ಕರಾವಳಿ

ಹೊಸಂಗಡಿ-ಸಿದ್ದಾಪುರದ ಕೋಟೆಕೆರೆ ಕಪ್ಪೆಗುಂಡಿ ಹೊಳೆಯ ಕಾಲು ಸಂಕದಲ್ಲಿ‌ ‘ಸರ್ಕಸ್’ ಪಯಣ! (Video)

Pinterest LinkedIn Tumblr

ಕುಂದಾಪುರ: ಪ್ರಪಂಚ ಎಷ್ಟೇ ಮುಂದುವರಿದರೂ ಕೂಡ ಇನ್ನೂ ಅದೆಷ್ಟೋ ಹಳ್ಳಿಗಳಲ್ಲಿ ಅಭಿವೃದ್ಧಿ ಮಾತ್ರ ಮರಿಚಿಕೆ ಎನ್ನುವುದಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದ ಊರೊಂದು ಸಾಕ್ಷಿಯಾಗಿ ನಿಂತಿದೆ. ಎರಡು ಅಪಾಯಕಾರಿ ಕಾಲುಸಂಕ ದಾಟಿದರೆ ಮಾತ್ರ ಇನ್ನೊಂದು ಊರು ಸೇರಲು ಸಾಧ್ಯ. ಇಲ್ಲಿನ ಜನರ ನಿತ್ಯ ಸಮಸ್ಯೆ ಕುರಿತ ಸ್ಟೋರಿಯೊಂದು ಇಲ್ಲಿದೆ ನೋಡಿ.

ಅಪಾಯಕಾರಿ ಎರಡು ಸಂಕಗಳು!
ಬೈಂದೂರು ವಿಧಾನಸಭಾ ಕ್ಷೇತ್ರದ ಹೊಸಂಗಡಿ ಎನ್ನುವುದು ಕುಂದಾಪುರದ ತುತ್ತತುದಿ. ಈ ಗ್ರಾಮಪಂಚಾಯತ್ ವ್ಯಾಪ್ತಿಗೆ ಸೇರುವ ಅತ್ತಿಕೊಡ್ಲು ಹಾಗೂ ಸಿದ್ದಾಪುರ ಗ್ರಾಮಪಂಚಾಯತ್ ವ್ಯಾಪ್ತಿಗೆ ಸೇರುವ ಅಬ್ಬಿಮಕ್ಕಿ ಜನರು ಇಲ್ಲಿ ಹರಿಯುವ ಎರಡು ಭಯಾನಕ ಹೊಳೆಗಳನ್ನು ದಾಟಿ ಇನ್ನೊಂದು ಊರು ಸೇರೋಕೆ ಕೈಯಲ್ಲಿ ಜೀವ ಹಿಡಿದೇ ಕಾಲು ಸಂಕದ ಮೇಲೆ ಸಾಗಬೇಕು. ಹೊಸಂಗಡಿ ಭಾಗದಿಂದ ಹರಿದು ಬರುವ ಕೋಟಕೆರೆ ಹೊಳೆ ಹಾಗೂ ಇನ್ನೊಂದು ಭಾಗದಿಂದ ಕೆಪ್ಪೆಹೊಂಡ ಹೊಳೆಯು ಮಳೆಗಾಲದಲ್ಲಿ ಇಲ್ಲಿನ ಜನರಿಗೆ ಅಕ್ಷರಶಃ ಶಾಪವಾಗಿ ಪರಿಣಮಿಸುತ್ತೆ. 15 ಅಡಿ ಉದ್ದದ ಎರಡು ಕಾಲು ಸಂಕವನ್ನು ಪ್ರತಿವರ್ಷ ಮಳೆಗಾಲದಲ್ಲಿ ಜನರೇ ನಿರ್ಮಿಸಿಕೊಳ್ಳುತ್ತಾರೆ. ಒಂದೊಮ್ಮೆ ಅಧಿಕ ಮಳೆ ಬಂದು ಹೊಳೆಯಲ್ಲಿ ನೀರು ಜಾಸ್ಥಿಯಾದ್ರೆ ಈ ಕಾಲು ಸಂಕವು ಕೊಚ್ಚಿಹೋಗುತ್ತೆ. ಇನ್ನು ಈ ಅಪಾಯಕಾರಿಯಾದ ಎರಡು ಕಾಲುಸಂಕದಲ್ಲಿ ನಾಜೂಕಾಗಿ ಹೆಜ್ಜೆ ಇಟ್ಟರೆ ಮಾತ್ರ ಸುರಕ್ಷಿತವಾಗಿ ಇನ್ನೊಂದು ದಡ ತಲುಪಲು ಸಾಧ್ಯ.ಕೊಂಚ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ.

ಓಟು ಪಡೆದವರಿಂದ ಸ್ಪಂದನೆಯಿಲ್ಲ?
ಹಲವು ದಶಕಗಳಿಂದಲೂ ಪ್ರತಿ ವರ್ಷ ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳು ಈ ಕಾಲು ಸಂಕವನ್ನು ಬಳಸ್ತಾರೆ. ಸುಮಾರು ಇಪ್ಪತ್ತು ಮನೆಗಳಿದ್ದು ಹತ್ತಾರು ಶಾಲಾ-ಕಾಲೇಜು ಅಂಗನವಾಡಿಗೆ ತೆರಳುವ ಮಕ್ಕಳಿದ್ದಾರೆ. ಅನಾರೋಗ್ಯ ಪೀಡಿತರನ್ನಂತು ಇದೇ ಕಾಲು ಸಂಕದಲ್ಲಿ ಹರಸಾಹಸಪಟ್ಟು ಹೊತ್ತೊಯ್ದ ಘಟನೆಯೂ ನಡೆದಿದೆಯಂತೆ. ನಿತ್ಯ ಶಾಲಾ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಮಂದಿ ಸಂಕ ದಾಟಿ ಹೆನ್ನಾಬೈಲು ಅಥವಾ ಅಬ್ಬಿಮಕ್ಕಿಗೆ ಬರಬೇಕು. ದೂರದೂರಿಗೆ ತೆರಳಲು ಬಸ್ ಅಥವಾ ಇತರೆ ವಾಹನ ಪ್ರಯಾಣಿಕರು ಕೂಡ ಇಲ್ಲಿಗೆ ಬರೋದು ಅಗತ್ಯ. ಇಲ್ಲಿಗೊಂದು ಸುಸಜ್ಜಿತ ಕಾಲು ಸೇತುವೆ ಮಾಡಿಕೊಡಿ ಎಂಬ ಬೇಡಿಕೆಯನ್ನು ಸುಮಾರು ಮೂರು ದಶಕಗಳಿಂದ ಇಟ್ಟರೂ ಕೂಡ ಯಾವೊಬ್ಬ ಜನಪ್ರತಿನಿಧಿಯೂ ಕೂಡ ಈ ಬಗ್ಗೆ ಇಚ್ಚಾಶಕ್ತಿ ತೋರಿಲ್ಲ.

ಒಂದು ಸೇತುವೆ ಎರಡು ಸಮಸ್ಯೆ ಪರಿಹಾರ…
ಕೋಟಕೆರೆ ಹೊಳೆ ಹಾಗೂ ಕೆಪ್ಪೆಹೊಂಡ ಹೊಳೆಯ ಒಂದು ಮೂಲೆಯಲ್ಲಿ ಕೇಂದ್ರೀಕರಿಸಿಕೊಂಡು ಚಂದ್ರಶೇಖರ್ ಶೆಟ್ಟಿ ಅವರ ತೋಟದಿಂದ ಇನ್ನೊಂದು ಬದಿಗೆ ಪೂಟ್ ಬ್ರಿಡ್ಜ್ ಮಾಡಿದರೆ ಎರಡು ಸೇತುವೆ ಅಗತ್ಯವೂ ಇಲ್ಲ ಮತ್ತು ಒಂದೇ ಕಾಲು ಸೇತುವೆಯಲ್ಲಿ ಇಲ್ಲಿನ ಜನರ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ. ಪ್ರತಿ ವರ್ಷವೂ ಕೂಡ ಮನವಿ ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಇಲ್ಲಿನ ಜನರು ರೋಸಿ ಹೋಗಿದ್ದಾರೆ.

ಒಟ್ಟಿನಲ್ಲಿ ಓಟು ಪಡೆದು ಆರಿಸಿ ಬರುವ ಜನಪ್ರತಿನಿಧಿಗಳು ಇಲ್ಲಿನ ಜನರ ಮೂವತ್ತು ವರ್ಷಗಳ ಬೇಡಿಕೆಗೆ ಇನ್ನಾದರೂ ಸ್ಪಂದಿಸಿ‌ ಇಲ್ಲಿಗೊಂದು ಶಾಶ್ವತ ಕಾಲು ಸೇತುವೆ ಮಾಡಿಕೊಡುವರೇ ಕಾದು ನೋಡಬೇಕಿದೆ.

ಚಿತ್ರ,ವರದಿ- ಯೋಗೀಶ್ ಕುಂಭಾಸಿ

Comments are closed.