ಕರಾವಳಿ

ತುಂಬಿ ಹರಿಯುವ ಸೌಪರ್ಣಿಕೆಯಲ್ಲಿ ಕೊಚ್ಚಿಹೋದ ವ್ಯಕ್ತಿ ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಸಿಬ್ಬಂದಿ(Video)

Pinterest LinkedIn Tumblr

ಕುಂದಾಪುರ‌: ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಕೊಲ್ಲೂರು ಸೌಪರ್ಣಿಕಾ ಹೊಳೆಯಲ್ಲಿ ಪತ್ತೆಯಾದ ವ್ಯಕ್ತಿಯೊಬ್ಬರ ಮೃತದೇಹವನ್ನು ಕುಂದಾಪುರ ಅಗ್ನಿಶಾಮಕ ದಳ ಸಿಬ್ಬಂದಿ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿ ಮೇಲಕ್ಕೆತ್ತಿದ್ದಾರೆ. ಭಾನುವಾರ ಮಧ್ಯಾಹ್ನದ ಸುಮಾರಿಗೆ ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಅಗ್ನಿಶಾಮಕ ದಳ ಕಾರ್ಯಾಚರಣೆ…
ಕುಂದಾಪುರ ಅಗ್ನಿಶಾಮಕ ಠಾಣಾಧಿಕಾರಿ ಕೆ.ಎನ್. ಮೊಗೇರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ನಾಗರಾಜ ಪೂಜಾರಿ ಸಾಸ್ತಾನ ಎನ್ನುವರು ನೀರಿನ ಸೆಳೆತದ ನಡುವೆ ನದಿಗೆ ದುಮುಕಿ ಮೃತದೇಹ ಮೇಲಕ್ಕೆ ತೆಗೆಯುವ ಸಲುವಾಗಿ ಕಾರ್ಯೋನ್ಮುಖರಾಗಿದ್ದಾರೆ. ಇವರಿಗೆ ಪ್ರಮುಖ ಅಗ್ನಿಶಾಮಕ ನೂತನ್ ಕುಮಾರ್, ಸಿಬ್ಬಂದಿಗಳಾದ ಮುಸ್ತಾಪ್, ರವೀಂದ್ರ ಎಸ್. ದೇವಾಡಿಗ, ರಾಘವೇಂದ್ರ, ಚಂದ್ರಕಾಂತ್ ನಾಯ್ಕ್ ಮೊದಲಾದವರಿದ್ದರು.

ಸುಮಾರು 65 ವರ್ಷ ಪ್ರಾಯದ ಅಪರಿಚಿತ ವೃದ್ಧನ ಮೃತದೇಹ ಇದಾಗಿದ್ದು ನಿತ್ಯ ಕರ್ಮಕ್ಕಾಗಿ ನದಿ ಸಮೀಪ ತೆರಳಿದ್ದು ಕಾಲು ಜಾರಿ ಬಿದ್ದ ಅವರು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದು ನದಿಯ ಮಧ್ಯದ ಮರದಲ್ಲಿ ಶವ ಸಿಲುಕಿಕೊಂಡಿತ್ತು.

ಘಟನಾ ಸ್ಥಳಕ್ಕೆ ಕೊಲ್ಲೂರು ಪಿಎಸ್ಐ ಶಿವಕುಮಾರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು ಮೃತ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

ಚಹರೆ:
ಅಂದಾಜು ವಯಸ್ಸು 60 -65 ವರ್ಷ
ಮೈಕಟ್ಟು- ಸಾಧಾರಣ ಶರೀರ, ಕೋಲು ಮುಖ
ಬಣ್ಣ- ಎಣ್ಣೆ ಕಪ್ಪುಮೈಬಣ್ಣ , ಕಪ್ಪು ಬಿಳಿ ಮಿಶ್ರಿತ ತಲೆ ಕೊದಲು ,ಗಡ್ಡ ಮೀಸೆ
ಬಟ್ಟೆ- ಕೇಸರಿ ಬಣ್ಣದ ಲುಂಗಿ , ಕೇಸರಿ ಬಣ್ಣದ ಅಂಗಿ ಧರಿಸಿರುತ್ತಾರೆ.
ಗುರುತು: ಮೃತನ ಎರಡು ಕೋಲು ಕಾಲುಗಳಲ್ಲಿ ಪಾದದಿಂದ ಮಣೆಗಂಟು ಮಧ್ಯದಲ್ಲಿ ಅಲ್ಲಿಲ್ಲಿ ಬಿಳಿ ತೊನ್ನು ಕಲೆ ಇರುತ್ತದೆ. ಬೆನ್ನಿನಲ್ಲಿ ಕಪ್ಪು ಮಚ್ಚೆ ಇರುತ್ತದೆ.

ಮೇಲಿನ ವಯಸ್ಸಿನ ಹಾಗೂ ಬಟ್ಟೆ ಧರಿಸಿದ್ದ ಗಂಡಸು ತಮ್ಮ ಠಾಣಾ ಸರಹದ್ದಿನಲ್ಲಿ ಕಾಣೆಯಾಗಿದ್ದಲ್ಲಿ ಕೊಲ್ಲೂರು ಪೊಲೀಸು ಠಾಣೆಯನ್ನು ಅಥವಾ ಈ ಕೆಳಗಿನ ದೂರವಾಣಿ ಸಂಪರ್ಕಿಸಲು ಕೋರಲಾಗಿದೆ.

ಸಂಪರ್ಕಿಸಬೇಕದ ಸಂಖ್ಯೆ:
ಕೊಲ್ಲೂರು ಪೊಲೀಸು ಠಾಣೆ: 08254 – 258233, ಮೊಬೈಲ್‌ : 9480805460
ಬೈಂದೂರು ವೃತ್ತ ಕಚೇರಿ 08254 – 251031 ಮೊಬೈಲ್‌: 9480805434
ಪೊಲೀಸ್ ಕಂಟ್ರೋಲ್ ರೂಮ್: 100

(ವರದಿ- ಯೋಗೀಶ್ ಕುಂಭಾಸಿ)

Comments are closed.