ಇಸ್ತಾಂಬುಲ್: ಅತ್ಯಂತ ಆಘಾತಕಾರಿ ಘಟನೆಯಲ್ಲಿ ಮಾಜಿ ಗಂಡನೋರ್ವ 35ರ ಹರೆಯದ ಪತ್ನಿಗೆ ಜನ ದಟ್ಟನೆಯ ನಡು ರಸ್ತೆಯಲ್ಲಿ 25 ಬಾರಿ ಚೂರಿಯಿಂದ ಇರಿದು ಕೊಂದಿದ್ದಾನೆ. ಈ ಅಮಾನುಷ ಕೃತ್ಯದ ಸಿಸಿಟಿವಿ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ಆಗಿದೆ.
ಮುಸ್ತಫಾ ಕರಾ ಎಂಬ ಪತಿ ಮಹಾಶಯ ತನ್ನ ಪತ್ನಿ ಸಿಗ್‌ಡೆಂ ಕಾಕ್‌ಗೆ ಹತ್ತು ವರ್ಷಗಳ ಹಿಂದೆ ಡೈವೋರ್ಸ್‌ನೀಡಿದ್ದ. ಬೆಳಗ್ಗೆ ಸುಮಾರು 10 ಗಂಟೆಯ ವೇಳೆಗೆ ಈಕೆ ಜನನಿಬಿಡ ರಸ್ತೆಯಲ್ಲಿ ಪೋಸ್ಟ್‌ಆಫೀಸಿನತ್ತ ನಡೆದುಕೊಂಡು ಹೋಗುತ್ತಿದ್ದಾಗ ಮುಸ್ತಫಾ ಆಕೆಯ ಅಡ್ಡಗಟ್ಟಿ, ತಲೆ ಕೂದಲನ್ನು ಹಿಡಿದೆಳೆದು 25 ಬಾರಿ ಆಕೆಯನ್ನು ಇರಿದು ಮಾರಣಾಂತಿಕವಾಗಿ ಗಾಯಗೊಳಿಸಿದ.
ರಕ್ತದ ಮಡುವಿನಲ್ಲಿ ಬಿದ್ದ ಕಾಕ್‌ಳನ್ನು ಅಪರಿಚಿತನೋರ್ವ ಒಡನೆಯೇ ಆಸ್ಪತ್ರೆಗೆ ಸೇರಿಸಿದ. ವೈದ್ಯರು ಕೂಡಲೇ ಆಕೆಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದರೂ ಪ್ರಯೋಜನವಾಗದೆ ಆಕೆ ಕೊನೆಯುಸಿರೆಳೆದಳು.
ಚೂರಿಯಿಂದ ಇರಿದ ಮುಸ್ತಫಾ ಸ್ಥಳದಿಂದ ಓಡಿಹೋಗಲು ಯತ್ನಿಸಿದಾಗ ಆತನನ್ನು ದಾರಿ ಹೋಕರು ಹಾಗೂ ಅಂಗಡಿ ಮಾಲಕರು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ಆತನನ್ನು ಬಂಧಿಸಿ ಆತನ ವಿರುದ್ಧ ಕೊಲೆ ಕೇಸನ್ನು ಹೂಡಿದ್ದಾರೆ.