ಕರಾವಳಿ

ಬೆಂಗಳೂರು–ಕಾರಾವರ ರೈಲು ಕರಾವಳಿಯಲ್ಲಿ ಏಕರೂಪ ವೇಳಾಪಟ್ಟಿಯಿರಲಿ!

Pinterest LinkedIn Tumblr

ಕುಂದಾಪುರ: ಬೆಂಗಳೂರು–ಕಾರಾವರ ರೈಲು ಕರಾವಳಿ ನಿಲ್ದಾಣಗಳಲ್ಲಿ ಏಕರೂಪ ವೇಳಾಪಟ್ಟಿಯಂತೆ ಸಂಚರಿಸುವ ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಕೊಂಕಣ ರೈಲ್ವೆ ಆಡಳಿತ ನಿರ್ದೇಶಕ ಹಾಗೂ ಮುಖ್ಯಸ್ಥ ಸಂಜಯ್‌ ಗುಪ್ತಾ ಭರವಸೆ ನೀಡಿದ್ದಾರೆ.

ಭಾನುವಾರ ಕುಂದಾಪುರದ ಮೂಡ್ಲಕಟ್ಟೆ ರೈಲ್ವೆ ನಿಲ್ದಾಣದಲ್ಲಿ ನಡೆದ ಸಭೆಯಲ್ಲಿ ಕುಂದಾಪುರ ರೈಲು ಪ್ರಯಾಣಿಕರ ಸಮಿತಿ ಪ್ರತಿನಿಧಿಗಳಿಗೆ ಅವರು ಮಾಹಿತಿ ನೀಡಿದರು.

ಪ್ರಸ್ತುತ ವಾರದ 3 ದಿನಗಳಲ್ಲಿ ಬೆಂಗಳೂರಿನಿಂದ ಹೊರಡುವ ಕಾರವಾರ ರೈಲು ಮೈಸೂರು ಮಾರ್ಗವಾಗಿ ಬೆಳಿಗ್ಗೆ 8.15 ಕ್ಕೆ ಮಂಗಳೂರು ಸೆಂಟ್ರಲ್‌, 10.37 ಕ್ಕೆ ಉಡುಪಿಗೆ ಹಾಗೂ 11.07 ಕ್ಕೆ ಕುಂದಾಪುರ ನಿಲ್ದಾಣಕ್ಕೆ ಆಗಮಿಸುತ್ತಿದೆ. ಉಳಿದ ದಿನಗಳಲ್ಲಿ ಕುಣಿಗಲ್‌ ಮಾರ್ಗವಾಗಿ ಬೆಳಿಗ್ಗೆ 6 ಕ್ಕೆ ಮಂಗಳೂರಿಗೆ, 7.50 ಕ್ಕೆ ಉಡುಪಿಗೆ ಹಾಗೂ 8.21 ಕ್ಕೆ ಕುಂದಾಪುರಕ್ಕೆ ಆಗಮಿಸುತ್ತಿದೆ. ಏಕರೂಪ ವೇಳಾಪಟ್ಟಿ ಅನುಷ್ಠಾನಗೊಂಡಲ್ಲಿ ವಾರದ 7 ದಿನಗಳಲ್ಲಿಯೂ ಬೆಳಿಗ್ಗೆ 6 ಕ್ಕೆ ಮಂಗಳೂರು, 7.50ಕ್ಕೆ ಉಡುಪಿ ಹಾಗೂ 8.21 ಕ್ಕೆ ಕುಂದಾಪುರಕ್ಕೆ ಆಗಿಮಿಸುವುದರಿಂದ ಪ್ರಯಾಣಿಕರಿಗೆ ಯಾವುದೆ ಗೊಂದಲ ಉಂಟಾಗುವುದಿಲ್ಲ ಎನ್ನುವ ಅಂಶಗಳ ಕುರಿತು ಸಭೆಯಲ್ಲಿ ವಿಚಾರ ವಿನಿಯಮ ನಡೆಸಲಾಯಿತು.

ಅವೈಜ್ಞಾನಿಕ ಜಲ್ಲಿ ಡಂಪಿಂಗ್‌ ಯಾರ್ಡ್‌ ಬಗ್ಗೆ ಆಕ್ರೋಶ
ಕುಂದಾಪುರ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಜಲ್ಲಿ ಡಂಪಿಂಗ್‌ ಯಾರ್ಡ್‌ನಿಂದ ಗಾಳಿಯಲ್ಲಿ ಧೂಳು ಮಿಶ್ರಿತವಾಗಿ ಸ್ಥಳೀಯರಿಗೆ ದಿನನಿತ್ಯ ತೊಂದರೆಯಾಗುತ್ತಿದೆ ಎನ್ನುವುದನ್ನು ಸ್ಥಳೀಯರು ರೈಲ್ಷೆ ನಿಗಮದ ಮುಖ್ಯಸ್ಥರ ಗಮನಕ್ಕೆ ತಂದರು. ಈ ವಿಷಯದ ಕುರಿತು ಮಾತನಾಡಿದ ಮೂಡ್ಲಕಟ್ಟೆ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್‌ ಪೂಜಾರಿ ಹಾಗೂ ರೈಲು ಪ್ರಯಾಣಿಕರ ಸಮಿತಿಯ ವಿವೇಕ್‌ ನಾಯಕ್‌ ಅವರು ಧೂಳು ಮಿಶ್ರಿತ ಗಾಳಿಯ ಸೇವನೆಯಿಂದ ಆರೋಗ್ಯವ ಮೇಲೆ ಪರಿಣಾಮವಾಗುತ್ತಿದೆ, ಗದ್ದೆಗಳಿಗೆ ಧೂಳು ಮಿಶ್ರಿತ ಕೆಸರು ನುಗ್ಗುವುದರಿಂದ ಬೆಳೆಗಳ ಮೇಲೆ ಪರಿಣಾಮವಾಗುತ್ತದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಚರಂಡಿ ಸೇರಿದಂತೆ ಸೂಕ್ತ ವ್ಯವಸ್ಥೆ ಮಾಡದೆ ಇದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಸ್ಪಂದಿಸಿದ ಸಂಜಯ್‌ ಗುಪ್ತಾ ಅವರು ಜಲ್ಲಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಂಗ್ರಹಿಸಲು ವೈಜ್ಞಾನಿಕ ಕ್ರಮವನ್ನು ಅನುಸರಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಸಮಸ್ಯೆಯ ಪರಿಹಾರಕ್ಕೆ ಗುತ್ತಿಗೆದಾರರ ಹಾಗೂ ಸ್ಥಳೀಯರ ಸಭೆ ಆಯೋಜಿಸಲಾಗುವುದು ಎಂದು ತಿಳಿಸಿದರು.

Comments are closed.