ನವದೆಹಲಿ, ಅ. ೧೫- ಪವಿತ್ರ ಗಂಗಾ ಜಲವನ್ನು ಅಂಚೆ ಕಚೇರಿಗಳ ಮೂಲಕ ವಿತರಿಸಿದ ನಂತರ ಇದೀಗ ಸಬ್ಸಿಡಿ ದರದ ಬೇಳೆ ಕಾಳುಗಳನ್ನು ಗ್ರಾಹಕರಿಗೆ ಪೂರೈಸಲು ಅಂಚೆ ಕಚೇರಿಗಳು ಸಜ್ಜಾಗುತ್ತಿವೆ.
ಈ ರೀತಿಯ ವಿನೂತನ ಯೋಜನೆಗೆ ಕೇಂದ್ರ ಸರ್ಕಾರ ಕೆಲವೇ ವಾರಗಳಲ್ಲಿ ಚಾಲನೆ ನೀಡಲಿದೆ. ಕೇಂದ್ರ ಸರ್ಕಾರದ ಗೋದಾಮುಗಳಲ್ಲಿ ಸಂಗ್ರಹಿಸಿಡಲಾಗಿದ್ದ ಬೇಳೆ ಕಾಳುಗಳ ಕಾಪು ದಾಸ್ತಾನನ್ನು ಕೊಂಡೊಯ್ಯುವ ವಿಚಾರದಲ್ಲಿ ರಾಜ್ಯ ಸರ್ಕಾರಗಳು ಹೆಚ್ಚಿನ ಆಸಕ್ತಿ ತೋರದೇ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಂಚೆ ಕಚೇರಿಗಳ ಮೂಲಕ ಬೇಳೆ ಕಾಳುಗಳನ್ನು ವಿತರಿಸಲು ಯೋಜನೆ ಸಿದ್ಧಪಡಿಸಿದೆ.
ಈ ಕುರಿತು ಈಗಾಗಲೇ ನಾವು ಅಂಚೆ ಕಚೇರಿ ಜೊತೆ ಮಾತುಕತೆ ನಡೆಸಿದ್ದೇವೆ. ಯೋಜನೆಯ ಆರಂಭಿಕ ಕ್ರಮವಾಗಿ ಕೆಲವು ಅಂಚೆ ಕಚೇರಿಗಳಲ್ಲಿ ಸಬ್ಸಿಡಿ ದರದಲ್ಲಿ ಕಡ್ಲೆಕಾಳು (ಕಾಬೂಲ್) ಪೂರೈಸಲು ಚಿಂತನೆ ನಡೆದಿದೆ ಎಂದು ಗ್ರಾಹಕರ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಹೇಮ್‌ಪಾಂಡೆ ಹೇಳಿದ್ದಾರೆ.
ಅಗತ್ಯ ವಸ್ತುಗಳ ದಾಸ್ತಾನು ಮತ್ತು ದರಗಳ ಕುರಿತು ಅಂತರ ಸಚಿವಾಲಯ ಮಟ್ಟದ ಸಮಿತಿ ನಿನ್ನೆ ಸಭೆ ಸೇರಿ ಪರಿಸ್ಥಿತಿಯನ್ನು ಪರಾಮರ್ಶಿಸಿದ ನಂತರ ಇಂತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗ್ರಾಹಕರ ವ್ಯವಹಾರಗಳ ಸಚಿವಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.
ರಾಜ್ಯಗಳಲ್ಲಿ ನ್ಯಾಯಬೆಲೆ ಅಂಗಡಿಗಳು ಇಲ್ಲದ ಕಡೆ ಬೇಳೆ ಕಾಳುಗಳ ವಿತರಣೆಗೆ ಅಂಚೆ ಜಾಲವನ್ನು ಬಳಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ.
ಅಂಚೆ ಕಚೇರಿಗಳಲ್ಲಿ ಬೇಳೆ ಕಾಳುಗಳ ಪೊಟ್ಟಣಗಳನ್ನು ದಾಸ್ತಾನು ಮಾಡುವ ಕುರಿತಂತೆ ಕೆಲವೇ ದಿನಗಳಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತೇವೆ ಎಂದು ಪಾಂಡೆ ಹೇಳಿದ್ದಾರೆ.
ಈಗಾಗಲೇ ಭಾರತೀಯ ರಾಷ್ಟ್ರೀಯ ಸಹಕಾರ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ದೆಹಲಿಯಲ್ಲಿ ಮೊಬೈಲ್ ವಾಹನಗಳ ಮೂಲಕ ಬೇಳೆ ಕಾಳುಗಳನ್ನು ಮಾರಾಟ ಮಾಡುತ್ತಿದೆ. ಇದೇ ಸಂಸ್ಥೆ ಮೂಲಕ ವಿನೂತನ ಯೋಜನೆಯನ್ನು ಜಾರಿಗೆ ತರಬಹುದೇ ಎಂಬುದನ್ನು ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.