ಕರಾವಳಿ

ಝಿರೋ ಟ್ರಾಫಿಕ್‌ನಲ್ಲಿ ತಿರುಗುವ ರಾಜಕಾರಣಿಗಳ ವರ್ತನೆ ‘ಐ ಡೊಂಟ್ ಲೈಕ್ ಇಟ್’: ಉಪೇಂದ್ರ (Video)

Pinterest LinkedIn Tumblr

ಕುಂದಾಪುರ: ತನ್ನದೇ ನೂತನ ಪಕ್ಷವಾದ ‘ಉತ್ತಮ ಪ್ರಜಾಕೀಯ ಪಕ್ಷ’ ಕಟ್ಟಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರಜಾಕೀಯ ಮತ್ತು ಪ್ರಜಾಕೀಯ ಸಹಾಯವಾಣಿ ಉದ್ಘಾಟನ ಸಮಾರಂಭಕ್ಕಾಗಿ ತಾಲೂಕಿನ ಕೋಟೇಶ್ವರದ ರಥಬೀದಿಯಲ್ಲಿರುವ ಶಾರದಾ ಕಲ್ಯಾಣ ಮಂದಿರಕ್ಕೆ ಆಗಮಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲಕ್ಷ ಅಥವಾ ಕೋಟಿ ಹಣ ಖರ್ಚು ಮಾಡಿ ಆ ಮೂಲಕ ಪ್ರಚಾರ ತೆಗೆದುಕೊಂಡು ಜನರಿಂದ ಗೆದ್ದುಬಂದು ಆ ಹಣವನ್ನು ಕೋಟ್ಯಾಂತರ ಮಾಡುವ ದುರುದ್ದೇಶವನ್ನು ಇಂದಿನ ರಾಜಕಾರಣಿಗಳು ಹೊಂದಿರುವುದು ನಮ್ಮ ದೇಶದ ದುಸ್ಥಿತಿಯಾಗಿದೆ. ಇಂದಿನ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವುದು ಅಷ್ಟು ಸುಲಭವಲ್ಲ. ಆದರೆ ಎಲ್ಲರೂ ಸಮಾನ ಮನಸ್ಕರಾಗಿ ಒಗ್ಗೂಡಿದಾಗ ಖಂಡಿತವಾಗಿಯೂ ಬದಲಾವಣೆ ಸಾಧ್ಯವಿದೆ. ಗೆಲ್ಲುವ ಮೊದಲು ನಾಯಕನಾಗಿ ಬಳಿಕ ಕಾರ್ಮಿಕನಾಗಿ ದುಡಿಯುವ ಇಚ್ಚಾಶಕ್ತಿ ಬಿಟ್ಟು ಝಿರೋ ಟ್ರಾಫಿಕ್ ಮಾಡಿಕೊಂಡು ಓಡಾಡುವ ಪದ್ಧತಿ ಬಂದಿದ್ದು ‘ಐ ಡೊಂಟ್ ಲೈಕ್ ಇಟ್’. ಖಾಕಿ ಬಟ್ಟೆ ಧರಿಸಿ ಕೆಲಸ ಮಾಡುವಂತಹ ವ್ಯಕ್ತಿ ಆರಿಸಿ ಬರಬೇಕು ಎಂದರು.

ನಮ್ಮ ಬಜೆಟ್ ನಾವು ಕಟ್ಟುತ್ತಿರುವ ಹಣವಾಗಿದೆ. ಅದರ ಅಂಕಿ‌ಅಂಶದ ಆಧಾರದಲ್ಲಿ ಪ್ರತಿಯೊಬ್ಬರಿಗೂ ಹಣ ವಾಪಾಸ್ ಬರಬೇಕಿದೆ. ರೋಡ್ ಟ್ಯಾಕ್ಸ್ ಕಟ್ಟಿದ ಮೇಲೂ ಟೋಲ್ ಕಟ್ಟಬೇಕಾದ ವ್ಯವಸ್ಥೆ ನಮ್ಮಲ್ಲಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಮೊದಲು ಸರಿಪಡಿಸಬೇಕು. ರಾಜಕೀಯ, ಆರೋಗ್ಯ, ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣವಾಗಿದ್ದು ಈ ವ್ಯವಸ್ಥೆ ಹೊಗಲಾಡಿಸಬೇಕು. ೫ ವರ್ಷದಲ್ಲಿ ೨ ಸಾವಿರ ಕೋಟಿಯ ಅಂದಾಜಿನಲ್ಲಿ ಪ್ರತಿ ಊರಿಗೆ ಸಿಗುವ ಹಣದ ಆಯವ್ಯಯವನ್ನು ಲೆಕ್ಕ ಕೊಡಬೇಕೆಂಬುದನ್ನು ನ್ಯಾಯಾಲಯದ ಮೂಲಕ ರಿಜಿಸ್ಟಾರ್ ಮಾಡಿಕೊಡುವಂತರಿಗೆ ಯುಪಿಪಿ ಪಕ್ಷದಲ್ಲಿ ಸ್ಥಾನ ಕೊಡುತ್ತೇವೆ. ರಾಜಕೀಯ ಎಂದರೆ ಹಣ ಎಂಬ ಸ್ಥಿತಿಯಲ್ಲಿದ್ದು ಆದರೆ ನಮ್ಮಲ್ಲಿ ಹಣವಿದ್ದವರಿಗೆ ಮಣೆ ಹಾಕಲ್ಲ. ಪ್ರಜಾಕೀಯ ಎಂದರೇನು, ಅದರ ಧ್ಯೆಯೋದ್ಧೇಶಗಳೆಂದು ತಿಳಿಯಲು ಮೊದಲು ಪ್ರಜಾಕೀಯ ಆಪ್ ಡೌನ್ ಲೋಡ್ ಮಾಡಿಕೊಳ್ಳಿ ಎಂದರು.

ಈ ಬಳಿಕ ನೆರೆದ ಸಾರ್ವಜನಿಕರೊಂದಿಗೆ ಸಂವಾದ ನಡೆಯಿತು. ಒಂದು ವೇಳೆ ಸರಕಾರ ರಚಿಸಲು ಬೇಕಾದಷ್ಟು ಸೀಟು ಯುಪಿಪಿ ಪಕ್ಷದಿಂದ ಬರದೇ ಕಡಿಮೆ ಸೀಟು ಬಂದರೆ ಈಗಿನ ಸರಕಾರದ ರೀತಿ ಮೈತ್ರಿ ಮಾಡಿಕೊಳ್ಳುತ್ತೀರಾ ಎಂಬ ಸತೀಶ್ ಬಂಗೇರ ಕುಂಭಾಸಿ ಎನ್ನುವರ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ, ೧೦ ಸ್ಥಾನ ಸಿಕ್ಕಿದರೂ ಸಾಕು.. ನಮಗೆ ಅಧಿಕಾರ ಬೇಡ. ೨ ವರ್ಷ ನಮ್ಮ ಚಿಂತನೆಗಳನ್ನು ಅಸ್ಥಿತ್ವಕ್ಕೆ ತರುವುದಾದರೆ ನನ್ನ ಬೆಂಬಲ ನೀಡುವೆ. ಅದಕ್ಕಾಗಿ ನ್ಯಾಯಾಲಯದಿಂದ ರಿಜಿಸ್ಟಾರ್ ಮಾಡುವುದು. ನಾನು ಯಾರನ್ನೂ ನಂಬಲ್ಲ ಎಂದರು. ಹಿರಿಯ ಪತ್ರಕರ್ತ ಕೆ.ಜಿ. ವೈದ್ಯ ಮಾತನಾಡಿ, ಜನರಿಗೆ ಉತ್ಸಾಹ, ಉಲ್ಲಾಸವಿದ್ದು ಹಣವೇ ಜೀವನವೆನ್ನುವ ಸ್ಥಿತಿ ನಿರ್ಮಾಣವಾಗಿದ್ದು ಉತ್ತಮ ಕೆಲಸದಿಂದಲೂ ಬದಲಾವಣೆ ಸಾಧ್ಯ‌ಎಂಬುದನ್ನು ಯುಪಿಪಿ ಪಕ್ಷ ತೋರಿಸಬೇಕಿದೆ. ಕುಂದಾಪುರ ಶಾಸ್ತ್ರಿ ಸರ್ಕಲ್ ಪ್ಲೈ ಓವರ್ ನೋಡಿದರೆ ಇಂದಿನ ರಾಜಕೀಯ ಪರಿಸ್ಥಿತಿ ತಿಳಿಯುತ್ತಿದ್ದು ಇಂತಹ ರಾಜಕೀಯವನ್ನು ಜನರು ದೂರವಿಡಬೇಕಿದೆ ಎಂದರು. ಮುತ್ತಾರಿಫ್ ತೆಕ್ಕಟ್ಟೆ ಮೊದಲಾದವರು ಈ ಸಂದರ್ಭ ಮಾತನಾಡಿದರು.

ಅಭಿಮಾನಿಗಳಿಂದ ಸೆಲ್ಫಿ..!
ಮೊದಲಿಗೆ ಕುಂದಾಪ್ರ ಕನ್ನಡ ಮಾತಾಡ್ಕಾ ಎಂದು ಮಾತನಾಡುತ್ತಾ ‘ಹ್ವಾಯ್ ಬತ್ತೆ’ ಎಂದು ಹೇಳಿ ಬಾಲ್ಯದ ಕೆಲ ಘಟನೆ ಮೆಲುಕು ಹಾಕಿದರು. ಇನ್ನು ನೆಚ್ಚಿನ ನಟ ಉಪೇಂದ್ರ ಆಗಮನದ ವಿಚಾರ ತಿಳಿಯುತ್ತಲೇ ಬಹಳಷ್ಟು ಅಭಿಮಾನಿಗಳು ನೆರೆದಿದ್ದು ಸೆಲ್ಫಿಗಾಗಿ ಮುಗಿಬಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.