ಕರಾವಳಿ

ದಿವ್ಯಾ ಅತ್ಯಾಚಾರ ಪ್ರಕರಣ ಖಂಡಿಸಿ ಕುಂದಾಪುರದಲ್ಲಿ ಬೀದಿಗಿಳಿದು ಪ್ರತಿಭಟಿಸಿದ ಕಾಲೇಜು ವಿದ್ಯಾರ್ಥಿಗಳು (Video)

Pinterest LinkedIn Tumblr

ಕುಂದಾಪುರ: 8 ವರ್ಷ ಪ್ರಾಯದ ವಿದ್ಯಾರ್ಥಿನಿ ದಿವ್ಯಾ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಬುಧವಾರದಂದು ಕುಂದಾಪುರದ ಭಂಡಾರ್ಕಾರ್ಸ್ ಹಾಗೂ ಬಿಬಿ ಹೆಗ್ಡೆ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಕುಂದಾಪುರದ ಹೃದಯಭಾಗ ಶಾಸ್ತ್ರೀ ಸರ್ಕಲ್ ನಿಂದ ರ್ಯಾಲಿ ನಡೆಸಿದ ಭಂಡಾರ್ಕಾರ್ಸ್ ಕಾಲೇಜು ವಿದ್ಯಾರ್ಥಿಗಳು ಮಿನಿವಿಧಾನಸೌಧಕ್ಕೆ ಆಗಮಿಸಿದ್ದು ಬಿ.ಬಿ. ಹೆಗ್ಡೆ ಕಾಲೇಜು ವಿದ್ಯಾರ್ಥಿಗಳು ಸಂಗಮ್ ನಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಮಿನಿವಿಧಾನಸೌಧಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.

    

ಮಳೆಯನ್ನು ಲೆಕ್ಕಿಸದೇ ಪ್ರತಿಭಟನೆ…
ಕುಂದಾಪುರದ ಅಖಿಲ‌ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದು ಎರಡೂ ಕಾಲೇಜಿನ ವಿದ್ಯಾರ್ಥಿಗಳು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆ ನಡೆಯುತ್ತಿರುವಾಗಲೇ ಸುರಿದ ಮಳೆಯನ್ನೂ ಲೆಕ್ಕಿಸದೆ ಪ್ರತಿಭಟಿಸಿದ ವಿದ್ಯಾರ್ಥಿಗಳು ಕುಂದಾಪುರದ ಪ್ರಭಾರಿ ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಮನವಿ ಸಲ್ಲಿಸಿದರು.

ಭಂಡಾರ್ಕಾರ್ಸ್ ಕಾಲೇಜಿನ ಎಬಿವಿಪಿ ಮುಖಂಡರಾದ ಸುಕೇಶ್ ಪೂಜಾರಿ, ರೋಶನ್ ಪೂಜಾರಿ, ಗುರುರಾಜ್ ಹಾಗೂ ಬಿಬಿ ಹೆಗ್ಡೆ ಕಾಲೇಜಿನ ಪವನ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಸುಖ್ ದೀಪ್ ಶೆಟ್ಟಿ, ರೋಶನ್ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದರು.

ಕುಂದಾಪುರ ಸರ್ಕಲ್ ಇನ್ಸ್ ಪೆಕ್ಟರ್ ಮಂಜಪ್ಪ ಹಾಗೂ ಠಾಣಾಧಿಕಾರಿ ಹರೀಶ್ ಆರ್. ನಾಯ್ಕ್, ಸಂಚಾರ ಠಾಣಾ ಪೊಲೀಸರು ಹಾಜರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.