ಕರಾವಳಿ

ಕುಂದಾಪುರ ತಾಲೂಕು‌ ಕಚೇರಿಯಲ್ಲಿ ಪಾಕ್ ಪರ ಘೋಷಣೆ ಕೂಗಿದವನ ಬಂಧನ(Video)

Pinterest LinkedIn Tumblr

ಕುಂದಾಪುರ: ಕುಂದಾಪುರ ಮಿನಿವಿಧಾನಸೌಧದಲ್ಲಿರುವ ತಾಲೂಕು ಕಚೇರಿಯಲ್ಲಿ ವ್ಯಕ್ತಿಯೊಬ್ಬ ಪಾಕ್ ಪರ ಘೋಷಣೆ ಕೂಗಿ ಬಂಧಿತನಾದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಪಾಕಿಸ್ತಾನ ಜಿಂದಾಬಾದ್, ಜಿಹಾದಿ ಜಿಂದಾಬಾದ್ ಎಂದು ಘೋಷಣೆ ಕೂಗಿದ ಕುಂದಾಪುರ ಕೋಡಿಯ ರಾಘವೇಂದ್ರ ಗಾಣಿಗ (42) ಬಂಧಿತ ಆರೋಪಿ. ಈತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪದವಿಧರನಾದ ರಾಘವೇಂದ್ರ ಮೊದಲು ಖಾಸಗಿ ಶಾಲೆಯಲ್ಲಿ ಹಿಂದಿ ಶಿಕ್ಷಕನಾಗಿದ್ದ. ಆದರೆ 8 ವರ್ಷದ ಹಿಂದೆ ಕೆಲಸ ಬಿಟ್ಟ ಆತ ಮನೆಯಲ್ಲಿಯೆ ಇದ್ದ. ಹದಿನೈದು ವರ್ಷದ ಹಿಂದೆ ಮದುವೆಯಾಗಿದ್ದ ಈತ ಪತ್ನಿ ಹಾಗೂ ಪುತ್ರಿಯನ್ನು ಬಿಟ್ಟು ತಂದೆ-ತಾಯಿ ಜೊತೆ ವಾಸವಿದ್ದ. ಇಂದು ಬೆಳಿಗ್ಗೆ ತಾಲೂಕು ಕಚೇರಿಗೆ ಆಗಮಿಸಿದ ಆತ ಏಕಾಏಕಿ ಕೈ ಮೇಲೆತ್ತಿ ಪಾಕ್ ಪರ ಘೋಷಣೆ ಕೂಗಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದ್ದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆ ಕುಂದಾಪುರ ಪಿಎಸ್ಐ ಹರೀಶ್ ಆರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು.

ಠಾಣೆಯೊಳಗೂ ಪಾಕ್ ಪರ ಘೋಷಣೆ…..
ಇನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಕುರಿಸಿದಾಗಲೂ ಪಾಕ್ ಪರ ಘೋಷಣೆ ಕೂಗುತ್ತಾ ಕೈಗಳನ್ನು ಎತ್ತಿ ವಿಚಿತ್ರವಾಗಿ ವರ್ತಿಸುತ್ತಿದ್ದ.ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಸಿಪಿಐ ಗೋಪಿಕೃಷ್ಣ ಅವರು ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ.

ಮಾನಸಿಕ ಅಸ್ವಸ್ಥ?
ಕಳೆದ 8 ವರ್ಷದಿಂದ ರಾಘವೇಂದ್ರ ಮಾನಸಿಕ ಅಸ್ವಸ್ಥನಾಗಿದ್ದು ಆತನಿಗೆ ಉಡುಪಿ‌ ಹಾಗೂ ಕುಂದಾಪುರದಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು
ರಾಘವೇಂದ್ರ ತಂದೆ-ತಾಯಿ ಪೊಲೀಸರೆದುರು ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಟಿವಿ ನ್ಯೂಸ್ ನೋಡುತ್ತಿದ್ದ ಆತ ಅದರಲ್ಲಿ ಬರುತ್ತಿದ್ದ ಪಾಕ್ ಪರ ಘೋಷಣೆಗೆ ಸಂಬಂಧಿತ ಸುದ್ದಿಗಳನ್ನು ನೋಡುತ್ತಿದ್ದ. ಮೊದಲೇ ಖಿನ್ನತೆಯಿದ್ದರಿಂದ ಸುದ್ದಿಯ ವಿಚಾರದಿಂದ ಪ್ರಭಾವಗೊಂಡು ಘೋಷಣೆ ಕೂಗಿದ್ದಾನೆಂದು ತಂದೆ ಹೇಳುತ್ತಿದ್ದಾರೆ. ಇಂದು ಕೂಡ ತಂದೆ ತಾಯಿ ಆತನನ್ನು ಕುಂದಾಪುರ ಆಸ್ಪತ್ರೆಗೆ ಕರೆತಂದಿದ್ದು ಮೂತ್ರ ಮಾಡಿ ಬರುವುದಾಗಿ ಹೇಳಿ ತಪ್ಪಿಸಿಕೊಂಡ ಈತ ತಾಲೂಕು ಕಚೇರಿಗೆ ಬಂದು ಈ ಕೃತ್ಯ ಮಾಡಿದ್ದಾ‌ನೆ.

ಆರೋಪಿ ರಾಘವೇಂದ್ರನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಲಿದೆ.

Comments are closed.