ಕರಾವಳಿ

ಅವಳಿ ಜಿಲ್ಲೆಯಲ್ಲಿ ನಡೆಯುವ ಕೊಲೆ, ಅತ್ಯಾಚಾರಗಳ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲ: ಸೊರಕೆ (Video)

Pinterest LinkedIn Tumblr

ಕುಂದಾಪುರ: ಇತ್ತೀಚಿನ ಚುನಾವಣಾ ಫಲಿತಾಂಶ ತಾತ್ಕಾಲಿಕವಾಗಿ ಕಾಂಗ್ರೆಸ್‌ಗೆ ಹಿನ್ನಡೆಯನ್ನು ಉಂಟು ಮಾಡಿದೆ. ಹಿಂದೆ ಅನೇಕ ಸಂದರ್ಭದಲ್ಲಿ ಕಾಂಗ್ರೆಸ್ ಈ ಸ್ಥಿತಿಗಳನ್ನು ಮೀರಿ ಎದ್ದು ನಿಂತ ಸಾಕಷ್ಟು ಉದಾಹರಣೆಗಳಿವೆ. ಪಕ್ಷವನ್ನು ತಳ ಮಟ್ಟದಿಂದ ಕಟ್ಟಬೇಕು ಎನ್ನುವ ಉದ್ದೇಶಕ್ಕಾಗಿ ಯುವ ಕಾರ್ಯಕರ್ತರನ್ನು ಬಳಸಿಕೊಳ್ಳಬೇಕು ಎನ್ನುವ ಚಿಂತನೆಗಳನ್ನು ಪಕ್ಷ ಮಾಡುತ್ತಿದೆ. ಅಭಿವೃದ್ಧಿಗಳನ್ನು ಮಾಡಿ ದೇಶ ಕಟ್ಟುವ ಪ್ರಯತ್ನ ಮಾಡಿದ್ದ ಕಾಂಗ್ರೆಸ್ ಮತ್ತೆ ಪುಟಿದೆದ್ದು ಬರಲಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕುಂದಾಪುರದ ಈಸ್ಟ್ ವೆಸ್ಟ್ ಕ್ಲಬ್‌ನಲ್ಲಿ ಭಾನುವಾರ ನಡೆದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

 

 

ಕೊಲೆ, ಅತ್ಯಾಚಾರದ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿ ಮುಖಂಡರು ಅವಳಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಲೆ ಹಾಗೂ ಅತ್ಯಾಚಾರಗಳನ್ನು ನೋಡಿಯೂ ನೋಡದಂತೆ ಮೌನಕ್ಕೆ ಶರಣಾಗುತ್ತಿದ್ದಾರೆ. ಕೋಟದಲ್ಲಿ ವಿಪಕ್ಷ ನಾಯಕರ ಮನೆಗೆ ಅತ್ಯಂತ ಸಮೀಪದಲ್ಲಿಯೇ ಜೋಡಿ ಕೊಲೆಯಾಗಿದ್ದರೂ ಯಾರೂ ತುಟಿ ಬಿಚ್ಚುತ್ತಿಲ್ಲ. ಪುತ್ತೂರಿನಲ್ಲಿ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆದಿದ್ದರೂ ಶೋಭಾ ಕರಂದ್ಲಾಜೆ, ನಳೀನ್‌ಕುಮಾರ ಕಟೀಲ್, ಸ್ಥಳೀಯ ಬಿಜೆಪಿ ಶಾಸಕರು ಯಾವುದೆ ಹೇಳಿಕೆ ನೀಡದೆ ಇರಲು ಕಾರಣವೇನು. ದಲಿತರು ಹಿಂದೂ ಸಮುದಾಯದವರಲ್ಲವೇ ? ಅವರಿಗೆ ಈ ದೇಶದಲ್ಲಿ ಎಲ್ಲರಂತೆ ಬದುಕುವ ಹಕ್ಕು ಇಲ್ಲವೇ ಎಂದು ಪ್ರಶ್ನೆ ಮಾಡಿದ ಅವರು ಈ ಎರಡು ಪ್ರಕರಣಗಳಲ್ಲಿ ಜೈಲು ಸೇರಿರುವವರು ಯಾವ ಪಕ್ಷದವರು ಎಂದು ಜನ ತೀರ್ಮಾನಿಸುತ್ತಾರೆ ಎಂದರು.

ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಭರವಸೆಗಳನ್ನು ಮರೆತ ಬಿಜೆಪಿ ಪಕ್ಷ, ಜನರ ಭಾವನೆಗಳೊಂದಿಗೆ ಚುನಾವಣೆಯ ಆಟಗಳನ್ನು ಆಡುತ್ತಿದೆ. ಸೇನೆಯ ಸಾಧನೆಗಳನ್ನು ರಾಜಕೀಯ ಬಂಡವಾಳ ಮಾಡಿಕೊಳ್ಳುತ್ತಿದೆ. ಪುಲ್ವಾಮ ದಾಳಿಯನ್ನೆ ಚುನಾವಣಾ ಅಸ್ತ್ರವನ್ನಾಗಿಸಿಕೊಂಡು ಬಿಜೆಪಿಯಿಂದ ಆಯ್ಕೆಯಾದ 303 ಸಂಸದರಲ್ಲಿ ಒಬ್ಬರೇ ಒಬ್ಬ ಅಲ್ಪಸಂಖ್ಯಾಕರಿಲ್ಲ, ರಾಜ್ಯದಿಂದ ಆಯ್ಕೆಯಾದ 25 ಸಂಸದರಲ್ಲಿ ಒಬ್ಬರೂ ಹಿಂದೂಳಿದ ಸಮಾಜದವರಿಲ್ಲ ಎಂದು ಬೊಟ್ಟು ಮಾಡಿದ ಅವರು ಆದರೂ ಬಿಜೆಪಿ ದೇಶಕ್ಕೆ ಸಾಮಾಜಿಕ ನ್ಯಾಯವನ್ನು ಹೇಳುತ್ತಿದೆ ಎಂದು ಲೇವಡಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಗೆ ನೂತನ ಸಾರಥಿ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ
ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನಿಯೋಜಿತರಾಗಿರುವ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಮಾತನಾಡಿ, ಪಕ್ಷದ ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆ ಮಾಡುವೆ. ಕುಂದಾಪುರದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಕಾಂಗ್ರೆಸ್ ಹೋರಾಟದ ಚಿಂತನೆ ನಡೆಸಿದೆ ಎಂದರು.

ನಿರ್ಗಮಿತ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕೆಎಂಎಫ್ ಉಪಾಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಮಾಣಿಗೋಪಾಲ, ರಾಜ್ಯ ಐಟಿ ಸೆಲ್‌ನ ಚಂದ್ರಶೇಖರ ಶೆಟ್ಟಿ, ಸನ್ಮತ್ ಹೆಗ್ಡೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಶ್ರೀಧರ ಶೇರುಗಾರ, ಪ್ರಭಾವತಿ ಶೆಟ್ಟಿ, ಅಬ್ಬು ಮಹಮ್ಮದ್, ಅಶ್ಫಾಕ್ ಕೋಡಿ, ಲಕ್ಷ್ನೀ ಪೂಜಾರ್ತಿ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಬಿ.ಹಿರಿಯಣ್ಣ, ಇಸ್ಮಾಯಿಲ್ ಅತ್ರಾಡಿ, ಎಸ್.ರಾಜೂ ಪೂಜಾರಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ದೇವಾನಂದ ಶೆಟ್ಟಿ, ಸಂತೋಷ್‌ಕುಮಾರ ಶೆಟ್ಟಿ ಹಕ್ಲಾಡಿ, ತಿಮ್ಮ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪ್ರದೀಪ್‌ಕುಮಾರ ಶೆಟ್ಟಿ ಕಾವ್ರಾಡಿ, ಮದನ್‌ಕುಮಾರ ಉಪ್ಪುಂದ, ಶಂಕರ ಕುಂದರ್, ಪಕ್ಷದ ಪ್ರಮುಖರಾದ ಮುಸ್ತಾಕ್ ಅಹಮ್ಮದ್ ಬೆಳ್ವೆ, ಮಹೇಶ್ ಹೆಗ್ಡೆ ಮೊಳಹಳ್ಳಿ, ಜಯರಾಮ್ ಶೆಟ್ಟಿ ಬೆಳ್ವೆ, ಜ್ಯೋತಿ ವಿ ಪುತ್ರನ್, ಸಂಪಿಗೇಡಿ ಸಂಜೀವ ಶೆಟ್ಟಿ, ಕೃಷ್ಣದೇವ್ ಕಾರಂತ್, ಬಿ.ಹಾರೂನ್ ಸಾಹೇಬ್, ಸತೀಶ್ ಕಿಣಿ ಬೆಳ್ವೆ, ಗಣೇಶ್ ಶೇರುಗಾರ, ಕೃಷ್ಣ ಪೂಜಾರಿ ಅಮಾಸೆಬೈಲ್, ಅನಂತಪದ್ಮನಾಭ ಚಾತ್ರ ಇದ್ದರು.

Comments are closed.