ಕರಾವಳಿ

ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಶ್ರೀ ದೇವಿ ದರ್ಶನ ಆರಂಭ(Video)

Pinterest LinkedIn Tumblr

ಕುಂದಾಪುರ: ರಾಜ್ಯಾದ್ಯಂತ ದೇವರ ದರ್ಶನಕ್ಕೆ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸೋಮವಾರದಿಂದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತರಿಗೆ ಶ್ರೀ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದರ್ಶನಕ್ಕೆ ಬರುವ ಭಕ್ತರಿಂದಾಗಿ ಸೋಂಕು ಹರಡದಂತೆ ದೇವಸ್ಥಾನದ ಆಡಳಿತ ಮಂಡಳಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ದೇಗುಲದ ಹೊರ ಪೌಳಿಯ ಮುಖ್ಯ ದ್ವಾರದಿಂದ ಒಳ ಪ್ರವೇಶಿಸುವ ಭಕ್ತರು ದೇಹದ ಉಷ್ಣತೆಯನ್ನು ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಂಡು ಲೋಹ ಶೋಧಕ ಯಂತ್ರದ ಮೂಲಕ ಒಳ ಪ್ರವೇಶಿಸಿದ ಬಳಿಕ, ಕೈ ಗಳಿಗೆ ಸ್ಯಾನಿಟೈಸೇಶನ್ ಮಾಡಿದ ಬಳಿಕ ಸರದಿ ಸಾಲಿನಲ್ಲಿ ಅಂತರವನ್ನು ಕಾಯ್ದುಕೊಂಡು ಗರ್ಭಗುಡಿಯ ಎದುರಿನ ಮುಖ್ಯ ದ್ವಾರದ ಮೂಲಕ ದೇವಿಯ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಜಿಲ್ಲೆಯಲ್ಲಿ ಕೊರೋನಾ ಮಾಹಾಮಾರಿ ವ್ಯಾಪಿಸುತ್ತಿರುವುದರಿಂದ ದೇವರ ಗರ್ಭಗುಡಿಯ ತನಕ ಅವಕಾಶ ನಿರಾಕರಿಸಲಾಗಿದ್ದು, ಧ್ವಜಸ್ತಂಭದವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಸೋಮವಾರ ಮುಂಜಾನೆಯಿಂದಲೇ ಪೂಜಾ ವಿಧಿ ಮುಗಿದ ಬಳಿಕ ದರ್ಶನಕ್ಕೆ ಅವಕಾಶ ನೀಡಲಾಗಿದ್ದರೂ, ಮೊದಲ ದಿನ ನಿರೀಕ್ಷೆಯ ಸಂಖ್ಯೆಯಲ್ಲಿ ಭಕ್ತರು ಬಂದಿರಲಿಲ್ಲ. ಸೋಮವಾರ ದರ್ಶನ ಪಡೆದವರಲ್ಲಿ ಹೊರ ರಾಜ್ಯಗಳಿಂದ ಬಂದಿದ್ದ ಭಕ್ತರು ಕಾಣಿಸಲಿಲ್ಲ. ದರ್ಶನವಲ್ಲದೆ ಇತರ ಸೇವೆ, ತೀರ್ಥ ಪ್ರಸಾದಕ್ಕೆ ಅವಕಾಶವಿರಲಿಲ್ಲ. ದೇವಸ್ಥಾನಕ್ಕೆ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಕೆ. ರಾಜು ಭೇಟಿ ನೀಡಿದರು. ಲೋಕಕಲ್ಯಾಣಾರ್ಥವಾಗಿ ದೇವಸ್ಥಾನದಲ್ಲಿ ಚಂಡಿಕಾ ಹೋಮ ನೆರವೇರಿಸಲಾಗಿತ್ತು.

ಬೆಳಿಗ್ಗೆ 5 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು, ಬೆಳಿಗ್ಗೆ 5.30ರಿಂದ ಬೆಳಿಗ್ಗೆ 7.30ರ ತನಕ ಮತ್ತು ಪೂರ್ವಾಹ್ನ 10-30ರಿಂದ ಮಧ್ಯಾಹ್ನ 1-30ರ ತನಕ, ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯ ತನಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬೆಳಿಗ್ಗೆ 7-30ರಿಂದ ಮಧ್ಯಾಹ್ನ 10-30ರ ವರೆಗೆ ಹಾಗೂ ಮಧ್ಯಾಹ್ನ 1-30ರಿಂದ ಮಧ್ಯಾಹ್ನ 3ರ ವರೆಗೆ ದೇವರ ದರ್ಶನ ಇರುವುದಿಲ್ಲ. ಮಧ್ಯಾಹ್ನ ಭೋಜನ ಪ್ರಸಾದ ಹಾಗೂ ರಾತ್ರಿ ಭೋಜನ ಪ್ರಸಾದ ಇರುವುದಿಲ್ಲ.

ಈ ಬಗ್ಗೆ ವಿವರ ನೀಡಿರುವ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತುಗುಂಡಿ, ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಒಳಗೆ ಬರಬೇಕು. ಸಾಮಾಜಿಕ ಅಂತರ ಕಾಪಾಡಬೇಕು. 60 ವರ್ಷ ಮೇಲ್ಪಟ್ಟವರು ಹಾಗೂ ಸಣ್ಣ ಮಕ್ಕಳು ಇನ್ನು 15 ದಿನ ದೇವಸ್ಥಾನಕ್ಕೆ ಬರಬಾರದು. ಈಗ ಯಾವುದೇ ಅನ್ನ ಪ್ರಸಾದ ನೀಡುತ್ತಿಲ್ಲ. ಮುಂದೆ ಹಂತ ಹಂತವಾಗಿ ಅನ್ನಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗುವುದು. ಇಂದು ಸುಮಾರು 150 ಜನ ದೇವಸ್ಥಾನಕ್ಕೆ ಬಂದಿದ್ದಾರೆ. ಇದು ಮಳೆಗಾಲ ಆದ್ದರಿಂದ ದಿನಕ್ಕೆ 500 ಜನ ಭಕ್ತರು ಬರಬಹುದು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.