ಕರಾವಳಿ

ಟೀಕೆಗೆ ಗುರಿಯಾಗಿದೆ ಯಕ್ಷಗಾನದಲ್ಲಿ ಬಳಸಿದ ಗುಂಡಿನ ಹಾಡು! (ವಿಡಿಯೋ)

Pinterest LinkedIn Tumblr

ಉಡುಪಿ: ಕೆಲವಾರು ವರ್ಷಗಳ ಹಿಂದೆ ಮಾಲಾಶ್ರೀ ಅಭಿನಯದ ನಂಜುಂಡಿ ಕಲ್ಯಾಣ ಚಿತ್ರದಲ್ಲಿ ‘ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು’ ಎಂಬ ಹಾಡು ಸಖತ್ ಫೇಮಸ್ ಆಗಿತ್ತು. ಆದರೇ ಸದ್ಯ ಅದೇ ಹಾಡನ್ನು ಬೇರೆಯ ಸಾಹಿತ್ಯದೊಂದಿಗೆ ಯಕ್ಷಗಾನದ ಶೈಲಿಗೆ ಅಳವಡಿಸಿಕೊಂಡಿದ್ದಕ್ಕೆ ಪರ ವಿರೋಧ ಚರ್ಚೆಗಳು ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಕ್ತವಾಗಿದೆ.

ಪ್ರಸಿದ್ಧ ಬಡಗು ತಿಟ್ಟಿನ ಡೇರೆ ಮೇಳವಾದ ಪೆರ್ಡೂರು ಮೇಳದಲ್ಲಿ ವರ್ಷಂಪ್ರತಿಯೂ ಒಂದೊಂದು ಹೊಸ ಪ್ರಸಂಗಗಳು ಜನಮನ ಸೂರೆಗೊಳ್ಳುತ್ತದೆ. ಪೆರ್ಡೂರು ಮೇಳದ ಯಕ್ಷಗಾನ ಅಂದರೇ ಅದೆಷ್ಟೋ ದೂರವಾದರೂ ಹುಡುಕಿ ಹೋಗುವ ಯಕ್ಷ ಪ್ರೇಮಿಗಳು ಇದ್ದಾರೆ. ಅಂತೆಯೇ ಈ ಬಾರಿ ತಿರುಗಾಟಕ್ಕೆ ಹೊಸ ಪ್ರದರ್ಶನವಾಗುತ್ತಿರುವ ಯಕ್ಷಗಾನ ಪ್ರದರ್ಶನವೊಂದು ಸದ್ಯ ವಿವಾದಕ್ಕೆ ಗುರಿಯಾಗಿದೆ. ‘ಅಹಂ ಬ್ರಹ್ಮಾಸ್ಮಿ’ ಎಂಬ ನೂತನ ಪ್ರಸಂಗದಲ್ಲಿ ಬಳಸಿಕೊಳ್ಳಲಾದ ‘ಗುಂಡಿನ’ ಹಾಡು ಸದ್ಯ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

‘ಸುರೆಯ ಮತ್ತಿನಲಿ ತೇಲಿ ಧರಣಿ ಆಳುವೆನು ಕೇಳಿ, ಸುರ ಸುಂದರಿ ಪರಮೇಶ್ವರಿ’ ಎನ್ನುವ ಚರಣದೊಂದಿಗೆ ಆರಂಭಗೊಳ್ಳುವ ಈ ಹಾಡಿನಲ್ಲಿ ಯಲ್ಲಗುಪ್ಪ ಸುಬ್ರಮಣ್ಯ ಹೆಗಡೆ, ಹಾಸ್ಯ ಕಲಾವಿದ ರಮೇಶ್ ಭಂಡಾರಿ ಸೇರಿದಂತೆ ಇತರೆ ಕಲಾವಿದರು ಗುಂಡಿನ ಮತ್ತಿನಲ್ಲಿ ಹೆಜ್ಜೆ ಹಾಕುತ್ತಾರೆ. ಇದರಲ್ಲಿ ಓರ್ವ ಕಲಾವಿದ ಕೇವಲ ಲುಂಗಿ ಉಟ್ಟು ಅರಬೆತ್ತಲೆಯಾಗಿ ಕುಣಿದಿರುವುದು ಯಕ್ಷಗಾನ ಶೈಲಿಯಲ್ಲ ಎಂಬುದು ಸದ್ಯ ಕೆಲವರು ಮಾಡುತ್ತಿರುವ ಆರೋಪವಾಗಿದೆ. ಈ ವೀಡಿಯೊ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೇ ಸಾಕಷ್ಟು ಪರ ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಯಕ್ಷಗಾನದಲ್ಲಿ ಇಂತಹ ಸಂಗತಿಗಳನ್ನು ಬಳಸಿ ಅಪಚಾರ ಮಾಡಲಾಗಿದೆ ಎಂಬ ಬಗ್ಗೆ ಹಲವು ಕಮೆಂಟುಗಳು ಜಾಲತಾಣಗಳಲ್ಲಿ ವ್ಯಕ್ತವಾಗಿದೆ. ಅಷ್ಟಕ್ಕೂ ಈ ಹಾಡು ಹಾಡಿರುವುದು ಖ್ಯಾತ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ. ಪವನ್ ಕಿರಣಕೆರೆ ಈ ಪ್ರಸಂಗದ ಪ್ರಸಂಗಕರ್ತರಾಗಿದ್ದಾರೆ.

ಯಾರೋ ಮಾಡಿದ ಒಂದು ಸಣ್ಣ ತುಂಡು ಪದ್ಯದ ವಿಡೀಯೊ ಹಿಡಿದು ಯಕ್ಷಗಾನ ವಿಮರ್ಶೆ ಮಾಡುವವರು ಇಡೀ ಪ್ರಸಂಗ ಒಮ್ಮೆ ನೋಡಬೇಕಿದೆ. ಆ ಪ್ರಸಂಗದಲ್ಲಿ ಸಮಾಜಕ್ಕೆ ಪೂರಕವಾಗುವಂತಹ ಒಳ್ಳೆಯ ತುಣುಕು ಸಹ ವ್ಯಕ್ತಪಡಿಸಿ. ಒಂದು ಹೆಣ್ಣು ಹೆಂಡ ಚಟಕ್ಕೆ ಬಲಿಯಾದರೆ ಅವಳ ಪರಿಸ್ಥಿತಿ ಕೊನೆಯಲ್ಲಿ ಏನಾಗುತ್ತದೆ ಎನ್ನುವುದನ್ನು ಸಮಾಜಕ್ಕೆ ಪ್ರಸಂಗ ರೂಪದಲ್ಲಿ ವ್ಯಕ್ತ ಪಡಿಸಿದ್ದಾರೆ. ಕೇವಲ ತಪ್ಪು ಮಾತ್ರ ಹುಡುಕುವ ಕೆಲಸಬಿಡಿ ಒಳ್ಳೆಯ ವಿಚಾರವನ್ನು ಸಹ ಗುರುತಿಸಿ ಎಂದು ಪ್ರಸಂಗಕರ್ತರ ಪರ ಯಕ್ಷಾಭಿಮಾನಿಗಳು ನಿಂತಿದ್ದಾರೆ.

ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನವಾಗಿದ್ದು, ಅದನ್ನು ಉಳಿಸಿ ಬೆಳಸಬೇಕಿದೆ. ಪೌರಾಣಿಕ ಪ್ರಸಂಗಗಳಿಗೆ ಪ್ರೇಕ್ಷಕಾಭಿಮಾನಿಗಳು ವಿರಳವಾಗುವ ಈ ಕಾಲ ಘಟ್ಟದದಲ್ಲಿ ಯಕ್ಷಗಾನ ಉಳಿವಿಗೆ ಡೇರೆ ಮೇಳಗಳು ವಹಿಸುತ್ತಿರುವ ಪಾತ್ರ ನಿಜಕ್ಕೂ ಶ್ಲಾಘನೀಯ. ಈ ಹಿಂದೆಯೂ ಕೂಡ ಅದೆಷ್ಟೋ ಪ್ರಸಂಗಗಳಲ್ಲಿ ಸಿನೆಮಾ ಕಥೆಗಳನ್ನು ಹಾಗೂ ಹಾಡುಗಳನ್ನು, ಸಂಭಾಷಣೆಗಳನ್ನು ಬಳಸಿಕೊಳ್ಳಲಾಗಿದೆ. ಆ ಸಮಯದಲ್ಲಿ ವಿವಾದ ಮಾಡದವರು ಈಗ ಮಾಡುತ್ತಿರುವುದು ಯಕ್ಷ ಕಲೆಯ ವಿಚಾರದಲ್ಲಿ ಸರಿಯಲ್ಲ. ಸೂಕ್ತ ವೇದಿಕೆಯಲ್ಲಿ ಈ ಬಗ್ಗೆ ಚರ್ಚಿಸಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂಬುದು ಯಕ್ಷ ಅಭಿಮಾನಿಗಳ ಅಭಿಪ್ರಾಯ.

ವರದಿ- ಯೋಗೀಶ್ ಕುಂಭಾಸಿ

 

Comments are closed.