ರಾಷ್ಟ್ರೀಯ

ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾದ ಯುವತಿಗೆ ಸ್ಥಳೀಯರು ಕೊಟ್ಟ ಶಿಕ್ಷೆ ಏನು ಗೊತ್ತೇ..? ಪ್ರೀತಿಗಾಗಿ ಆಕೆ ಮಾಡಿದ್ದೇನು..?

Pinterest LinkedIn Tumblr

ಭೋಪಾಲ್: ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಮಹಿಳೆಯೊಬ್ಬಳಿಗೆ ಸ್ಥಳೀಯ ಹಿರಿಯರು ಆಕೆಯ ಗಂಡನ್ನು ಹೊತ್ತು ಸಾಗುವ ಶಿಕ್ಷೆ ನೀಡಿದ್ದು, ತನ್ನ ಗಂಡನನ್ನು ಭುಜದ ಮೇಲೆ ಹೊತ್ತು ಸಾಗುತ್ತಿರುವ ಮಹಿಳೆಯ ವಿಡಿಯೋ ಇದೀಗ ವೈರಲ್ ಆಗಿದೆ.

ಈ ಘಟನೆ ಮಧ್ಯ ಪ್ರದೇಶದ ಜಬುವಾ ಜಿಲ್ಲೆಯ ದೇವಿಘಡ್ ಗ್ರಾಮದಲ್ಲಿ ನಡೆದಿದ್ದು, ಸುಮಾರು 20 ವರ್ಷದ ಮಹಿಳೆ ತನ್ನ ಜಾತಿಯವರನ್ನು ಬಿಟ್ಟು ಬೇರೆ ಜಾತಿಯ ವ್ಯಕ್ತಿಯನ್ನು ಪ್ರೀತಿಸಿದ್ದಲ್ಲದೇ ಪೋಷಕರ ವಿರೋಧದ ನಡುವೆಯೇ ಮದುವೆಯಾಗಿದ್ದಾಳೆ ಎಂದು ಆರೋಪಿಸಿ ಸ್ಥಳೀಯ ಹಿರಿಯರು ಆಕೆಗೆ ತನ್ನ ಗಂಡನನ್ನು ಹೊತ್ತು ಸಾಗುವ ಶಿಕ್ಷೆ ನೀಡಿದ್ದಾರೆ. ವಿಡಿಯೋದಲ್ಲಿರುವಂತೆ, ಮಹಿಳೆ ಶಿಕ್ಷೆಯ ಅನ್ವಯ ತನ್ನ ಭುಜದ ಮೇಲೆ ತನ್ನ ಗಂಡನನ್ನು ಕೂರಿಸಿಕೊಂಡು ಸಾಗುತ್ತಾಳೆ. ಆಯಾಸವಾದಾಗ ಆಕೆ ನಿಂತರೆ ಸಾಕು ಸುತ್ತಲೂ ಸುತ್ತವರಿದಿದ್ದ ಗ್ರಾಮಸ್ಥರು ಆಕೆಯನ್ನುಕೋಲಿನಿಂದ ಹೊಡೆದು ಸಾಗುವಂತೆ ಬೆದರಿಸುತ್ತಾರೆ.

ಅಂತೆಯೇ ಆಕೆ ಕೂಡ ಆಯಾಸವಾದರೂ ಮತ್ತೆ ಗಂಡನನ್ನು ಹೊತ್ತು ಸಾಗುತ್ತಾಳೆ. ಈ ವಿಡಿಯೋ ವೈರಲ್ ಆಗಿದ್ದು, ಮಹಿಳೆಯ ಪರವಾಗಿ ಹಲವರು ಟ್ವೀಟ್ ಮಾಡಿ ಬೆಂಬಲ ಸೂಚಿಸುತ್ತಿದ್ದಾರೆ. ಅಲ್ಲದೆ ಇಂತಹ ಶಿಕ್ಷೆ ನೀಡಿದ ಸಳೀಯರನ್ನು ಶಿಕ್ಷಿಸುವಂತೆ ಆಗ್ರಹಿಸುತ್ತಿದ್ದಾರೆ.

ಇದೀಗ ಗ್ರಾಮಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಜಬುವಾ ಎಸ್ ಪಿ ವಿನೀತ್ ಜೈನ್ ಈ ಕುರಿತು ಮಾಹಿತಿ ನೀಡಿದ್ದು, ಗ್ರಾಮಸ್ಥರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ವಿಡಿಯೋವನ್ನು ಪರಿಶೀಲಿಸಲಾಗುತ್ತಿದ್ದು, ವಿಡಿಯೋವನ್ನು ಕೂಡ ಸಾಕ್ಷಿಯನ್ನಾಗಿ ಸ್ವೀಕರಿಸಲಾಗಿದೆ. ಈ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ಇತರೆ ಆರೋಪಿಗಳನ್ನು ಶೀಘ್ರ ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

Comments are closed.