ಕುಂದಾಪುರ: ತಾಲೂಕಿನ ಕೆದೂರು ಗ್ರಾಮಪಂಚಾಯತಿ ವ್ಯಾಪ್ತಿಯ ಉಳ್ತೂರು ಎಂಬಲ್ಲಿನ ಜನವಸತಿ ಪ್ರದೇಶದ ಸಮೀಪ ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ಡಂಪಿಂಗ್ ಯಾರ್ಡ್ ನಿರ್ಮಿಸಲು ಹೊರಟಿದ್ದು ಇದಕ್ಕೆ ಈ ಭಾಗದ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಮಧ್ಯಾಹ್ನದ ಸುಮಾರಿಗೆ ಜೆಸಿಬಿ ಮೂಲಕ ಜಾಗವನ್ನು ಸಮದಟ್ಟು ಮಾಡಲು ಅಧಿಕಾರಿಗಳು ಆಗಮಿಸಿದ್ದು ಈ ವೇಳೆ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಕಾಮಗಾರಿ ನಡೆಸದಂತೆ ಪಟ್ಟು ಹಿಡಿದರು. ನಮ್ಮ ಹೆಣದ ಮೇಲೆ ಕಾಮಗಾರಿ ನಡೆಸಿ, ನಮ್ಮೂರಿಗೆ ಡಂಪಿಂಗ್ ಯಾರ್ಡ್ ಅಗತ್ಯವಿಲ್ಲ ಎಂದು ಅಸಮಧಾನ ಹೊರಹಾಕಿದ್ರು.
ಸ್ಥಳದಲ್ಲಿದ್ದ ಕೆದೂರು ಗ್ರಾಮಪಂಚಾಯತ್ ಅಧ್ಯಕ್ಷರು ಸೇರಿದಂತೆ ಸಾರ್ವಜನಿಕರು ಮತ್ತು ಬ್ರಹ್ಮವಾರ ವ್ರತ್ತ ನಿರೀಕ್ಷಕರು ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಪಟ್ಟಣ ಪಂಚಾಯತಿಯವರು ಡಿಸಿ ಆದೇಶದ ಹಿನ್ನೆಲೆ ನಾವು ಕೆಲಸ ಮಾಡುವ ಬಗ್ಗೆ ಮುಂದಾಗಿದ್ದೇವೆ ಎಂದು ಸಮಜಾಯಿಷಿ ನೀಡಿದರೂ ಕೂಡ ಯಾವುದೇ ಅಧಿಕ್ರತ ಆದೇಶ ತೊರಿಸದೇ ಕಾಮಗಾರಿ ನಡೆಯಲೇ ಬಾರದು, ಜೆಸಿಬಿಯನ್ನು ಸ್ಥಳದಿಂದ ಹೊರಹಾಕಿ ಎಂದು ಸಾರ್ವಜನಿಕರು ಪಟ್ಟು ಹಿಡಿದರು. ಕೊನೆಗೂ ಸಾರ್ವಜನಿಕರ ಆಕ್ರೋಷದ ನಡುವೆ ಜೆಸಿಬಿಯನ್ನು ಕಳುಹಿಸಲಾಯಿತು. ಗ್ರಾಮಸ್ಥರ ಪರವಾಗಿ ಕೆದೂರು ಗ್ರಾಮಪಂಚಾಯತಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಮಾತನಾಡಿ, ಈ ಭಾಗದಲ್ಲಿ ಡಂಪಿಂಗ್ ಯಾರ್ಡ್ ನಿರ್ಮಾಣ ಆಗಲೇಬಾರದು, ಕೇಸು ಹಾಕಿ ನಮ್ಮನ್ನು ಬಂಧಿಸಿದರೂ ನಾವು ಹೆದರಲ್ಲ ಎಂದರು. ಈ ಸಂದರ್ಭ ಗ್ರಾ.ಪಂ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಬ್ರಹ್ಮಾವರ ಸಿ.ಪಿಐ ಶ್ರೀಕಾಂತ್, ಕೋಟ ಎಸ್ಐ ಸಂತೋಷ್ ಕಾಯ್ಕಿಣಿ ಹಾಗೂ ಸಿಬ್ಬಂದಿಗಳು ಇದ್ದರು.
Comments are closed.