ರಾಷ್ಟ್ರೀಯ

ಭೂ ಕುಸಿತಕ್ಕೆ ಕೊಚ್ಚಿಹೋದ ಆತನ ಇಡೀ ಕುಟುಂಬ; ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಘಟನೆ!

Pinterest LinkedIn Tumblr


ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಉಂಟಾದ ಭೂ ಕುಸಿತಕ್ಕೆ ಮನೆಯ ಯಜಮಾನನ ಕಣ್ಣೆದುರೇ ಇಡೀ ಕುಟುಂಬ ಕೊಚ್ಚಿಹೋದ ಮನಕಲಕುವ ಘಟನೆಗೆ ಮಲಪ್ಪುರಂ ಜಿಲ್ಲೆ ಸಾಕ್ಷಿಯಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಕುಟುಂಬದ ದುರಂತ ಅಂತ್ಯಕ್ಕೆ ಇದೀಗ ಇಡೀ ಕೇರಳ ಮರುಕ ವ್ಯಕ್ತಪಡಿಸುತ್ತಿದೆ.

ಮಲಪ್ಪುರಂ ಜಿಲ್ಲೆಯ ಸುತ್ತಮುತ್ತಲ ಭಾಗದಲ್ಲಿ ಕಳೆದ ಒಂದು ವಾರದಿಂದ ಎಡೆಬಿಡದೆ ಮಳೆಯಾಗುತ್ತಿದೆ. ಪರಿಣಾಮ ಗುಡ್ಡಗಾಡು ಪ್ರದೇಶವಾದ ಕೊಟ್ಟಕುನ್ನು ನಿವಾಸಿಯಾಗಿರುವ ಶರತ್ ನಿನ್ನೆ ಸಂಜೆ ತನ್ನ ತಾಯಿಯ ಜೊತೆಗೆ ಮಾತನಾಡುತ್ತಾ ಮನೆಯಿಂದ ಹೊರಗೆ ನಿಂತು ಸುತ್ತಮುತ್ತಲ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದರು. ಈ ವೇಳೆ ದಿಢೀರನೆ ಭೂ ಕುಸಿತವಾಗಿದೆ.

ಕೊನೆಯ ಕ್ಷಣದಲ್ಲಿ ಕಂಡ ಭೂ ಕುಸಿತದಿಂದ ಪಾರಾಗಲು ಆತ ತನ್ನ ತಾಯಿಯ ಜೊತೆಗೆ ವೇಗವಾಗಿ ಓಡಲು ಪ್ರಯತ್ನಿಸಿದ್ದಾನೆ. ಆದರೆ, ಆತ ವೇಗವಾಗಿ ಮನೆಯ ಮೂಲೆಗೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಓಡಲಾಗದ ಆತನ ತಾಯಿ ಸರೋಜಿನಿ ವೇಗವಾಗಿ ನುಗ್ಗಿಬಂದ ಭೂ ಕುಸಿತಕ್ಕೆ ಬಲಿಯಾಗಿದ್ದಾರೆ. ಅವರ ಜೊತೆಗೆ ಇಡೀ ಮನೆಯೂ ಕೊಚ್ಚಿಹೋಗಿದ್ದು ಮನೆಯೊಳಗಿದ್ದ ಶರತ್ ಪತ್ನಿ ಗೀತಾ ಹಾಗೂ ಆತನ ಒಂದೂವರೆ ವರ್ಷದ ಮಗುವೂ ಸಾವನ್ನಪ್ಪಿದೆ ಎಂದು ವರದಿಯಾಗಿದೆ.

ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಘಟನೆ ನಡೆದಿದ್ದು, ನಿನ್ನೆ ಸಂಜೆಯಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಆದರೆ, ಮಣ್ಣಿನ ಅಡಿಯಲ್ಲಿ ಸಿಲುಕಿದವರನ್ನು ಈವರೆಗೆ ಹೊರತೆಗೆಯಲು ಸಾಧ್ಯವಾಗುತ್ತಿಲ್ಲ.

ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಒಂದಿಡೀ ಕುಟುಂಬದ ದುರಂತ ಸಾವಿಗೆ ಕೇರಳದ ಜನ ಮರುಕ ವ್ಯಕ್ಯಪಡಿಸಿದ್ದಾರೆ.

ಮಲಪ್ಪುರಂ ಜಿಲ್ಲೆಯಲ್ಲಿ ವಾಸಿಸುವ ಜನರಿಗೆ ಭೂ ಕುಸಿತದ ಬಗ್ಗೆ ಈ ಹಿಂದೆಯೇ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿತ್ತು. ಆದರೆ, 17 ಕುಟುಂಬಗಳು ಮಾತ್ರ ಪರಿಹಾರ ಶಿಬಿರಕ್ಕೆ ತೆರಳಿವೆ. ಉಳಿದ ಕುಟುಂಬಗಳು ತಮ್ಮ ಗ್ರಾಮಗಳಲ್ಲಿ ಉಳಿದುಕೊಂಡಿದ್ದು ಇನ್ನೂ ಅಧಿಕ ಜನ ಭೂ ಕುಸಿತಕ್ಕೆ ತುತ್ತಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಈವರೆಗೆ ಪ್ರವಾಹಕ್ಕೆ 42 ಜನ ಬಲಿಯಾಗಿದ್ದು, ಲಕ್ಷಕ್ಕೂ ಹೆಚ್ಚು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೇರಳದ ಎರ್ನಾಕುಳಂ, ಇಡುಕ್ಕಿ, ಪಾಲಕ್ಕಾಡ್, ಮಲಪ್ಪುರಂ ಹಾಗೂ ಕೋಳಿಕೋಜ್ ಜಿಲ್ಲೆಗಳಲ್ಲಿ ಶನಿವಾರವೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣೆ ರೆಡ್ ಅಲರ್ಟ್ ನೀಡಿದೆ. ಅಲ್ಲದೆ ಆಲಪ್ಪುಳ, ಕೊಟ್ಟಾಯಂ, ತ್ರಿಶೂರ್ ಹಾಗೂ ಕಾಸರಗೋಡು ಜಿಲ್ಲೆಗಳಿಗೆ ಕಿತ್ತಲೆ ಎಚ್ಚರಿಕೆ ನೀಡಿದೆ.

Comments are closed.