ಉಡುಪಿ: ಕಾಂಗ್ರೆಸ್‌ನ ಕಾರ್ಮಿಕ ಘಟಕವಾಗಿರುವ ಇಂಟೆಕ್ ಸದ್ಯ ರಾಜ್ಯದ ಪ್ರಮುಖ ಹಾಗೂ ಪ್ರಬಲ ಕಾರ್ಮಿಕ ಸಂಘಟನೆಯಾಗಿದ್ದು ಇಂಟೆಕ್‌ಗೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆಲ ಸ್ಥಾನ ನೀಡಬೇಕೆಂಬ ಬೇಡಿಕೆ ಸಲ್ಲಿಸಲಾಗಿದೆ. ಇದರಿಂದಾಗಿ ಕರಾವಳಿ ಭಾಗಕ್ಕೆ ಒಂದೆರಡು ಸ್ಥಾನ ಇಂಟೆಕ್‌ಗೆ ಸಿಗುವ ಸಾಧ್ಯತೆ ಇದೆ. ಈ ನಡುವೆಯೇ ಇಂಟೆಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ವಿಧಾನಸಭೆಗೆ ಸ್ಪರ್ಧಿಸಲಿದ್ದು ಕುಂದಾಪುರದಲ್ಲಿ ಕಣಕ್ಕಿಳಿಯಲಿದ್ದಾರೆಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ.
ರಾಕೇಶ್ ಮಲ್ಲಿ ಕುಂದಾಪುರದಿಂದ ಸ್ಪರ್ಧೆಗೆ ಇಳಿಯಲು ಕುಂದಾಪುರದ ಕೆಲವು ಕಾಂಗ್ರೆಸ್ ನಾಯಕರ ಪರೋಕ್ಷ ಬೆಂಬಲ ಇದೆ ಎನ್ನಲಾಗುತ್ತಿದೆ. ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಹಾಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿಯವರನ್ನು ಈ ಬಾರಿ ಕಣಕ್ಕಿಳಿಸುವ ಮಾತುಗಳ ನಡುವೆಯೇ ರಾಕೇಶ್ ಮಲ್ಲಿ ಸ್ಪರ್ಧೆ ಮಾಡುತ್ತಾರೆಂಬ ಗುಲ್ ಎಲ್ಲೆಡೆ ಹಬ್ಬಿದ್ದು ಕಾರ್ಯಕರ್ತರಲ್ಲಿಯೂ ಈ ಬಾರಿ ನಮ್ಮ ಕ್ಯಾಂಡಿಡೆಟ್ ಯಾರೆಂಬ ಪ್ರಶ್ನೆಗಳು ಮೂಡುತ್ತಿದೆ.
ಇನ್ನು ರಾಕೇಶ್ ಮಲ್ಲಿ ಅವರು ಕೆಲ ತಿಂಗಳುಗಳಿಂದ ಕುಂದಾಪುರ ಕ್ಷೇತ್ರದಾದ್ಯಂತ ಪ್ರವಾಸ ಕೈಗೊಂಡಿರುವುದು ಅವರೇ ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿಯೆಂಬ ಮಾತಿಗೆ ಇನ್ನಷ್ಟು ಪುಷ್ಟಿ ನೀಡಿದಂತಾಗಿದೆ. ಈ ಹಿಂದಿನ ನಾಲ್ಕು ಅವಧಿಯಲ್ಲೂ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರನ್ನು ಸೋಲಿಸಲು ಕಾಂಗ್ರೆಸ್ ಪಕ್ಷ ಹಿಂದೆ ಬಿದ್ದಿದೆ. ಆದರೇ ಶತಾಯ ಗತಾಯ ಈ ಬಾರಿ ಕುಂದಾಪುರದಲ್ಲಿ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಲೇಬೇಕೆಂಬ ಹಟಕ್ಕೆ ಪಕ್ಷ ಮುಂದಾಗಿದೆ. ಕಾರ್ಯಕರ್ತರೂ ಕೂಡ ಇದಕ್ಕೆ ಕೈ ಜೋಡಿಸಿದ್ದು ಈಗಾಗಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಕುಂದಾಪುರದಲ್ಲಿ ಕಾಂಗ್ರೆಸ್ ತನ್ನ ಗೆಲವು ಸಾಧಿಸಲು ಬೇಕಾಗಿ ಪರ್‍ಯಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎನ್ನಲಾಗುತ್ತಿದೆ.
ಈ ತಿಂಗಳ ಅಂತ್ಯದೊಳಗೆ ಅಭ್ಯರ್ಥಿ ಯಾರೆಂಬ ಅಂತಿಮ ನಿರ್ಧಾರ ಸ್ಪಷ್ಟವಾಗಲಿದೆ. ಒಟ್ಟಿನಲ್ಲಿ ಇತ್ತೀಚಿನ ಕೆಲ ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾದ ಕುಂದಾಪುರದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾದವರು ತಮ್ಮ ಬಲಾಬಲ ಪ್ರದರ್ಶಿಸಲು ಸಫಲರಾಗುತ್ತಾರೆಯೇ ಕಾದು ನೋಡಬೇಕಿದೆ.
ವರದಿ- ಯೋಗೀಶ್ ಕುಂಭಾಸಿ