ಕರಾವಳಿ

‘ಐ.ಆರ್.ಬಿ. ಕಳಪೆ ಕಾಮಗಾರಿ ಮಾಡಿದೆ’,ಜನಕ್ಕೆ ಸಮಸ್ಯೆಯಾದ್ರೆ ಹೋರಾಟ ಖಚಿತ: ಶಾಸಕ ಸುಕುಮಾರ್ ಶೆಟ್ಟಿ (Video)

Pinterest LinkedIn Tumblr

ಕುಂದಾಪುರ: ಶಿರೂರು ಟೋಲ್ ಕೇಂದ್ರದಲ್ಲಿ ಸ್ಥಳೀಯರಿಗೆ ಶುಲ್ಕ ವಿನಾಯಿತಿ ನೀಡಬೇಕು, ಸರ್ವಿಸ್ ರಸ್ತೆ ಪೂರ್ಣಗೊಳಿಸಬೇಕು ಎಂಬ ಪ್ರಮುಖ ಆಗ್ರಹಗಳೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬುಧವಾದ ಬೆಳಿಗ್ಗೆ ಶಿರೂರು ಟೋಲ್ ಕೇಂದ್ರದ ಬಳಿ ಹೆದ್ದಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಶಿರೂರು ಟೋಲ್ ಚಲೋ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಸ್ಥಳೀಯರು ಸಾಂಕೇತಿಕ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಾರ್ವಜನಿಕರ ಪರವಾಗಿ ಮನವಿ ಸಲ್ಲಿಸಿ ಮಾತನಾಡಿದ ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ, ಐ‌ಆರ್‌ಬಿ ಗುತ್ತಿಗೆ ಕಂಪೆನಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿ ಸ್ಥಳದಲ್ಲೇ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ಕಾಮಗಾರಿ ನಡೆಸುವುದು ಜನರಿಗೋಸ್ಕರ ಹೊರತು ಬೇರೆಯವರ ಲಾಭಕ್ಕಾಗಿ ಅಲ್ಲ. ಜನರಿಗೆ ತೊಂದರೆಯಾದರೆ ಪಕ್ಷ ನೋಡಲ್ಲ. ಪಕ್ಷಾತೀತವಾಗಿ, ಜನಹಿತಕ್ಕೋಸ್ಕರ ಹೋರಾಟ ಮಾಡುವುದು ನಮ್ಮ ಧರ್ಮ. ನಮ್ಮನ್ನು ಆಯ್ಕೆ ಮಾಡಿರುವುದು ಜನರ ಕಷ್ಟಗಳಿಗೆ ಸ್ಪಂದಿಸಲು. ಜನರ ಕಷ್ಟಗಳಿಗೆ ಸ್ಪಂದಿಸದಿದ್ದರೆ ನಾವು ಎಮ್‌ಎಲ್‌ಗಳು ಯಾತಕ್ಕಾಗಿ? ಗಂಜಿ ಹೊಡೆಯಲಿಕ್ಕಾ.? ಎಂದು ಶಾಸಕರು ಗುಡುಗಿದರು.

ಬೈಂದೂರು ಕ್ಷೇತ್ರ ಸೇರಿದಂತೆ ಕಾರವಾರದಿಂದ ಕುಂದಾಪುರದವರೆಗೆ ಐ‌ಆರ್‌ಬಿ ಕಂಪೆನಿ ಸಂಪೂರ್ಣ ಕಳಪೆ ಕಾಮಗಾರಿಯನ್ನು ನಡೆಸುತ್ತಿದೆ. ಅರೆಬರೆ ಕಾಮಗಾರಿಯಿಂದಾಗಿ ಕೆಲವೆಡೆ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆ ನೀರೆಲ್ಲಾ ಕೃಷಿಗದ್ದೆಗಳಿಗೆ ನುಗ್ಗಿ ಭತ್ತದ ಕೃಷಿ ನಾಶವಾಗಿದೆ. ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದಾಗಿ ಕಳೆದ ಕೆಲ ವರ್ಷಗಳಿಂದ ನೂರಾರು ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇನ್ನಾದರೂ ಗುತ್ತಿಗೆ ಕಂಪೆನಿ ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂದಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಬಳಿಕ ಟೋಲ್ ಆರಂಭಿಸಲಿ, ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಹೆದ್ದಾರಿ ಅವ್ಯವಸ್ಥೆ ಸರಿಪಡಿಸದೆ ಯಾವುದೇ ಕಾರಣಕ್ಕೂ ಟೋಲ್ ಆರಂಭ ಮಾಡಲು ಬಿಡುವುದಿಲ್ಲ ಎಂದು ಐ‌ಆರ್‌ಬಿ ಗುತ್ತಿಗೆ ಕಂಪೆನಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಪಾದಯಾತ್ರೆ ಎಚ್ಚರಿಕೆ ಕೊಟ್ಟ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ
ಟೋಲ್ ಚಲೋ ಅಭಿಯಾನಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿಯವರು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಮಳೆಗಾಲದಲ್ಲಿ ವಾಹನ ಸವಾರರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ನಿಗಧಿಪಡಿಸಿದ ಸ್ಥಳಗಳಲ್ಲಿ ಸರ್ಕಲ್‌ಗಳನ್ನು, ಡಿವೈಡರ್‌ಗಳನ್ನು ಅಳವಡಿಸದಿರುವುದು ಅಪಘಾತ ಸಂಖ್ಯೆ ಇನ್ನಷ್ಟು ಹೆಚ್ಚಲು ಕಾರಣವಾಗಿದೆ. ಹೀಗಾಗಿ ಸಾರ್ವಜನಿಕರಿಗೆ ಅಗತ್ಯವಾಗಿರುವ ಸರ್ವಿಸ್ ರಸ್ತೆಗಳನ್ನು ಪೂರ್ಣಗೊಳಿಸಿ ಟೋಲ್ ಆರಂಭಿಸಬೇಕು. ಒಂದೊಮ್ಮೆ ಬೇಡಿಕೆ ಈಡೇರಿಸದಿದ್ದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ತಲ್ಲೂರಿನಿಂದ ಶಿರೂರಿನವರೆಗೂ ಪಾದಯಾತ್ರೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಎನ್‌ಎಚ್‌ಐ ಅಧಿಕಾರಿ ನವೀನ್, ಸ್ಥಳೀಯರಿಗೆ ನೀಡಿರುವ ಬೇಡಿಕೆಗಳನ್ನು ಈಡೇರಿಸದೇ ಸುಂಕ ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.

ಈ ವೇಳೆಯಲ್ಲಿ ಟೋಲ್ ಚಲೋ ಅಭಿಯಾನದ ಪ್ರಮುಖರಾದ ಪತ್ರಕರ್ತ ಅರುಣ್ ಕುಮಾರ್ ಶಿರೂರು, ಸತೀಶ್ ಶೆಟ್ಟಿ, ಮಣಿಗಾರ್ ಜಿಫ್ರಿ ಸಾಹೆಬ್, ರಘುರಾಮ್ ಪೂಜಾರಿ, ಚಂದ್ರಶೇಖರ್ ಶೆಟ್ಟಿ, ಸಿದ್ದಿಕ್ ಸಾಹೇಬ್, ರಘುರಾಮ್ ಮೇಸ್ತಾ, ಇಕ್ಬಾಲ್, ಜಿ.ಪಂ ಸದಸ್ಯ ಸುರೇಶ್ ಬಟ್ವಾಡಿ, ಮಾಜಿ ಜಿ.ಪಂ ಅಧ್ಯಕ್ಷ ಎಸ್.ರಾಜು ಪೂಜಾರಿ, ತಾ.ಪಂ ಸದಸ್ಯರಾದ ಪುಷ್ಪರಾಜ್ ಶೆಟ್ಟಿ, ಉಮೇಶ್ ಶೆಟ್ಟಿ ಕಲ್ಗದ್ದೆ, ಜಗದೀಶ್ ದೇವಾಡಿಗ, ಬಿಜೆಪಿ ಯುವ ಮೇೂರ್ಚಾದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಕನಕ ಲ್ಯಾಂಡ್ ಮಾರ್ಕ್ ನ ಜಗದೀಶ್ ಶೆಟ್ಟಿ ಮತ್ತು ರವಿ ಶೆಟ್ಟಿ, ಬಿಜೆಪಿ ಮಹಿಳ ಮೇೂರ್ಚಾದ ಅಧ್ಯಕ್ಷೆ ಪ್ರಿಯದರ್ಶಿನಿ, ಶಿರೂರು ಗ್ರಾ.ಪಂ ಅಧ್ಯಕ್ಷೆ ದಿಲ್‌ಶಾದ್ ಬೇಗಂ, ರಮೇಶ್ ನಾಯ್ಕ ಬೆಳಕೆ, ಬಿಜೆಪಿ ಮುಖಂಡರಾದ ಸದಾಶಿವ ಪಡುವರಿ, ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಸುಬ್ರಹ್ಮಣ್ಯ ಬಿಜೂರು, ಕನಕ ಲ್ಯಾಂಡ್‌ಮಾರ್ಕ್‌ನ ರವಿ ಶೆಟ್ಟಿ, ಸಿಪಿಐಎಂ ಮುಖಂಡ ವೆಂಕಟೇಶ್ ಕೋಣಿ ಮೊದವಾದವರು ಉಪಸ್ಥಿತರಿದ್ದರು.

ಪೇೂಲಿಸ್ ಬೀಗು ಬಂದೋಬಸ್ತ್
ಕುಂದಾಪುರ ಉಪವಿಭಾಗದ ಎ‌ಎಸ್‌ಪಿ ಹರಿರಾಮ್ ಶಂಕರ್ ಮುಂದಾಳತ್ವದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸುರೇಶ್ ನಾಯಕ್. ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು. ಮೂರು ಡಿಎಆರ್ ವಾಹನ ಸೇರಿದಂತೆ ೫೦ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

(ವರದಿ- ಯೋಗೀಶ್ ಕುಂಭಾಸಿ)

Comments are closed.