ಕರಾವಳಿ

ಮುಜರಾಯಿ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಲು ಸಚಿವ ಕೋಟ ಸೂಚನೆ

Pinterest LinkedIn Tumblr

ಮಂಗಳೂರು : ಎ ಗ್ರೇಡ್ ಮುಜರಾಯಿ ದೇವಾಲಯಗಳಲ್ಲಿ ಇಲಾಖೆಯಿಂದಲೇ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪ್ರಮುಖ ದೇವಾಲಯಗಳಲ್ಲಿ ಸಾಮೂಹಿಕ ವಿವಾಹಗಳನ್ನು ನಡೆಸುವ ಸಭೆಯ ಸಂಬಂಧ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವರನಿಗೆ ಪ್ರೋತ್ಸಾಹ ಧನವಾಗಿ ರೂ. 5 ಸಾವಿರ, ವಧುವಿಗೆ ಪ್ರೋತ್ಸಾಹ ಧನವಾಗಿ ರೂ. 10 ಸಾವಿರ ಹಾಗೂ ವಧುವಿಗೆ ರೂ. 40 ಸಾವಿರ ಬೆಲೆ ಬಾಳುವ ಚಿನ್ನದ ತಾಳಿ, ಅಂದಾಜು 8 ಗ್ರಾಂ ತೂಕದ ಎರಡು ಚಿನ್ನದ ಗುಂಡು ನೀಡಲಾಗುತ್ತದೆ. ಇದನ್ನು ದೇವಾಲಯದ ನಿಧಿಯಿಂದ ಭರಿಸಲಾಗುವುದು ಎಂದು ಅವರು ಹೇಳಿದರು.

ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಆಡಳಿತಾಧಿಕಾರಿಗಳು, ಅನುವಂಶಿಕ ಮೊಕ್ತೇಸರರು, ಜಿಲ್ಲಾಧಿಕಾರಿಗಳು, ಜಿಲ್ಲಾಧಾರ್ಮಿಕ ಪರಿಷತ್ತಿನ ಅಧ್ಯಕ್ಷರ ಅನುಮತಿ ಪಡೆದು ಸಾಮೂಹಿಕ ವಿವಾಹಕ್ಕಾಗಿ 2020ರ ಏಪ್ರಿಲ್ 26 ಹಾಗೂ ಮೇ 24 ಇದರಲ್ಲಿ ಒಂದು ದಿನಾಂಕವನ್ನು ನಿಗದಿಪಡಿಸಬೇಕು ಎಂದು ಹೇಳಿದರು.

ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವವರು ದೇವಾಲಯದ ಕಚೇರಿಗಳಿಗೆ ಬಂದು ಅರ್ಜಿ ಪಡೆದು, ದಾಖಲೆಗಳನ್ನು ನೀಡಿ ವಿವಾಹ ನಡೆಯುವ ದಿನಾಂಕಕ್ಕೆ 30 ದಿನ ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು. ವಿವಾಹ ನಡೆಯುವ ಸ್ಥಳದಲ್ಲಿ ವಿವಾಹ ನೋಂದಾಣಾಧಿಕಾರಿ ಮತ್ತು ಆಯಾಯ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದು, ಕಡ್ಡಾಯವಾಗಿ ವಿವಾಹ ನೋಂದಣಿ ಮಾಡಿಸುವ ಬಗ್ಗೆ ಅಗತ್ಯ ಕ್ರಮವಹಿಸಬೇಕು.

ಸಾಮೂಹಿಕ ವಿವಾಹಕ್ಕೆ ಸಲ್ಲಿಸುವ ದಾಖಲೆಗಳು ಸುಳ್ಳು ದಾಖಲೆಗಳೆಂದು ದೃಢಪಟ್ಟಲ್ಲಿ ಅಂತವಹರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ವಧು- ವರರಿಗೆ ಪ್ರೋತ್ಸಾಹ ಧನವಾಗಿ ನೀಡುವ ಮೊತ್ತವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.

ಜಿಲ್ಲಾಧಿಕಾರಿಗಳು ಈ ಕಾರ್ಯಕ್ರಮದ ಮೇಲುಸ್ತುವಾರಿಯನ್ನು ವಹಿಸಿಕೊಂಡು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.

ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ‘ಎ’ ಪ್ರವರ್ಗದ ಉತ್ತಮ ಆದಾಯ ಇರುವ ದೇವಾಲಯಗಳಲ್ಲಿ 20 ದೇವಾಲಯಗಳನ್ನು ಆಯ್ಕೆ ಮಾಡಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದು ಹೇಳಿದರು.

ಸಭೆಯಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಸಂಜೀವ ಮಠಂದೂರು, ಡಾ. ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ ಉಪಸ್ಥಿತರಿದ್ದರು.

Comments are closed.