ಕುಂದಾಪುರ: ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಅಂಕದಕಟ್ಟೆಯಲ್ಲಿರುವ ಲಾಡ್ಜ್ & ಹೋಟೆಲಿನಲ್ಲಿ ಗ್ರಾಹಕರಿಗೆ ಮದ್ಯ ನೀಡಲಾಗುತ್ತಿದೆ ಎಂಬ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಚುನಾವಣಾ ಕರ್ತವ್ಯದ ಮೇಲೆ ಹೋಟೆಲೊಂದರ ಮೇಲೆ ದಾಳಿ ಮಾಡಲು ತೆರಳಿದ್ದ ಕುಂದಾಪುರ ಉಪವಿಭಾಗದ ಸಹಾಯಕ ಕಮೀಷನರ್ ಮತ್ತು ಪ್ರೊಬೆಶನರಿ ಐಎಎಸ್ ಅಧಿಕಾರಿ ಸೇರಿದಂತೆ ಸಿಬ್ಬಂದಿಗಳಿಗೆ ಹಲ್ಲೆ ನಡೆಸಲು ಮುಂದಾಗಿ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಚುನಾವಣಾ ನೀತಿ ಸಂಹಿತೆ ಪಾಲನೆ ನಿಟ್ಟಿನಲ್ಲಿ ಕುಂದಾಪುರ ಸಹಾಯಕ ಕಮೀಷನರ್ ಭೂಬಾಲನ್ ಮತ್ತು ಐಎಎಸ್ ಪ್ರೊಬೇಶನರಿ ಅಧಿಕಾರಿ ಪೂವಿತಾ ಹಾಗೂ ಅಬಕಾರಿ ಡಿಸಿ ಮೇರುನಂದನ್ ಅವರು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕೋಟೇಶ್ವರದ ಹೋಟೆಲಿಗೆ ದಾಳಿ ನಡೆಸಿದಾಗ ಈ ಘಟನೆ ನಡೆದಿದೆ.
ಸಿಎಲ್-ಸೆವೆನ್ (ಸಿಲ್-7) ಪರವಾನಿಗೆಯುಳ್ಳ ಪ್ರತಿಷ್ಟಿತ ಹೋಟೆಲ್ ಇದಾಗಿದ್ದು ಈ ಪರವಾನಿಗೆಯಡಿಯಲ್ಲಿ ಗ್ರಾಹಕರಿಗೆ ಕ್ಯಾಬಿನ್ ಮೊದಲಾದವುಗಳಲ್ಲಿ ಮದ್ಯ ವಿತರಿಸುವ ಹಾಗಿಲ್ಲ. ಆದರೂ ಕೂಡ ನಿಯಮ ಮೀರಿ ಮದ್ಯ ಸರಬರಾಜು ಮಾಡುತ್ತಿದ್ದಾರೆ ಎಂದು ದೂರು ಬಂದ ಹಿನ್ನೆಲೆ ಎಸಿ ಮತ್ತು ತಂಡ ಪರಿಶೀಲನೆಗೆ ತೆರಳಿದಾಗ ಮೇಲ್ನೋಟಕ್ಕೆ ಇಲ್ಲಿ ಅಕ್ರಮ ನಡೆಯುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಅವರು ತಮ್ಮ ಮೊಬೈಲ್ ಕ್ಯಾಮೇರಾದಲ್ಲಿ ವಿಡಿಯೋ ಚಿತ್ರಿಕರಣ ಮಾಡುತ್ತಿರುವ ವೇಳೆ ಗ್ರಾಹಕರು ಮತ್ತು ಹೋಟೆಲ್ ಸಿಬ್ಬಂದಿಗಳು ಅಧಿಕಾರಿಗಳ ಮೇಲೆ ಮುಗಿಬಿದ್ದಿದ್ದಾರೆನ್ನಲಾಗಿದೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು ಮೂರ್ನಾಲ್ಕು ಮಂದಿ ಅಧಿಕಾರಿಗಳಿಗೆ ಅವ್ಯಾಚವಾಗಿ ನಿಂಧಿಸಿ ಹಲ್ಲೆಗೆ ಮುಂದಾಗಿದ್ದಾರೆ. ಇದಕ್ಕೆ ಈ ಹೋಟೆಲ್ ಮಾಲಿಕರ ಪತಿಯೂ ಸಾಥ್ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಸಂಬಂಧ ಬಾರ್ ಮಾಲಿಕರ ಪತಿ ಸುರೇಂದ್ರ ಶೆಟ್ಟಿ, ಗ್ರಾಹಕ ಮಹೇಶ್ ಆಚಾರ್ಯ ಎಂಬಿಬ್ಬರನ್ನು ಬಂಧಿಸಿದ್ದು ಇಬ್ಬರು ತಲೆಮರೆಸಿಕೊಂಡಿದ್ದಾರೆ.
ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಕುಂದಾಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್, ಸಿಪಿಐ ಮಂಜಪ್ಪ, ಎಸ್ಐ ಹರೀಶ್ ಕುಮಾರ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಕುಂದಾಪುರ ಸಹಾಯಕ ಕಮೀಷನರ್ ಅವರಿಗೆ ಗನ್ ಮ್ಯಾನ್ ಇದ್ದ ಕಾರಣ ಸಂಭವನೀಯ ದುರಂತ ತಪ್ಪಿದೆ. ಕಳೆದ ವರ್ಷ ಎಪ್ರಿಲ್ ತಿಂಗಳಿನಲ್ಲಿಯೇ ಡಿಸಿ ಹಾಗೂ ಎಸಿ ಮೇಲೆ ಹಲ್ಲೆ ನಡೆದಿದ್ದು ಈ ಘಟನೆ ಸಾರ್ವಜನಿಕರನ್ನು ಕಂಗೆಡಿಸಿದೆ.
Comments are closed.