ಕುಂದಾಪುರ: ಕರಾವಳಿ ಕುಂದಾಪುರ ಭಾಗದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಮಾಡುವ ಜೊತೆಗೆ ಉತ್ಸಾಹಿ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಬಲವರ್ದನೆ ಮಾಡುವಲ್ಲಿ ಶ್ರಮವಹಿಸಿ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಕಾಶ ಶೆಟ್ಟಿ ತೆಕ್ಕಟ್ಟೆಯವರನ್ನು ಪಕ್ಷ ವಿರೋಧಿ ಆರೋಪದಡಿಯಲ್ಲಿ ಉಚ್ಚಾಟನೆಗೊಳಿಸಲಾಗಿದೆ.
ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಈ ಆದೇಶ ಹೊರಡಿಸಿದ್ದು ಮುಂದಿನ ಆರು ವರ್ಷಗಳ ಅವಧಿಗೆ ಪಕ್ಷದಿಂದ ಅಮಾನತು ಮಾಡಿರುವ ಬಗ್ಗೆ ಪ್ರಕಟಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ, ತಾನು ಪ್ರಾಮಾಣಿಕನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ನನ್ನ ವಿರುದ್ಧ ಜಿಲ್ಲಾಧ್ಯಕ್ಷರು ಯಾವುದೇ ದುರುದ್ದೇಶವಿಟ್ಟುಕೊಂಡು ಈ ರೀತಿಯಾಗಿ ಉಚ್ಚಾಟಿಸಿದ್ದಾರೆ. ಜಿಲ್ಲಾಧ್ಯಕ್ಷರ ವಾರ್ಡಿನಲ್ಲಿಯೇ ಪಕ್ಷಕ್ಕೆ ಸಿಕ್ಕಿದ್ದು ಮೂರೇ ಮೂರು ಮತ ಎಂದು ಆರೋಪಿಸಿದ ಅವರು ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷ ಕಟ್ಟಿ ಬೆಳೆಸಲು ನಾನು ಮಾಡಿದ ಶ್ರಮ ಮತ್ತು ನಿಮ್ಮ ಕ್ಷೇತ್ರದ ಶ್ರಮದ ಬಗ್ಗೆ ತಾಳೆ ಹಾಕಿ ನೋಡೋಣ ಎಂದು ಸವಾಲೆಸೆದರು. ಇಡೀ ಜಿಲ್ಲೆಯಲ್ಲಿ ಪಕ್ಷ ಅತೀ ಹೆಚ್ಚು ಬೆಳೆದಿದ್ದು ಕುಂದಾಪುರದಲ್ಲಿ. ಚುನಾವಣೆಯಲ್ಲಿಯೂ ಬೇರೆ ಕಡೆಗಿಂತಲೂ ಅಧಿಕ ಲೀಡ್ ಪಕ್ಷಕ್ಕೆ ಕುಂದಾಪುರದಿಂದ ಸಿಕ್ಕಿದೆ.
ಪಕ್ಷ ಸಂಘಟನೆ ಬಲವರ್ಧನೆಗೂ ಕೂಡ ಜಿಲ್ಲಾಧ್ಯಕ್ಷರಾದ ತಮ್ಮಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ನಿಷ್ಟಾವಂತ ಕಾರ್ಯಕರ್ತರ ಕಡೆಗಣನೆ ಮಾಡಿದ್ದೇ ಹೌದಾದಲ್ಲಿ ನಮ್ಮ ಕಾರ್ಯಕರ್ತರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಪ್ರಕಾಶ್ ಶೆಟ್ಟಿ ಹೇಳಿದ್ದಾರೆ. ನಾನು ಯಾರ್ಗೂ ಬಕೇಟ್ ಹಿಡಿದಿಲ್ಲ, ಯಾರಿಗೂ ತಲೆ ಬಾಗಿಲ್ಲ. ನಮ್ಮಂತ ನೇರ-ನಿಷ್ಟಾವಂತರಿಗೆ ಪಕ್ಷದಲ್ಲಿ ಇಂತಹ ಕೆಲವರು ಬೆಲೆ ಕೊಡಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
Comments are closed.