆ ಫೋನಾಯಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲು ತಿಳಿಸಿದ್ದರು. ಅದರಂತೆಯೇ ಶನಿವಾರ ಮಧ್ಯಾಹ್ನದ ಬಳಿಕ ಡಿಸಿ ಆದೇಶದ ಹಿನ್ನೆಲೆ ಕುಂದಾಪುರ ಎಸಿ ಕೆ. ರಾಜು, ತಹಶಿಲ್ದಾರ್ ಆನಂದಪ್ಪ ಸೇರಿದಂತೆ ಸಂಬಂದಪಟ್ಟ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಸಂಬಂದಪಟ್ಟ ಗುತ್ತಿಗೆ ಕಂಪೆನಿಯಾದ ನವಯುಗದವರು ನೀರು ಹರಿವಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ್ದು ಕಣ್ಣಿಗೆ ಮಣ್ಣೆರೆಚುವಂತೆ ಆಗಿದೆ ಆ ಕಾಮಗಾರಿ.

ಇಂದು ಅದೇ ಸಮಸ್ಯೆ..!
ವಿನಾಯಕ ಜಂಕ್ಷನ್ ಬಳಿ ಟಿಟಿ ರಸ್ತೆಯ ಎದುರಿನ ಮತ್ತೊಂದು ಭಾಗದ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನದಿಂದ ಮತ್ತೆ ಕ್ರತಕ ಕೆರೆ ನಿರ್ಮಾಣವಾಗಿ ವಾಹನ ಸಂಚಾರ ದುಸ್ಥರವಾಗಿತ್ತು. ಅಷ್ಟೇ ಅಲ್ಲದೇ ದೊಡ್ಡದೊಡ್ಡ ಹೊಂಡಗಳು ರಸ್ತೆಯಲ್ಲಿ ಸ್ರಷ್ಟಿಯಾಗಿದ್ದು ಶನಿವಾರದ ಯಥಾಸ್ಥಿತಿ ಮರುಕಳಿಸಿದೆ.

NHAI ಅಧಿಕಾರಿಗಳಿಗೆ ಉಡುಪಿ ಡಿಸಿ ಸೂಚನೆ
ಭಾನುವಾರ ಸ್ಥಳಕ್ಕೆ ಉಡುಪಿ ಡಿಸಿ ಜಿ. ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ರಾಷ್ಟ್ರೀಯ ಹೆದ್ದಾರಿ‌ ಪ್ರಾಧಿಕಾರ ಅಧಿಕಾರಿಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿಗಳು ವಾಹನ ಸವಾರರಿಗೆ ಅನಾನುಕೂಲವಾಗಬಾರದು, ತಕ್ಷಣ ಸಮಸ್ಯೆ ಪರಿಹಾರ ಮಾಡಬೇಕು ಎಂದು ಸೂಚನೆ ನೀಡಿದರು. ಈ ಸಂದರ್ಭ ಕುಂದಾಪುರ ಎಸಿ ಕೆ. ರಾಜು, ಸಿಪಿಐ ಗೋಪಿಕೃಷ್ಣ ಮೊದಲಾದವರಿದ್ದರು.

ಒಂದೆಡೆ ಜನಪ್ರತಿನಿಧಿಗಳು, ಇತ್ತ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಆದೇಶ ನೀಡುತ್ತಿದ್ದು ಇತ್ತ ವಾಹನ ಸವಾರರು ಸ್ಥಳೀಯರು ರಸ್ತೆ ಅವ್ಯವಸ್ಥೆ ಸರಿಪಡಿಸಿ ಎಂದು ಆಗ್ರಹ ಮಾಡುತ್ತಿದ್ದಾರೆ. ಆದರೂ ಕೂಡ ಸಂಬಂದಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಕಾಮಗಾರಿಯ ಗುತ್ತಿಗೆ ಕಂಪೆನಿ ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿದೆ. ಅರ್ಧ ಕಿಲೋಮೀಟರ್ ಸಂಚಾರಕ್ಕೆ ಅರ್ಧ ಗಂಟೆಗೂ ಅಧಿಕ ಕಾಯುವ ಪರಿಸ್ಥಿತಿ ಒಂದೆಡೆಯಾದರೆ ಜೀವ ಕೈಯಲ್ಲೇ ಹಿಡಿದು ವಾಹನ ಚಲಾಯಿಸಬೇಕಾದ ದೌರ್ಭಾಗ್ಯ ಇನ್ನೊಂದೆಡೆಯಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.