ಕರಾವಳಿ

ಸೂಲಿಬೆಲೆ ನೇತೃತ್ವ ಸೌಡ ಶ್ರೀ ವೆಂಕಟರಮಣನ ಆಲಯ ಸ್ವಚ್ಚಗೊಳಿಸಿದ ಯುವಬ್ರಿಗೇಡ್(Video)

Pinterest LinkedIn Tumblr

ಕುಂದಾಪುರ: ಸುಮಾರು  800 ವರ್ಷಗಳದ ಇತಿಹಾಸದ ಶಂಕರನಾರಾಯಣ ಸೌಡ ಹಳೇ ಅಗ್ರಹಾರ ಶ್ರೀ ವೆಂಕಟರಮಣ ದೇವಸ್ಥಾನವು ನೆರೆ ಅಬ್ಬರಕ್ಕೆ ಸಿಕ್ಕು ಶಿಥಿಲಗೊಂಡು ಮೂರೂವರೆ ದಶಕವಾಗಿದ್ದು, ಇಂದಿಗೂ ಜೀರ್ಣೋದ್ಧಾರಕ್ಕೆ ಸಕಾಲ ಕೂಡಿ ಬಂದಿಲ್ಲ. ಈ ಪುರಾತನ ಪ್ರಸಿದ್ಧ ದೇವಸ್ಥಾನ ಕರಸೇವೆ ಮೂಲಕಹೊರ ಜಗತ್ತಿಗೆ ಪರಿಚಯಿಸುವ ಕಾರ್ಯಕ್ಕೆ ಕುಂದಾಪುರ ಯುವ ಬ್ರಿಗೇಡ್ ಮುಂದಾಗಿದ್ದು ಭಾನುವಾರ ಎಪ್ಪತ್ತಕ್ಕೂ ಅಧಿಕ ಮಂದಿ ದೇವಸ್ಥಾನ ಪ್ರಾಂಗಣದ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಬೆಳಗ್ಗೆ 8 ಗಂಟೆಯಿಂದ ಶ್ರಮದಾನದ ಕೆಲಸ ಆರಂಭವಾಗಿದ್ದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು.

ಈ ಸಂದರ್ಭ ಮಾತನಾಡಿದ ಅವರು, ಯುವ ಬ್ರಿಗೇಡ್ ಕಳೆದ ಆರು ವರ್ಷಗಳಿಂದ ರಾಜ್ಯಾದ್ಯಂತ ಸ್ವಚ್ಚತ ಚಟುವಟಿಕೆಗಳು ಮತ್ತು ಶ್ರದ್ಧಾ ಕೇಂದ್ರಗಳನ್ನು ಉಳಿಸುವ ಪ್ರಯತ್ನ ಮಾಡುತ್ತಿದೆ. ಶಂಕರನಾರಾಯಣದ ಇತಿಹಾಸ ಪ್ರಸಿದ್ಧ ವೆಂಕಟರಮಣ ದೇವಸ್ಥಾನ 800 ವರ್ಷ ಹಳೆಯದ್ದಾಗಿದ್ದು ಶಿಥಿಲಾವಸ್ಥೆಯಲ್ಲಿರುವುದು ದೇಶಕ್ಕೆ ಮತ್ತು ಧರ್ಮಕ್ಕೆ ಶೋಭೆಯಲ್ಲ. ಇಲ್ಲಿ ಮೊದಲಿಗೆ ಸ್ವಚ್ಚತಾ ಕಾರ್ಯಕ್ಕೆ ಕೈ ಹಾಕಲಾಗಿದೆ. ಹೊಸ ಹೊಸ ದೇವಾಲಯಗಳನ್ನು ಭರ್ಜರಿಯಾಗಿ ಕಟ್ಟುವ ಆಸ್ತಿಕರು ಈ ದೇವಸ್ಥಾನ ಉಳಿಸಿ ಬೆಳೆಸುವ ಕಾರ್ಯಕ್ಕೆ ಕೈ ಹಾಕಬೇಕಿದೆ. ಮುಂದಿನ ದಿನದಲ್ಲಿ ಈ ದೇವಸ್ಥಾನ ಸುಂದರ ರೂಪ ಪಡೆಯುವ ವಿಶ್ವಾಸವಿದ್ದು ಉತ್ತಮ ವ್ಯವಸ್ಥೆಯಲ್ಲಿ ಪುನರುಜ್ಜೀವನ ನಡೆಸಿ ಈ ದೇವಸ್ಥಾನ ಸಮಾಜಕ್ಕೆ ಒದಗಿಸಿಕೊಡುವುದು ನಮ್ಮೆಲ್ಲರ ಹೊಣೆಯಾಗಿದೆ

ಕಳೆದೊಂದು ದಿನದವರೆಗೂ ಪಾಳುಬಿದ್ದ ಸ್ಥಿತಿಯಲ್ಲಿದ್ದ ಶ್ರೀ ವೆಂಕಟರಮಣನ ಆಲಯಕ್ಕೆ ಇದೀಗ ಕಳೆ ಬಂದಿದೆ. ದೇವಸ್ಥಾನದ ಪ್ರಾಂಗಣದಲ್ಲಿದ್ದ ಮುಳ್ಳು ಸಹಿತ ಗಿಡಗಂಟಿಗಳನ್ನು ಕಡಿಯಲಾಗಿದೆ. ಆವರಣದಲ್ಲಿದ್ದ ಹೆಂಚುಗಳು, ಮರಮಟ್ಟುಗಳನ್ನು ಸುವ್ಯವಸ್ಥಿತಗೊಳಿಸಿ ಪಾಳು ಕೊಂಪೆಯಾಗಿದ್ದ ದೇಗುಲಕ್ಕೊಂದು ಹೊಸ ಕಳೆ ಬರುವಂತೆ ಮಾಡಲಾಗಿದೆ. ಸ್ವಚ್ಚತಾ ಕಾರ್ಯದಲ್ಲಿ ಬ್ರಿಗೇಡ್ ಕಾರ್ಯಕರ್ತರ ಸಹಿತ ಸ್ಥಳೀಯ ಎಪ್ಪತ್ತಕ್ಕೂ ಅಧಿಕ ಮಂದಿ ಭಾಗವಹಿಸಿದ್ದು ಶಂಕರನಾರಾಯಣ ಪಿ‌ಎಸ್‌ಐ ಶ್ರೀಧರ್ ನಾಯ್ಕ್, ತಾಲೂಕು ಪಂಚಾಯಿತಿ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಕರಸೇವೆ ಮಾಡಿ ಯುವಕರನ್ನು ಹುರಿದುಂಬಿಸಿದರು.
ದಕ ಹಾಲು ಒಕ್ಕೂಟ ನಿದೇರ್ಶಕ ಹದ್ದೂರು ರಾಜೀವ ಶೆಟ್ಟಿ, ದೇವಸ್ಥಾನ ಜೀಣೋದ್ಧಾರ ಸಮಿತಿ ಸುಬ್ರಹ್ಮಣ್ಯ ಐತಾಳ್ ಬೈಲೂರು, ಸದಸ್ಯರಾದ ವೆಂಕಟೇಶ್ ಭಂಡಾರ್‍ಕರ್, ಕೃಷ್ಣಮೂರ್ತಿ ಬಾಯರಿ, ಶಂಕರನಾರಾಯಣ ತಾಲೂಕು ಹೋರಾಟ ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ, ವಿಜಯಾ ಯಡಮಕ್ಕಿ, ಶ್ಯಾನುಭಾಗ್, ಸೌಡ ನಾಗರಾಜ ಶೆಟ್ಟಿ, ಯುವ ಬಿಗ್ರೇಡ್ ಕಾರ್‍ಯಕರ್ತರಾದ ನಿರಂಜನ್ ತಲ್ಲೂರು, ಪ್ರದೀಪ್ ಬಸ್ರೂರು, ಪ್ರಮೋದ್ ಶಾನ್ಕಟ್ಟು, ಪ್ರಮೋದ್ ಶಂಕರನಾರಾಯಣ, ವಿಜಯ ಶಂಕರನಾರಾಯಣ ಮುಂತಾದವರು ಸ್ಚಚ್ಛತಾ ಕಾರ್‍ಯದಲ್ಲಿ ಪಾಲ್ಗೊಂಡರು.

ಸೌಡ ಸೇತುವೆ, ಶಂಕರನಾರಾಯಣ ತಾಲೂಕು ರಚನೆ, ದೇಧವಸ್ಥಾನ ಜೀರ್ಣೋದ್ಧಾರ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರಿಹಾರ ಒದಗಿಸುವಂತೆ ತಾಲೂಕು ಹೋರಾಟ ಸಮಿತಿ ಸಂಚಾಕ ಚಿಟ್ಟೆ ರಾಜಗೋಪಾಲ ಹಗ್ಡೆ ಸೂಲಿಬೆಲೆ ಗಮನ ಸೆಳೆದಿದ್ದು, ಸೌಡ ಸೇತುವೆ ನಿರ್ಮಾಣಕ್ಕೆ ಹೆಚ್ಚು ಒತ್ತು ಕೊಡುವೆ ಜೊತೆ ಇತರ ಬೇಡಿಕೆ ಬಗ್ಗೆ ಗಮನ ಹರಿಸುವುದಾಗಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ದೇವಾಲಯದಲ್ಲಿ ಬ್ರಿಗೇಡ್ ಬೈಟಕ್…
ದೇವಾಲಯ ಸ್ವಚ್ಚತೆ ಹಾಗೂ ಜೀರ್ಣೋದ್ಧಾರ ಸಂಬಂಧಿಸಿ ಚಕ್ರವರ್ತಿ ಸುಲಿಬೆಲೆ ಹಾಗೂ ಜೀರ್ಣೋದ್ಧಾರ ಸಮಿತಿ ನೇತ್ರತ್ವ ಮತುಕತೆ ನಡೆಸಲಾಯಿತು. ಈ ಸಂದರ್ಭ ಮಾತನಾಡಿದ ಸೂಲಿಬೆಲೆ. ದೇವಸ್ಥಾನ ಪಾಳು ಬೀಳುವ ಇಂತಹ ಅವ್ಯವಸ್ಥೆಯನ್ನು ಅವಲೋಕನ ಮಾಡಬೇಕಿದೆ. ಸಮಾಜದಲ್ಲಿ ಇಂತಹ ಕಾರ್ಯಗಳು ಆಗಬೇಕಾಗುವಾಗ ಶ್ರದ್ಧೆ ಅಗತ್ಯ. ಕೇಂದ್ರ ಹಾಗೂ ರಾಜ್ಯದಲ್ಲಿ ಸದ್ಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು ಕಂಡುಬರುತ್ತಿದ್ದು ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸರಕಾರಕ್ಕೆ ದುಂಬಾಲು ಬೀಳುವ ಬದಲು ಸಮಾಜವನ್ನು ಸಂಘಟಿಸಿಕೊಂಡು ಮುನ್ನಡೆಯೋಣ ಎಂದರು.

ಶಂಕರನಾರಾಯಣ ಪಿಎಸ್ಐ ಕರಸೇವೆ!
ಶಂಕರನಾರಾಯಣ ಎಸ್ಸೈ ಶ್ರೀಧರ ನಾಯ್ಕ್ ಶ್ರೀ ವೆಂಕಟರಮಣ ದೇವಸ್ಥಾನ ಸ್ವಚ್ಛತಾ ಕಾರ್‍ಯದಲ್ಲಿ ಪಾಲ್ಗೊಳ್ಳುವ ಮೂಲಕ ಪೊಲೀಸರು ಕೂಡಾ ಜನ ಸಾಮಾನ್ಯರೊಟ್ಟಿಗೆ ಬೆರೆಯುವದಷ್ಟೇ ಅಲ್ಲಾ ಸಮಾಜಮುಖಿ ಕಾರ್‍ಯದಲ್ಲಿ ತೊಡಗಿಸಿಕೊಂಡು ಭೇಷ್ ಅನಿಸಿಕೊಂಡರು. ಯಾರೂ ಕರೆಯದೆ ಸ್ವಇಚ್ಛೆಯಿಂದ ಪಾಲ್ಗೊಂಡ ಶ್ರೀಧರ ನಾಯ್ಕ್ ಒಂದು ಗಂಟೆಗೂ ಅಧಿಕ ಕಾಲ ಸ್ಚಚ್ಛತಾ ಕಾರ್‍ಯದಲ್ಲಿ ಪಾಲ್ಗೊಂಡರು. ಪಿಕಾಸೆ ಹಿಡಿದು ಮಣ್ಣು ಅಗೆದು, ಹಾರೆ ಹಿಡಿದು ಮಣ್ಣು ತುಂಬಿ ಬುಟ್ಟಿ ತಲೆಗೆ ಏರಿಸುವ ತನಕ ಸಕ್ರಿಯರಾಗಿದ್ದು, ಇವರ ಕರ ಸೇವಕರ ಮೆಚ್ಚುಗೆಗೆ ಪಾತ್ರವಾಯಿತು. ಕುಂದಾಪುರ ತಾಲೂಕು ಪಂಚಾಯಿತಿ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಕೂಡಾ ಹಾರೆ, ಹಿಡಿದು ಕರ ಸೇವಕರೊಟ್ಟಿಗೆ ಸ್ವಚ್ಛತಾ ಕಾರ್‍ಯದಲ್ಲಿ ಪಾಲ್ಗೊಂಡರು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ:

ಶಂಕರನಾರಾಯಣ ಸೌಡ ಹಳೆ‌ಅಗ್ರಹಾರ ಶ್ರೀ ವೆಂಕಟರಮಣನಿಗೆ ಸೂರಿಲ್ಲದ ಸಂಕಟ!

 

Comments are closed.