ಕಿಯೋನ್‍ಝರ್: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯಿಂದ (ಪೊಲೀಸ್) ಶೂಗಳ ಲೇಸ್ ಕಟ್ಟಿಸಿಕೊಂಡು ಉದ್ಘಟತನ ಪ್ರದರ್ಶಿಸಿರುವ ಒಡಿಶಾ ಸಚಿವ ಜೋಗೇಂದ್ರ ಬೆಹ್ರಾ, ತಾವು ಎಸಗಿದ ಲೋಪವನ್ನು ಸಮರ್ಥಿಸಿಕೊಂಡಿದ್ದೇ ಅಲ್ಲದೆ ತಾವೊಬ್ಬ ಅತಿಗಣ್ಯ ವ್ಯಕ್ತಿ ಎಂದು ದರ್ಪದ ಹೇಳಿಕೆ ನೀಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇಲ್ಲಿ ನಿನ್ನೆ ನಡೆದ 70ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಧ್ವಜಾರೋಹಣ ಮಾಡುವುದಕ್ಕೆ ಮುನ್ನ ಸಾರ್ವಜನಿಕರ ಎದುರೇ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ಬೆಹ್ರಾ ತಮ್ಮ ಶೂಗಳ ಲೇಸ್‍ಗಳನ್ನು ಪೊಲೀಸ್ ಪೇದೆಯಿಂದ ಬಿಚ್ಚಿಸಿಕೊಂಡರು. ಧ್ವಜಾರೋಹಣದ ನಂತರ ಮತ್ತೆ ಅದೇ ಶೂಗಳನ್ನು ಹಾಕಿಸಿಕೊಂಡು ಲೇಸ್‍ಗಳನ್ನು ಕಟ್ಟಿಸಿಕಕೊಂಡರು. ಈ ದೃಶ್ಯ ಸ್ಥಳೀಯ ವಾರ್ತಾ ವಾಹಿನಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿ ಜನರು ಸಚಿವರಿಗೆ ಹಿಡಿಶಾಪ ಹಾಕಿದರು.
ಈ ಬಗ್ಗೆ ಪತ್ರಕರ್ತರು ಮತ್ತು ಮಾಧ್ಯಮ ಪ್ರತಿನಿಧಿಗಳು ಸಚಿವರನ್ನು ಪ್ರಶ್ನಿಸಿದಾಗ ತಾವು ಮಾಡಿದ ತಪ್ಪಿಗೆ ಕ್ಷಮೆ ಕೇಳುವ ಬದಲು ದುರಹಂಕಾರದ ಹೇಳಿಕೆ ನೀಡಿದರು. ಹೌದು. ನಾನೊಬ್ಬ ಅತಿಗಣ್ಯ ವ್ಯಕ್ತಿ. ಧ್ವಜಾರೋಹಣ ಮಾಡುವವನು ನಾನೇ ಹೊರತು, ಆತ (ಪೊಲೀಸ್ ಪೇದೆ) ಅಲ್ಲ ‘ ಎಂದು ದರ್ಪದಿಂದ ಉತ್ತರಿಸಿದರು. ಸಚಿವನ ಉದ್ಧಟನ ಮತ್ತು ದರ್ಪದ ಹೇಳಿಕೆ ಬಗ್ಗೆ ಎಲ್ಲ ವಲಯಗಳಲ್ಲೂ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. `ಸರ್ವರೂ ಸಮಾನರು’ ಎಂಬ ಭಾರತ ಸ್ವಾತಂತ್ರ್ಯದ ಧ್ಯೇಯವಾಕ್ಯ ಮೊಳಗಿದ ಸಂದರ್ಭದಲ್ಲೇ ಮಂತ್ರಿ ಮಹೋದಯನ್ ಈ ವರ್ತನೆ ಕ್ಷಮೆಗೆ ಅನರ್ಹವಾಗಿದೆ.
Comments are closed.