ಕುಂದಾಪುರ: ಕುಂದಾಪುರ ಪುರಸಭಾ ವ್ಯಾಪ್ತಿಯ ಎಲ್.ಐ.ಸಿ. ರಸ್ತೆಯಲ್ಲಿ ಬುಧವಾರದಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಬಡ ಕುಟುಂಬಗಳಿಗೆ ದಿನಬಳಕೆ ವಸ್ತುಗಳ ಕಿಟ್ ವಿತರಿಸಿದರು.
ನಿತ್ಯ 25ಕ್ಕೂ ಅಧಿಕ ಬೆದರಿಕೆ ಕರೆ ಬರುತ್ತೆ: ಶೋಭಾ
ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಿ.ಎಫ್.ಐ ಹಾಗೂ ಎಸ್.ಡಿ.ಪಿ.ಐ ವಿರುದ್ಧ ಹಾಗೂ ಹಿಂದೂ ಕಾರ್ಯಕರತರ ಕೊಲೆ ಪ್ರಕರಣಗಳು ನಡೆದ ಕುರಿತು ಧ್ವನಿಯೆತ್ತಿದಾಗ ವಿದೇಶಗಳಿಂದ ಬೆದರಿಕೆ ಕರೆಗಳುಬಂದಿದೆ. ಆದರೆ ಈ ಬಾರಿ ತಬ್ಲಿಘಿಗಳ ವಿರುದ್ಧ ಮತ್ತು ಕೇರಳದ ಯುವಕನಿಗೆ ಕುವೈಟಿನಲ್ಲಿ ಕಪಾಳಮೋಕ್ಷ ಮಾಡಿದ ಬಗ್ಗೆ ಮಾತನಾಡಿದ್ದಲ್ಲದೇ ಅಮಿತ್ ಷಾ ಅವರಿಗೆ ಪತ್ರ ಬರೆದ ಬಳಿಕ ವಿದೇಶಗಳಿಮ್ದ ಬೆದರಿಕೆ ಕರೆಗಳು ಬರುವುದು ಜಾಸ್ಥಿಯಾಗಿದೆ. ನಿತ್ಯ ಇಪ್ಪತ್ತೈದಕ್ಕೂ ಅಧಿಕ ಕರೆಗಳು ಬರುತ್ತಿದ್ದು ಇದರ ಬಗ್ಗೆ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರ ಬಳಿ ಚರ್ಚಿಸಿ ಸೂಕ್ತ ಕ್ರಮಕ್ಕೆ ತಿಳಿಸಿದ್ದೇನೆ. ಇದೆಲ್ಲಾ ಕರೆಗಳ ಬಗ್ಗೆ ತನಿಖೆಯಾಗಬೇಕೆನ್ನುವ ನಿಟ್ಟಿನಲ್ಲಿ ನಂಬರ್ ಕೂಡ ನೀಡಿದ್ದೇನೆ.
ನನಗೆ ಪೊಲೀಸ್ ಭದ್ರತೆ ಬೇಡ- ಕಾರ್ಯಕರ್ತರೆ ನನಗೆ ಶ್ರೀರಕ್ಷೆ: ಕರಂದ್ಲಾಜೆ
ರಾಜ್ಯದ ಜನಸಂಖ್ಯೆಗೆ ಹೋಲಿಸಿದರೆ ಪೊಲೀಸರ ಸಂಖ್ಯೆ ಕಡಿಮೆಯಿದೆ. ಕೊರೋನಾ ಸಂದರ್ಭ ಪೊಲೀಸರ ಶ್ರಮ ಹೆಚ್ಚಿರುತ್ತೆ, ಅಲ್ಲದೇ ನೆರೆ ಹಾವಳಿ ಮೊದಲಾದ ಕೆಟ್ಟ ಸಂದರ್ಭ ಪೊಲೀಸರ ಅವಶ್ಯಕತೆ ಜಾಸ್ಥಿ. ಈ ಹಿನ್ನೆಲೆ ನಾನು ಗನ್ ಮ್ಯಾನ್ ಪಡೆದಿಲ್ಲ. ಇರುವ ಇಬ್ಬರು ಗನ್ ಮ್ಯಾನ್ ವಾಪಾಸ್ ಮಾಡಿದ್ದೇನೆ. ನನಗೆ ಕಾರ್ಯಕರ್ತರು ಮತ್ತು ಜನರೇ ಶ್ರೀ ರಕ್ಷೆ ಎಂದು ಸಂಸದೆ ಶೋಭಾ ಹೇಳಿದರು.
ಲಾಕ್ ಡೌನ್ ನಿರ್ಧಾರ ಪರಾಮರ್ಷೆ…
ಲಾಕ್ ಡೌನ್ ಮುಂದುವರಿಕೆ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ಕೊರೋನಾ ಪ್ರಕರಣ ನಿತ್ಯ ಜಾಸ್ಥಿಯಾಗುತ್ತಿದೆ, ಅಲ್ಲದೇ ಸಾವೂ ಕೂಡ ನಿರೀಕ್ಷೆಗೂ ಮೀರಿ ಆಗುತ್ತಿದೆ. ಪ್ರಕರಣವಿಲ್ಲದ ರಾಜ್ಯಗಳಲ್ಲಿ ತಬ್ಲಿಘಿಗಳು ಬಂದ ಬಳಿಕ ಸಮಸ್ಯೆ ಉಲ್ಭಣಗೊಂಡಿದೆ. ರಾಜ್ಯದಲ್ಲಿ ಕೊರೋನಾ ಪ್ರಕರಣವನ್ನು ಗಮನದಲ್ಲಿರಿಸಿಕೊಂಡು ಲಾಕ್ ಡೌನ್ ಮುಂದುವರಿಕೆ ಮತ್ತು ನಿಲ್ಲಿಸುವ ಬಗ್ಗೆ ನಿರ್ಧಾರಕೈಗೊಳ್ಳಲಾಗುತ್ತದೆ. ಕೇಂದ್ರ ಸರಕಾರ ಇಡೀ ದೇಶದ ಪರಿಸ್ಥಿತಿ ಅವಲೋಕಿಸಿ ನಿರ್ಧರಿಸಲಿದೆ. ರಾಜ್ಯ ಮತ್ತು ದೇಶದ ಆರ್ಥಿಕ ಸ್ಥಿತಿ ಮೇಲೆ ಕೊರೋನಾ ಲಾಕ್ ಡೌನ್ ಹೊಡೆತ ಕೊಟ್ಟಿದೆ. ಆರ್ಥಿಕ ಸ್ಥಿತಿ ಮತ್ತು ಅಭಿವೃದ್ಧಿ ವಿಚಾರ ನೆನೆಸಿಕೊಂಡರೆ ಭಯವಾಗುತ್ತಿದ್ದು ಯಾವ ಯಾವ ವಿಚಾರಕ್ಕೆ ತೆರಿಗೆ ಹಾಕಬೇಕು ಅಥವಾ ಬೇಡ, ಲಾಕ್ ಡೌನ್ ವ್ಯವಸ್ಥೆಯಿಂದ ಅನಾನುಕೂಲಕ್ಕೊಳಪಟ್ಟ ಜನರಿಗೆ ಹೇಗೆ ಸ್ಪಂದಿಸಬೇಕು ಮತ್ತು ಕೊರೋನಾ ಸೋಂಕಿತರು ಮತ್ತು ಅವರ ಕುಟುಂಬಗಳಿಗೆ ಹೇಗೆ ಸಹಾಯ ಮಾಡಬೇಕು ಎಂಬುದನ್ನು ದೇಶ ಹಾಗೂ ರಾಜ್ಯ ಸರಕಾರ ಕ್ರಮಕೈಗೊಳ್ಳಲಿದ್ದು ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ಉಡುಪಿ ಜಿಲ್ಲಾಡಳಿತದ ಕಾರ್ಯ ಶ್ಲಾಘನೀಯ…
ಉಡುಪಿ ಜಿಲ್ಲಾಡಳಿತ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಟಾಧಿಕಾರಿಗಳು, ತಹಶಿಲ್ದಾರುಗಳು, ಆರೋಗ್ಯ ಇಲಾಖೆಯವರು ಕೊರೋನಾ ನಿಯಂತ್ರಣ ವಿಚಾರದಲ್ಲಿ ದಿಟ್ಟ ಕ್ರಮಕೈಗೊಂಡಿದ್ದು ನಿಜಕ್ಕೂ ಪ್ರಶಂಸನೀಯ ವಿಚಾರ. ಮೊದಲಿಗೆ ಉಡುಪಿ ಜಿಲ್ಲೆಯಲ್ಲಿ ಮೂರು ಪ್ರಕರಣಗಳು ಇದ್ದಾಗ ಜಿಲ್ಲೆ ಅಕ್ಷರಶಃ ಹೆದರಿತ್ತು, ಆದರೆ ಮೂವರು ಸೋಂಕಿತರು ಇನ್ನೊಬ್ಬರಿಗೆ ಸೋಂಕು ಹರಡದೇ ಸಮಯೋಚಿತವಾಗಿ ನಡೆದುಕೊಂಡು ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿ ತೆರಳಿದ್ದಾರೆ. ಉಡುಪಿ ಜಿಲ್ಲಾಡಳಿತ ತೆಗೆದುಕೊಂಡ ಗಟ್ಟಿ ನಿರ್ಧಾರದಿಂದ ಉಡುಪಿ ಹಸಿರು ವಲಯಕ್ಕೆ ಬರಲು ಸಾಧ್ಯವಾಗಿದೆ ಎಂದು ಸಂಸದೆ ಶ್ಲಾಘಿಸಿದರು.
ಈ ಸಂದರ್ಭ ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ, ಪುರಸಭಾ ಸದಸ್ಯ ಶ್ರೀಕಾಂತ್, ಬಿಜೆಪಿ ಮುಖಂಡರಾದ ಸುರೇಶ್ ಶೆಟ್ಟಿ ಬೀಜಾಡಿ, ವಕ್ವಾಡಿ ಸತೀಶ್ ಪೂಜಾರಿ, ಶಿವ ಮೆಂಡನ್ ಮೊದಲಾದವರು ಇದ್ದರು.
Comments are closed.