ಕರಾವಳಿ

ಬಿಜೆಪಿ ಹಿಂದುತ್ವ ಎನ್ನುತ್ತದೆ; ನಾವೇನು ಹಿಂದುಗಳಲ್ವ, ನಾವು ದೇವರಿಗೆ ಪೂಜೆ ಮಾಡಲ್ವಾ: ಸಿಎಂ ಎಚ್.ಡಿ.ಕೆ. (Video);

Pinterest LinkedIn Tumblr

ಕುಂದಾಪುರ: ಬಿಜೆಪಿಗರು ಮಾತೆತ್ತಿದರೇ ಹಿಂದುತ್ವ ಹಿಂದುತ್ವ ಅನ್ನುತ್ತಾರೆ. ಹಾಗಾದರೇ ನಾವ್ಯಾರೂ ಹಿಂದುಗಳೇ ಅಲ್ಲವೇ? ದಿನ ಬೆಳಿಗ್ಗೆ ನಾವು ನಾಡಿನ ಹಿತಕ್ಕೆ ಪೂಜೆ ಮಾಡುತ್ತೇವೆ. ಅಧಿಕಾರ, ರಾಜಕೀಯದ ಆಸೆಗೆ ಹಿಂದುತ್ವದ ನಾಟಕ ನಡೆಯುತ್ತಿದೆ. ಕರಾವಳಿ ಭಾಗದಲ್ಲಿ ರಾಜಕೀಯ ಕಾರಣಕ್ಕಾಗಿ ಕೋಮು ದ್ವೇಷಗಳನ್ನು ಬೆಳೆಸಲಾಗುತ್ತಿದೆ. ನಮ್ಮ ಯುವ ಸಮುದಾಯ ಇಂತಹ ಆಮೀಷಗಳಿಗೆ ಒಳಗಾಗ ಬಾರದು. ಶಾಂತಿ-ಸುವ್ಯವಸ್ಥೆ ಹಾಳುಗೈಯುವರನ್ನು ಹದ್ದುಬಸ್ತಿನಲ್ಲಿಡಲು ನಮ್ಮ ದೋಸ್ತಿ ಸರಕಾರ ವ್ಯವಸ್ಥೆ ಮಾಡಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕುಂದಾಪುರದ ನೆಹರೂ ಮೈದಾನದಲ್ಲಿ ಬುಧವಾರ ಸಂಜೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳ ಪರವಾಗಿ ನಡೆದ ಮಹಿಳಾ ಮೀನುಗಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೋದಿಯಿಂದ ದೇಶಕ್ಕೆ ಭವಿಷ್ಯವಿಲ್ಲ-ಎಚ್.ಡಿ.ಕೆ.
ದೇಶ ಕಾಯುವ ಸೈನಿಕರ ಪ್ರಾಣದ ಜೊತೆ ಚೆಲ್ಲಾಟವಾಡುವ ಮೂಲಕ ಪ್ರಧಾನಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದು ದೇಶಕ್ಕೆ ನಿರ್ದಿಷ್ಠ ಕಾರ್ಯಕ್ರಮವನ್ನು ನೀಡಿಲ್ಲ. ಅವರಿಂದ ದೇಶಕ್ಕೆ ಭವಿಷ್ಯವಿಲ್ಲ. ಅವರು ಇನ್ನೊಮ್ಮೆ ಪ್ರಧಾನಿಯಾಗಲು ಸಾಧ್ಯವಿಲ್ಲ. ವಿದ್ಯಾವಂತ ಯುವ ಸಮುದಾಯಕ್ಕೆ ಉದ್ಯೋಗವಿಲ್ಲದಂತೆ ಮಾಡಿದ ಇವರ ಭ್ರಮೆಯ ಮಾತುಗಳಿಗೆ ಯುವ ಜನತೆ ಬಲಿಯಾಗಬಾರದು. ಬೆಂಗಳೂರನ್ನು ಹೊರತು ಪಡಿಸಿದರೆ ವಾಣಿಜ್ಯ ಬೆಳವಣಿಗೆಯನ್ನು ಕಾಣುತ್ತಿರುವ ಒಂದು ಪೂರ್ಣ ಅವಧಿಯ ಲೋಕಸಭಾ ಸದಸ್ಯರಾಗಿ ಕ್ಷೇತ್ರದ ಅಭಿವೃದ್ಧಿಗೆ ಗಮನ ಹರಿಸದ ಇಲ್ಲಿನ ಹಾಲಿ ಬಿಜೆಪಿ ಅಭ್ಯರ್ಥಿಗೆ ಮತದಾರರು ಈ ಬಾರಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದರು.

ಬ್ಲ್ಯಾಕ್ ಮನಿ ತನಿಖೆಯಾಗಲಿ: ಎಚ್.ಡಿ.ಕೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನಗಳಿಂದಲೂ ಕೋಟಿಗಟ್ಟಲೆ ಹಣದ ಆಮೀಷವನ್ನು ಒಡ್ಡಿ ಶಾಸಕರ ಖರೀದಿಗೆ ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರ ಬಳಿ ಇರುವ ಕೋಟ್ಯಾಂತರ ರೂಪಾಯಿ ಕಪ್ಪು ಹಣದ ಮೂಲವನ್ನು ತನಿಖೆ ನಡೆಸಲು ಕೇಂದ್ರ ಸರ್ಕಾರದ ಏಜೆನ್ಸಿಗಳಿಗೆ ಯಾಕೆ ಸಾಧ್ಯವಾಗುತ್ತಿಲ್ಲ. ಭಾರತೀಯ ಜನತಾ ಪಕ್ಷಕ್ಕೆ ಬಂದಿರುವ 1027 ಕೋಟಿ ಮೌಲ್ಯದ ಕಾರ್ಪೋರೇಟ್‌ ಬಾಂಡ್‌ಗಳಲ್ಲಿ ಅನಾಮಧೇಯ ಹೆಸರಿನಿಂದ ಬಂದಿರುವ 550 ಕೋಟಿ ದೇಣಿಗೆಯ ಮೂಲ ಯಾವುದು ಎನ್ನುವುದು ಭ್ರಷ್ಟಾಚಾರ ವಿರೋಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶವಾಸಿಗಳ ಮುಂದಿಡಬೇಕು. ಕಳೆದ ಲೋಕಸಭಾ ಚುನಾವಣೆಯ ವೇಳೆಯಲ್ಲಿ ದೇಶದ ಜನರಿಗೆ ಹಲವಾರು ಆಶ್ವಾಸನೆಯನ್ನು ನೀಡಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಅಂದು ನೀಡಿದ್ದ ಯಾವುದೆ ಭರವಸೆಗಳನ್ನು ಈಡೇರಿಸಿಲ್ಲ. ನೋಟು ರದ್ದತಿ, ಜಿಎಸ್‌ಟಿ ಜಾರಿ ಮುಂತಾದ ಅವೈಜ್ಞಾನಿಕ ತೀರ್ಮಾನಗಳಿಂದ ದೇಶದ ಸಾಮಾನ್ಯ ಜನರ ಬದಕನ್ನು ಅತಂತ್ರಗೊಳಿಸಿದ್ದಾರೆ. ಕಪ್ಪು ಹಣದ ನಿರ್ಮೂಲನೆಗಾಗಿ ನೋಟು ರದ್ದತಿ ಎಂದಿದ್ದ ಪ್ರಧಾನಿ ಮೋದಿ ಪರೋಕ್ಷವಾಗಿ ಕಪ್ಪು ಹಣದ ಹೆಚ್ಚಳಕ್ಕೆ ಕಾರಣರಾಗಿದ್ದಾರೆ.

ಜನರ ಸೇವೆ ಮಾಡುವೆ- ಪ್ರಮೋದ್
ಸಮಾವೇಶದಲ್ಲಿ ಮಾತನಾಡಿದ ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರು ಎನ್‌ಡಿಎ ಸರ್ಕಾರದ ಅವಧಿಯಲ್ಲಿ ದೇಶದ ಆರ್ಥಿಕತೆ ಸ್ಥಿತಿ ಹೀನಾಯವಾಗಿದೆ. ಮಲ್ಪೆಯಿಂದ ಕಾಣೆಯಾದ 7 ಮಂದಿ ಮೀನುಗಾರರ ಪತ್ತೆಯ ವಿಚಾರವೂ ಸೇರಿ, ಮೀನುಗಾರರ ಸಂಕಷ್ಟಗಳಿಗೆ ಕೇಂದ್ರದ ಮೋದಿ ಸರ್ಕಾರದಿಂದ ಯಾವುದೆ ರೀತಿಯ ಸ್ಪಂದನೆಗಳು ದೊರಕುತ್ತಿಲ್ಲ ಎಂದರು. ದೇಶದಲ್ಲಿಯೇ ಉಡುಪಿ–ಚಿಕ್ಕಮಗಳೂರು ಕ್ಷೇತ್ರ ಒಂದು ಹೊಸ ಮೈತ್ರಿ ಇತಿಹಾಸವನ್ನು ಸೃಷ್ಟಿಸುವ ರೀತಿಯಲ್ಲಿ ಕಾಂಗ್ರೆಸ್‌ ಪಕ್ಷದ ವ್ಯಕ್ತಿ, ಜೆಡಿಎಸ್‌ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸುತ್ತಿದ್ದಾರೆ. ತಾನು ಕಳಂಕರಹಿತನಾಗಿದ್ದು ಈ ಲೋಕಸಭಾ ಕ್ಷೇತ್ರದ ಜನರಸೇವೆ ಮಾಡಲೆಂದೆ ಬಹುಷಃ ನನ್ನನ್ನು ವಿಧಾನಸಭೆಯಲ್ಲಿ ಜನರು ಗೆಲ್ಲಿಸಿಲ್ಲ ಎಂದರು.

ಹೇಳಿಕೆಗೆ ಮಾತ್ರ ಹಿಂದುಳಿದವರು- ಗೋಪಾಲ ಪೂಜಾರಿ
ಪರೇಶ್‌ ಮೇಸ್ತಾ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆ ನೀಡಿ ವರ್ಷ ಕಳೆದಿದ್ದರೂ, ಇನ್ನೂ ಪ್ರಕರಣದ ನಿಗೂಢತೆ ಬಯಲಾಗಿಲ್ಲ. ಈ ಬಗ್ಗೆ ಬಿಜೆಪಿ ಯಾಕೆ ಬಾಯ್ಬಿಡುತ್ತಿಲ್ಲ ಎನ್ನುವುದು ನಿಗೂಢವಾಗಿದೆ. ಈ ಬಗ್ಗೆ ಅವರು ರಾಜ್ಯದ ಜನತೆಗೆ ಉತ್ತರ ನೀಡಲಿ. ಕೇವಲ ಅಧಿಕಾರದ ಹಪಾಹಪಿಗೆ ಹಿಂದುಳಿದ ವರ್ಗಗಳ ಉದ್ಧಾರ ಮಾಡುತ್ತೇವೆ ಎನ್ನುವ ಬಿಜೆಪಿಗರು ಈ ಬಾರಿ ಲೋಕಸಭಾ ಚುನಾವಣೆಗೆ ಎಷ್ಟು ಮಂದಿ ಹಿಂದುಳಿದವರಿಗೆ ಟಿಕೇಟ್ ನೀಡಿದ್ದಾರೆ ಹೇಳಲಿ. ಉಡುಪಿ-ಚಿಕ್ಕಮಗಳುರು ಹಾಗೂ ದ.ಕ. ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಅಭ್ಯರ್ಥಿಗಳು ಆಕಾಂಕ್ಷಿಗಳಿದ್ದರೂ ಕೂಡ ಅವರನ್ನು ಕಡೆಗಣಿಸಿದ್ದು ಯಾಕೇ ಎಂದು ಪ್ರಶ್ನಿಸಿದರು.

ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ, ಮಾಜಿ ಶಾಸಕ ಯು.ಆರ್‌.ಸಭಾಪತಿ ಮಾತನಾಡಿದರು. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್‌, ಬ್ಲೋಸಂ ಫೆರ್ನಾಂಡಿಸ್‌, ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌.ಬೋಜೇ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಎರಡು ಪಕ್ಷದ ಮುಖಂಡರಾದ ಮಲ್ಯಾಡಿ ಶಿವರಾಮ್‌ ಶೆಟ್ಟಿ, ವಿಕಾಸ ಹೆಗ್ಡೆ, ದಿನೇಶ್‌ ಪುತ್ರನ್‌, ನರಸಿಂಹ ಮೂರ್ತಿ, ಬಿ.ಹಿರಿಯಣ್ಣ, ಜ್ಯೋತಿ ಪುತ್ರನ್, ದೇವಕಿ ಸಣ್ಣಯ್ಯ, ಮಾಣಿ ಗೋಪಾಲ, ಶಂಕರ್ ಕುಂದರ್, ಮದನ್ ಕುಮಾರ್, ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ, ಸಬ್ಲಾಡಿ ಮಂಜಯ್ಯ ಶೆಟ್ಟಿ, ಶಾಲಿನಿ ಶೆಟ್ಟಿ, ಹುಸೇನ್ ಹೈಕಾಡಿ, ಕಿಶೋರ್ ಕುಮಾರ್, ಶ್ರೀಕಾಂತ ಅಡಿಗ, ಕೆದೂರು ಸದಾನಂದ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಹರಿಪ್ರಸಾದ್ ಶೆಟ್ಟಿ, ಸಂದೇಶ್ ಭಟ್, ಮನ್ಸೂರು ಇಬ್ರಾಹಿಂ, ಅನಿತಾ ಶೆಟ್ಟಿ, ದೇವಾನಂದ ಶೆಟ್ಟಿ, ಎಸ್‌.ರಾಜು ಪೂಜಾರಿ, ಅಶೋಕ್ ಪೂಜಾರಿ, ಇಚ್ಚಿತಾರ್ಥ ಶೆಟ್ಟಿ ಮೋಗವೀರ ಸಂಘಟನೆ ಮುಖಂಡರಾದ ಜಯ ಕೋಟ್ಯಾನ್‌, ಕೆ.ಕೆ. ಕಾಂಚನ್, ಮೀನುಗಾರರ ಸಂಘದ ರತ್ನಾ, ದಿನೇಶ್ ಪುತ್ರನ್ ಇದ್ದರು.

ರಾಜ್ಯ ಕಾಂಗ್ರೆಸ್‌ ಮುಖಂಡ ಎಂ.ಎ. ಗಫೂರ್ ಸ್ವಾಗತಿಸಿದರು. ಮಾಜಿ ಶಾಸಕ ಯು.ಆರ್. ಸಭಾಪತಿ ನಿರೂಪಿಸಿದರು.

Comments are closed.