ಕರಾವಳಿ

‘ಋಣಮುಕ್ತ’ರಾಗಲು ಕುಂದಾಪುರ ಮಿನಿವಿಧಾನಸೌಧಕ್ಕೆ ಓಡೋಡಿ ಬಂದರು ಸಾವಿರಾರು ಜನರು!(Video)

Pinterest LinkedIn Tumblr

ಕುಂದಾಪುರ: ‘ಹೋಯ್…..ತುಂಬಾ ದೂರದಿಂದ ಬಂದಿತ್. ಸಾಲಾ ಮಾಡ್ಕಂಡಿತ್…ಬಡ್ಡಿ ಕಟ್ಟಿ ಕಟ್ಟಿ ಸಾಕಾಯ್ತ್….ಮೊಬೈಲೆಗೆಲಾ ಬಂದಿತಂಬ್ರಾಲಾ…ಚಿನ್ನ ಇಟ್ಟ್ ಸಾಲ ಎಲ್ಲಾ ನಾವ್ ವಾಪಾಸ್ ಕೊಡುಕಿಲ್ಲಾ ಅಂದೆಳಿ…ಅದೆಂತದೋ ಕಾನೂನು ಬಂದಿತ್ ಅಂಬ್ರಲಾ…. ಎಲ್ರದ್ದೂ ಸಾಲ ಮನ್ನಾ ಆಪತಿಗೆ ನಮ್ಗೂ ಸಾಲ ತೀರ್ ಸಾಕ್ ಮರ್ರೆ. ನೂರಾರ್ ರೂಪಾಯಿ ಖರ್ಚ್ ಮಾಡ್ಕಂಡ್ ಬೆಳ್ಗಾ ಮುಂಚೆ ಇಲ್ಲಿಗ್ ಬಂದಿತ್….ಸೂಮಾರ್ ಹೊತ್ತ್ ಕಾದ್ ಅರ್ಜಿ ಬರೆಸ್ಕಂಡ್ ಆಫಿಸಿಗೆ ಕೊಟ್ಟಿತ್… ಎಂತಾ ಆತ್ತೋ ಗೊತ್ತಿಲ್ಯೆ.!- ಕುಂದಾಪುರದಲ್ಲಿರುವ ಮಿನಿ ವಿಧಾನಸೌಧ ಆಸುಪಾಸಿನಲ್ಲಿ ಬಹುತೇಕರ ಬಾಯಲ್ಲಿ ಕೇಳಿಬಂದಿದ್ದ ಮಾತಿನ ಝಲಕ್ ಇದು.

ವಾಟ್ಸಾಪ್,ಫೇಸ್ ಬುಕ್ ತಂದ ಪ್ರಾಬ್ಲಂ!
ಸಾಮಾಜಿಕ ಜಾಲತಾಣ ಮುಗ್ದ ಜನರನ್ನು ಎಷ್ಟು ದಾರಿತಪ್ಪಿಸುತ್ತೆ ಅನ್ನೋದಕ್ಕೆ ಕಿಡಿಗೇಡಿಗಳು ಮಾಡಿದ ಸಂದೇಶ ನಂಬಿ ಕುಂದಾಪುರ ಮಿನಿವಿಧಾನಸೌಧಕ್ಕೆ ಬಂದ ಜನರೇ ಸಾಕ್ಷಿ. ಋಣಮುಕ್ತ ಕಾಯ್ದೆಗೆ ಅರ್ಜಿ ಸಲ್ಲಿಸಲು ಮಂಗಳವಾರ ಕೊನೆಯ ದಿನವಾದ ಹಿನ್ನೆಲೆ ಸೋಮವಾರದಂದು ಕುಂದಾಪುರದ ಮಿನಿವಿಧಾನಸೌದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಅರ್ಜಿ ಸಲ್ಲಿಸಿದ ದೃಶ್ಯ ಕಂಡುಬಂತು. ಆದರೆ ಬಂದವರ ಪೈಕಿ ಬಹುತೇಕರು ಸೊಸೈಟಿ (ಸಹಕಾರಿ ಸಂಘ), ಮಾನ್ಯತೆಯಿರುವ ಹಾಗೂ ಆರ್.ಬಿ.ಐ. ಮತ್ತು ಸಹಕಾರಿ ನಿಯಮ ನಿಬಂಧನೆಗೊಳಪಟ್ಟ ಸಂಸ್ಥೆಗಳಲ್ಲಿ ಪಡೆದ ಸಾಲ ಮನ್ನಾ ಆಗುವ ನಂಬಿಕೆಯಲ್ಲಿ ಬಂದು ಅರ್ಜಿ ಸಲ್ಲಿಸಿದರು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಹಕಾರಿ ಸಂಘದಲ್ಲಿ ಅಡಮಾನ ಇಟ್ಟ ಚಿನ್ನಾಭರಣವೂ ಕೂಡ ಋಣಮುಕ್ತ ಕಾಯ್ದೆಯಲ್ಲಿ ಮನ್ನಾ ಆಗಲಿದೆ ಎಂಬ ಸುಳ್ಳು ಸುದ್ದಿ ನಂಬಿದ ಸಾವಿರಾರು ಮಂದಿ ಈ ಕುರಿತು ಅರ್ಜಿ ಸಲ್ಲಿಸಿದರು.

ಸಾವಿರಾರು ಜನರು!
ಇಡೀ ಜಿಲ್ಲೆಗೆ ಕುಂದಾಪುರದಲ್ಲಿ ಮಾತ್ರವೇ ಉಪವಿಭಾಗಾಧಿಕಾರಿ ಕಚೇರಿಯಿದೆ. ಋಣಮುಕ್ತ ಕಾಯ್ದೆ ಅರ್ಜಿಯನ್ನು ಉಪವಿಭಾಗಾಧಿಕಾರಿ ಕಚೇರಿಯಲ್ಲೇ ನೀಡಬೇಕಿರುವ ಹಿನ್ನಲೆ ಕುಂದಾಪುರಿಗರು ಮಾತ್ರವಲ್ಲದೇ ಉಡುಪಿ, ಕಾಪು, ಪಡುಬಿದ್ರೆ, ಕಾರ್ಕಳ, ಬೈಂದೂರು ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಈ ಕಚೇರಿಗೆ ಬಂದಿದ್ದರು. ಕಚೇರಿ ಸನಿಹದ ಬಳಿಯ ಅಂಗಡಿಮುಂಗಟ್ಟುಗಳಲ್ಲಿ ಋಣಮುಕ್ತ ಪತ್ರದ ಅರ್ಜಿಗಾಗಿ ಜನರು ಮುಗಿಬಿದ್ದರು. ಅರ್ಜಿ ತುಂಬಿಸುವರಿಗೂ ತುಂಬಾ ಡಿಮ್ಯಾಂಡ್ ಇತ್ತು. ಅರ್ಜಿ ತುಂಬಿಸದವರು 30-70 ರೂ. ತನಕ ಹಣ ಪಡೆದರು ಎಂದು ಅರ್ಜಿದಾರರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇನ್ನು ಸಾಗರೋಪಾದಿಯಲ್ಲಿ ಜನರು ಬಂದಿದ್ದರಿಂದ ಕುಂದಾಪುರ ಹೊಸ ಬಸ್ ನಿಲ್ದಾಣ ಬಳಿ ಜನದಟ್ಟಣೆ ಏರ್ಪಟ್ಟು ಟ್ರಾಫಿಕ್ ಜಾಮ್ ಕೂಡ ಆಗಿತ್ತು.

ಋಣ ಮುಕ್ತ ಕಾಯ್ದೆ ಏನು?
ವಾರ್ಷಿಕವಾಗಿ 1 ಲಕ್ಷ 20 ಸಾವಿರ ರೂ. ಆದಾಯಕ್ಕಿಂತ ಕಮ್ಮಿ ಹೊಂದಿದ ರೈತರು, ಸಣ್ಣ ರೈತರು, ಭೂಮಿ ಇಲ್ಲದ ರೈತರು ಮತ್ತು ಕಾರ್ಮಿಕರು, ದುರ್ಬಲ ವರ್ಗದ ಮಂದಿ ಮತ್ತು ಯಾವುದೇ ಇತರೇ ಯಾವ ಮೂಲದಿಂದಲೂ ಆದಾಯವಿಲ್ಲದವರು ಈ ಕಾಯ್ದೆಯಡಿ ಅರ್ಜಿ ಸಲ್ಲಿಸಲು ಅರ್ಹರು. ಆದರೆ ಬ್ಯಾಂಕುಗಳು, ಸರಕಾರಿ ಕಂಪೆನಿ, ಸಹಕಾರಿ ಸಂಘ, ಸೌಹಾರ್ಧ ಸಹಕಾರಿ ಸಂಘ, ಎಲ್.ಐ.ಸಿ. (ಭಾರತೀಯ ಜೀವಾ ವೀಮಾ ನಿಗಮ) ಸೇರಿದಂತೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ಅಧಿನಿಯಮ 17ರಡಿಯಲ್ಲಿ ಬರುವ ಎಲ್ಲಾ ಸಂಸ್ಥೆಗಳಲ್ಲಿ ಪಡೆದ ಮಂದಿ ಈ ಸೌಲಭ್ಯ ಪಡೆಯಲಾಗುವುದಿಲ್ಲ. ಬಂದ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ದೂರುದಾರರು ಮತ್ತು ಎದುರುದಾರರಿಗೆ ನೋಟಿಸ್ ನೀಡಿ ವಸ್ತುಸ್ಥಿತಿ ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಸಿ ಕೆ. ರಾಜು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಪ್ರಜ್ಞಾವಂತರ ಮಾತಿಗಿಲ್ಲ ಕಿಮ್ಮತ್ತು!
ಈ ಕಾಯ್ದೆ ಹೀಗಿದೆ…..ನೀವು ನಿಮ್ಮ ಸಮಯ ಹಾಗೂ ಹಣ ವ್ಯಯ ಮಾಡಬೇಡಿ..ನೋಂದಾವಣೆಯಿಲ್ಲದ ಲೇವಾದೇವಿ ವ್ಯವಹಾರಸ್ಥರಿಂದ ಪಡೆದ ಹಣದ ಬಗ್ಗೆ ಮಾತ್ರವೇ ಅರ್ಜಿ ಸಲ್ಲಿಸಿ ಎಂದು ಸೋಮವಾರ ಬೆಳಿಗ್ಗೆ ಮಿನಿವಿಧಾನಸೌಧ ಆವರಣದಲ್ಲಿ ಅಧಿಕಾರಿಗಳು, ಪ್ರಜ್ಞಾವಂತ ನಾಗರಿಕರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಜನರನ್ನು ಎಚ್ಚರಿಸುವ ಪ್ರಯತ್ನ ಮಾಡಿದರೂ ಕೂಡ ಜನರು ಮಾತ್ರ ಯಾರೊಬ್ಬರ ಮಾತನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.

 ಕುಂದಾಪುರ ಎಸಿ ಕೆ. ರಾಜು ಹೇಳೋದು ಏನು?
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ಈಗಾಗಾಲೇ ಐದು ಸಾವಿರಕ್ಕು ಅಧಿಕ ಅರ್ಜಿಗಳು ಬಂದಿದ್ದು ಇಂದು ಮತ್ತೆ ನಾಳೆ ಅರ್ಜಿ ಸಲ್ಲಿಕೆಯಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆಯಿದೆ. ರಿಜಿಸ್ಟರ್ ಮಾಡಿದ ಮತ್ತು ಸಹಕಾರಿ ಸಂಘದ ಕಾಯ್ದೆಯಡಿ ಬರುವ ಜನರು ಅನಗತ್ಯ ಗೊಂದಲಕ್ಕೀಡಾಗಬಾರದು ಎಂದರು.

ಗೊಂದಲ ಬೇಡ…
ಋಣ ಮುಕ್ತ ಕಾಯ್ದೆ ವಿಚಾರದಲ್ಲಿ ಜನರು ತುಂಬಾ ಗೊಂದಲಕ್ಕೀಡಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಊಹಾಪೋಹ ಸುದ್ದಿ ನಂಬುವುದು ಸರಿಯಲ್ಲ. ಕಾಯ್ದೆಯ ಬಗ್ಗೆ ಮಾಧ್ಯಮಗಳಲ್ಲಿ ವಿಸ್ತಾರವಾದ ವರದಿಗಳು ಬಂದಿದ್ದು ಅದನ್ನು ನಂಬಿ ಅದರಂತೆಯೇ ನಡೆದರೆ ಸಮಯ ಹಾಗೂ ಹಣ ಉಳಿಯುತ್ತದೆ.
– ಸುರೇಂದ್ರ ಕಾಂಚನ್ ಸಂಗಮ್ (ಸಾಮಾಜಿಕ ಹೋರಾಟಗಾರ)

(ವರದಿ- ಯೋಗೀಶ್ ಕುಂಭಾಸಿ)

Comments are closed.