ರಾಷ್ಟ್ರೀಯ

ಸಹಪಾಠಿಯ ಸಾವಿಗೆ ರೊಚ್ಚಿಗೆದ್ದ ವಿದ್ಯಾರ್ಥಿಗಳಿಂದ ಶಾಲೆಗೇ ಬೆಂಕಿ

Pinterest LinkedIn Tumblr

ನವದೆಹಲಿ: ಲಾಹೋರ್​ನ ಗುಲ್​ಶಾನ್​ ಎ ರಾವಿ ಏರಿಯಾದಲ್ಲಿರುವ ಅಮರಿಕನ್​ ಲಿಸ್ಟಫ್​ ಶಾಲೆಗೆ ಅದೇ ಶಾಲೆಯ 10 ನೇ ತರಗತಿ ವಿದ್ಯಾರ್ಥಿಗಳು ಬೆಂಕಿ ಹಚ್ಚಿದ್ದಾರೆ. ಇದನ್ನು ಕಿಡಿಗೇಡಿತನ ಅನ್ನಬೇಕೋ ಅಥವಾ ನೋವನ್ನು ಹೊರಹಾಕಿದ ಬಗೆ ಎನ್ನಬೇಕೋ ಎಂಬುದನ್ನು ಈ ಸುದ್ದಿ ಓದಿದ ಬಳಿಕವಷ್ಟೇ ತೀರ್ಮಾನಿಸಬಹುದು.

ಇದು ಗುರುವಾರ ಬೆಳಗ್ಗೆ ನಡೆದಿರುವ ಘಟನೆಯಾದರೂ ತಡವಾಗಿ ಬೆಳಕಿಗೆ ಬಂದಿದೆ. ಅಂದು ಬೆಳಗ್ಗೆ ಸಿಟ್ಟಿನಿಂದ ಶಾಲೆಗೆ ಬಂದ ವಿದ್ಯಾರ್ಥಿಗಳು ತಮ್ಮೊಂದಿಗೆ ಪೆಟ್ರೋಲ್​ ತುಂಬಿದ್ದ ಬಾಟಲಿಗಳನ್ನು ತಂದಿದ್ದರು. ಅಲ್ಲದೆ ಶಾಲಾ ಕಟ್ಟಡದ ಎರಡು ಕೊಠಡಿಗಳಿಗೆ ಬೆಂಕಿಯನ್ನೂ ಹಚ್ಚಿದ್ದಾರೆ. ಅದಕ್ಕೆ ಕಾರಣ ಹೀಗಿದೆ…

ಹಫೀಜ್ ಹುನೈನ್ ಬಿಲಾಲ್ ಎಂಬಾತ ಈ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿದ್ದ. ಹಿಂದಿನ ದಿನ ಮಾಡಿದ್ದ ಪಾಠವನ್ನು ಮನನ ಮಾಡಿಕೊಂಡು ಬರುವಂತೆ ಕೊಡಲಾಗಿದ್ದ ಹೋಂವರ್ಕ್​ ಅನ್ನು ಮಾಡಿಕೊಳ್ಳದೇ ಬಂದಿದ್ದ. ಈ ಕಾರಣಕ್ಕಾಗಿ ಶಿಕ್ಷಕ ಖಮ್ರಾನ್​ ಎಂಬುವರು ಆ ಬಾಲಕನ ಬೆನ್ನು, ಹೊಟ್ಟೆ ಭಾಗಕ್ಕೆ ಹಿಗ್ಗಾಮುಗ್ಗಾ ಥಳಿಸಿದ್ದರು. ಅಲ್ಲದೆ ಆತನ ತಲೆಯನ್ನು ಗೋಡೆಗೆ ಜಪ್ಪಿದ್ದರು. ಪೆಟ್ಟಿನಿಂದಾಗಿ ಪ್ರಜ್ಞೆ ಕಳೆದುಕೊಂಡಿದ್ದ. ಆತನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯದೆ ನಿರ್ಲಕ್ಷ್ಯ ತೋರಿದ್ದರಿಂದ ಆತ ಮೃತಪಟ್ಟಿದ್ದ. ವಿದ್ಯಾರ್ಥಿಯನ್ನು ಖಮ್ರಾನ್​ ಮನಬಂದಂತೆ ಥಳಿಸುತ್ತಿರುವ ದೃಶ್ಯವನ್ನು ಮೊಬೈಲ್​ನಲ್ಲಿ ಚೀತ್ರೀಕರಿಸಿಕೊಂಡಿದ್ದ ವಿದ್ಯಾರ್ಥಿಯೊಬ್ಬ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದ. ಇದು ವೈರಲ್​ ಆಗಿತ್ತು.

ತಮ್ಮ ಸಹಪಾಠಿಯ ಮೇಲೆ ಶಿಕ್ಷಕರು ನಡೆಸಿದ ದೌರ್ಜನ್ಯದಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಶಾಲೆಗೆ ಬೆಂಕಿ ಹಚ್ಚಿದರು ಎನ್ನಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಟುಂಬದವರೂ ತಮಗೆ ನ್ಯಾಯ ಕೊಡಿಸಬೇಕು, ಶಿಕ್ಷಕ ಕಮ್ರಾನ್​ಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಪಂಜಾಬ್​ ಪ್ರಾಥಮಿಕ ಶಿಕ್ಷಣ ಸಚಿವ ಮುರಾದ್​ ರಾಸ್​ ಮೃತ ಬಾಲಕನ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಅಲ್ಲದೆ, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Comments are closed.