ಕುಂದಾಪುರ: ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಪತಿ ನೇಣು ಹಾಕಿಕೊಂಡ ಘಟನೆ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಸೆಟ್ ವಳ್ಳಿ ಎಂಬಲ್ಲಿ ಬುಧವಾರ ನಡೆದಿದ್ದು ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಅಷ್ಟಕ್ಕೂ ಮೂರು ಕೊಲೆಗಳನ್ನು ಮಾಡಿದ ಕಟುಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ ಅನ್ನೋದರ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಬೆಳ್ವೆ ಸೆಟವಳ್ಳಿ ವಾಸಿ ಸೂರ್ಯನಾರಾಯಣ ಅಲ್ಸೆ (52) ಎಂಬಾತ ಪತ್ನಿ ಹಾಗೂ ಮಕ್ಕಳನ್ನು ಅಮಾನುಷವಾಗಿ ಹತ್ಯೆ ಮಾಡಿದ್ದು ಪತ್ನಿ ಮಾನಸ (38) ಸುಧೀಂದ್ರ (14) ಸುಧೀಶ್ (9) ಎನ್ನುವರನ್ನು ಕೊಲೆಯಾದವರು. ಬಳಿಕ ಸೂರ್ಯನಾರಾಯಣ ಭಟ್ ತಾನೂ ನೇಣಿಗೆ ಕೊರಳೊಡ್ಡಿದ್ದಾನೆ.
ಪತ್ನಿ, ಮಕ್ಕಳಿಗೆ ವಿಲನ್ ಆದ…
ಎಲ್ಲವೂ ಸುಸೂತ್ರದಲ್ಲಿರುವಾಗ ಇದೊಂದು ಪುಟ್ಟ ಸುಖಿ ಕುಟುಂಬ. ಆದರೆ ಈಗ ಮನೆ ಬಿಕೋ ಎನ್ನುತ್ತಿದೆ. ಮನೆಯಲ್ಲಿ ಸಾಕಿದ್ದ ದನಗಳು ಮೂಕ ರೋಧನೆ ಅನುಭವಿಸುತ್ತಿದೆ. ಇಷ್ಟಕ್ಕೆಲ್ಲಾ ಕಾರಣನಾದವನು ಅದೇ ಮನೆಯ ಯಜಮಾನ ಸೂರ್ಯನಾರಯಣ ಅಲ್ಸೆ. ಅದ್ಯಾವುದೋ ಕಾರಣ ಗೊತ್ತಿಲ್ಲ. ಬುಧವಾರ ರಾತ್ರಿ ನಿದ್ದೆ ಮಂಪರಿನಲ್ಲಿದ್ದ ಪತ್ನಿ ಹಾಗೂ ಇಬ್ಬರು ಮಕ್ಕಳ ತಲೆ ಭಾಗಕ್ಕೆ ದೊಣ್ಣೆಯಿಂದ ಹೊಡೆದು ಕೊಂದೇ ಬಿಟ್ಟಿದ್ದ. ಮೂವರಿಗೂ ಆದ ಗಾಯ ನೋಡಿದರೆ ಸೂರ್ಯನಾರಾಯಣನ ಕಟುಕತನ ತಿಳಿಯುತ್ತದೆ. ಮೂವರಿಗೂ ಹೊಡೆಯುವ ಮೊದಲು ವಿಷ ಅಥವಾ ನಿದ್ರೆ ಮಾತ್ರೆಯಂತಹ ವಸ್ತು ನೀಡಿದ್ದನೆ ಎನ್ನುವ ಮಾತುಗಳು ಕೇಳಿಬರುತ್ತಿದೆಯಾದರೂ ಅದು ಇನ್ನಷ್ಟೆ ತಿಳಿದುಬರಬೇಕಿದೆ. ಕೊನೆಗೂ ತನ್ನ ಕಾರ್ಯ ಸಾಧಿಸಿದ ಕಿರಾತಕ ತಾನೂ ಅಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಬುಧವಾರದಂದು ಅಡುಗೆ ಕೆಲಸಕ್ಕೆ ಬರುವುದಾಗಿ ಅಲ್ಸೆ ಮಾತುಕೊಟ್ಟಿದ್ದು ಕೆಲಸಕ್ಕೆ ಬಾರದಿದ್ದಾಗ ಅಡುಗೆ ಕೆಲಸ ನೀಡಿದವರು ಮೊಬೈಲ್ ಗೆ ಕರೆ ಮಾಡಿದ್ದು ಫೋನ್ ಸ್ವಿಚ್ ಆಪ್ ಬಂದಿತ್ತು. ಪತ್ನಿ ಫೊನ್ ಕೂಡ ಸ್ವಿಚ್ ಆಪ್ ಇತ್ತು. ಅಣ್ಣ ಪ್ರಕಾಶ್ ಅವರಿಗೆ ಕರೆ ಮಾಡಿದ್ದು ಅವರು
ಸಹೋದರ ಮನೆಯಲ್ಲಿ ಲೈಟ್ ಉರಿಯದ್ದನ್ನು ಕಂಡು ಅನುಮಾನಗೊಂಡು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ಮಕ್ಕಳು ಕೂಡ ಬುಧವಾರ ಶಾಲೆಗೆ ಗೈರಾಗಿರುವುದು ಘಟನೆ ಮಂಗಳವಾರ ರಾತ್ರಿ ನಡೆದಿದೆ ಎನ್ನುವುದಕ್ಕೆ ಪುಷ್ಟಿ ನೀಡುತ್ತದೆ. ಇನ್ನು ಸೂರ್ಯನಾರಾಯಣ ನಿತ್ಯ ಬೆಳಿಗ್ಗೆ ಮನೆ ಸಮೀಪದ ಅಂಗಡಿಯೊಂದಕ್ಕೆ ತೆರಳಿ ಪೇಪರ್ ಓದುವ ಪರಿಪಾಠವಿಟ್ಟುಕೊಂಡಿದ್ದು ಕಳೆದ ಎರಡು ವಾರಗಳೀಂದೀಚೆಗೆ ಅದನ್ನು ನಿಲ್ಲಿಸಿದ್ದರು.
ಆರ್ಥಿಕ ಸಮಸ್ಯೆ ಇರಲಿಲ್ಲ?
ಮನೆ ಸಮೀಪವೇ ಸುಮಾರು ಎರಡೂವರೆ ಎಕ್ರೆ ಆಗುವಷ್ಟು ತೋಟದಲ್ಲಿ ಅಡಿಕೆ ಕೃಷಿ ಮಾಡುತ್ತಿದ್ದ ಸೂರ್ಯನಾರಾಯಣ ಅಲ್ಸೆ ಬಿಡುವಿನ ವೇಳೆ ಅಡುಗೆ ಕೆಲಸ ಮಾಡುತ್ತಿದ್ದರು. ಸುಮಾರು 15 ವರ್ಷಗಳ ಹಿಂದೆ ಮೈಸೂರು ಮೂಲದ ಮಾನಸ ಅವರನ್ನು ವಿವಾಹವಾಗಿದ್ದ ಸೂರ್ಯನಾರಾಯಣನಿಗೆ ಸುಧೀಂದ್ರ ಮತ್ತು ಸುಧೀಶ್ ಎಂಬಿಬ್ಬರು ಮಕ್ಕಳಿದ್ದು ಹೆಬ್ರಿ ಎಸ್.ಆರ್.ಎಸ್. ಶಾಲೆಯಲ್ಲಿ ಓದುತ್ತಿದ್ದಾರೆ. ಮಾನಸ ಅವರು ಮನೆಯಲ್ಲಿರುತ್ತಿದ್ದರು. ಇತ್ತೀಚೆಗಷ್ಟೆ ತನ್ನ ಕೃಷಿಗೆ ಅನುಕೂಲವಾಗಲು ತೋಟದಲ್ಲಿ ಎರಡು ಕೆರೆ ನಿರ್ಮಿಸಿದ್ದರು. ಕೃಷಿ ಹಾಗೂ ಅಡುಗೆ ಕೆಲಸ ಮಾಡುತ್ತಿದ್ದ ಇವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆಯಲ್ಲಿರಲಿಲ್ಲ ಎಂದು ಕುಟುಂಬ ಮೂಲಗಳು ತಿಳಿಸಿದೆ.
ಜಾಗದ ತಕರಾರು-ಮಾನಸಿಕ ಖಿನ್ನತೆ?
ಸೂರ್ಯನಾರಾಯಣ ಅಲ್ಸೆ ಮನೆ ಸಮೀಪದಲ್ಲಿ ತನ್ನ ಕುಟುಂಬದ ವ್ಯಕ್ತಿಯ ಜೊತೆ ಜಾಗದ ವಿಚಾರದಲ್ಲಿ ಮನಸ್ತಾಪ ಮಾಡಿಕೊಂಡಿದ್ದು ದೇವರ ಆಣೆ ಪ್ರಮಾಣವೂ ನಡೆದಿತ್ತೆನ್ನಲಾಗಿದೆ. ಇದೆಲ್ಲದರ ಬಳಿಕ ಸೂರ್ಯನಾರಾಯಣ್ ಮಾನಸಿಕವಾಗಿ ಕುಗ್ಗಿದ್ದರು. ಸಿಡುಕಿನ ಸ್ವಭಾವದವರಾಗಿದ್ದ ಇವರು ಹಠವಾದಿಯೂ ಆಗಿದ್ದರು. ಆದರೆ ಕಳೆದ ಏಳೆಂಟು ವರ್ಷದ ಹಿಂದೆ ಸಂಪರ್ಕ ರಸ್ತೆಯೊಂದಕ್ಕೆ ಉಪಯೋಗವಾಗಲು ತನ್ನ ಜಾಗದಲ್ಲಿ ಅನುವು ಮಾಡಿಕೊಟ್ಟು ಆಸುಪಾಸಿನ ಭಾಗಕ್ಕೆ ಉಪಕಾರಿಯಾಗಿದ್ದರು. ಮೂರು ವರ್ಷಗಳ ಹಿಂದೆ ದೊಡ್ಡ ಮಗನಿಗೆ ಅದ್ಧೂರಿಯಾಗಿ ಬ್ರಹ್ಮೋಪದೇಶ ಮಾಡಿದ್ದು ಕಳೆದ ವರ್ಷ ಕಿರಿಯ ಮಗನಿಗೆ ಉಡುಪಿಯಲ್ಲಿ ಸಾಮೂಹಿಕ ಬ್ರಹ್ಮೋಪದೇಶ ಮಾಡಿದ್ದರು. ಮಾನಸಿಕ ಖಿನ್ನತೆಯೇ ಈ ದುರ್ಘಟನೆಗೆ ಕಾರಣವಾಯಿತೇ ಅನ್ನುವ ಬಲವಾದ ಅನುಮಾನ ಕಾಡುತ್ತಿರುವ ನಡುವೆಯೇ ಕುಟುಂಬ ಮೂಲಗಳು ಕೂಡ ಮಾನಸಿಕ ಸಮಸ್ಯೆಯ ಬಗ್ಗೆ ದೃಢೀಕರಿಸಿದೆ. ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಮಾನಸಿಕ ಖಿನ್ನತೆಗೆ ಚಿಕಿತ್ಸೆಯೂ ಪಡೆಯತ್ತಿದ್ದರೆಂದು ಸಹೋದರ ಪ್ರಕಾಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಧಿಕಾರಿಗಳ ಭೇಟಿ, ಮುಂದುವರಿದ ತನಿಖೆ..
ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ನಿಶಾ ಜೇಮ್ಸ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಸಿಪಿಐ ಮಂಜಪ್ಪ ಡಿ.ಆರ್., ಶಂಕರನಾರಾಯಣ ಪಿಎಸ್ಐ ಶ್ರೀಧರ್ ನಾಯ್ಕ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ತಾ.ಪಂ ಸದಸ್ಯ ಚಂದ್ರಶೇಖರ್ ಶೆಟ್ಟಿ, ಬೆಳ್ವೆ ಗ್ರಾ.ಪಂ ಅಧ್ಯಕ್ಷೆ ಶೋಭಾ ಶೆಟ್ಟಿ ಮೊದಲಾದವರು ಭೇಟಿ ನೀಡಿದ್ದರು. ಸ್ಥಳಕ್ಕೆ ಮಣಿಪಾಲದ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ಡಾಕ್ಟರ್ ಅಶ್ವಿನಿ ಕುಮಾರ್, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಒಟ್ಟಿನಲ್ಲಿ ಪತ್ನಿ ಪಾಲಿಗೆ ಪಾಪಿ ಪತಿಯಾಗಿ, ಸಲುಹಬೇಕಾದ ಮಕ್ಕಳ ಪಾಲಿಗೆ ಕಟುಕನಾದ ಸೂರ್ಯನಾರಾಯಣ ಅಲ್ಸೆ ಮನೆಯಲ್ಲಿ ನಡೆದ ಮರಣ ಮೃದಂಗ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದು ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.