ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಹೊಂದಿರಕೊಂಡಿರುವ ಕಬಿನಿ ವನ್ಯಜೀವಿ ನಿಸರ್ಗಧಾಮವು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ದಿನದಿಂದ ದಿನಕ್ಕೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡ ಜಾಸ್ತಿ ಆಗುತ್ತಿದೆ.
ವನ್ಯಜೀವಿಗಳಿಗೆ ಸ್ವರ್ಗವೆಂದೇ ಹೆಸರಾಗಿರುವ ಕಬಿನಿ ವನ್ಯಜೀವಿ ನಿಸರ್ಗಧಾಮವುದೆ ಬೆಂಗಳೂರಿನಿಂದ 208 ಕಿ.ಮೀ.ದೂರದಲ್ಲಿದೆ. ಇಲ್ಲಿರುವ ಪ್ರಾಣಿ-ಪಕ್ಷಿಗಳನ್ನು ನೋಡುವ ಜೊತೆಗೆ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಕನ್ನಡಿಗ ವರ್ಲ್ಡ್’ನ ಪ್ರತಿನಿಧಿ ಇಲ್ಲಿಯ ಪ್ರಾಕೃತಿಕ ಸೌಂದರ್ಯ, ಪ್ರಾಣಿ-ಪಕ್ಷಿಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ಏಶಿಯನ್ ಆನೆಗಳೆಂದೇ ಹೆಸರುವಾಸಿಯಾಗಿರುವ ನಾಗರಹೊಳೆ ಅರಣ್ಯದಲ್ಲಿರುವ ಆನೆಗಳಲ್ಲಿ ಮಿಸ್ಟರ್ ಕಬಿನಿ(ಕಬಾಲಿ) ಎಂದೇ ಖ್ಯಾತಿಗಳಿಸಿರುವ ಸುಮಾರು 50 ವರ್ಷದ ಆನೆಯೊಂದು ನೋಡ ಸಿಗುದೆ ಬಲು ಅಪರೂಪ. ಇಂಥ ಸಂದರ್ಭದಲ್ಲಿ ಕನ್ನಡಿಗ ವರ್ಲ್ಡ್’ನ ಪ್ರತಿನಿಧಿ ತಮ್ಮ ಕ್ಯಾಮಾರಾದಲ್ಲಿ ಆನೆಯ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ಈ ಆನೆ ಅಂತಿಂಥ ಆನೆಯಲ್ಲ…ನಡೆದಾಡುವಾಗ ಆನೆಯ ದಂತ ನೆಲಕ್ಕೆ ತಾಗುತ್ತದೆ. ಜೊತೆಗೆ ಪ್ರಾಕೃತಿಕ ಸೌಂದರ್ಯವನ್ನು ಸೆರೆ ಹಿಡಿದಿದ್ದಾರೆ.
ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಕಬಿನಿ ನದಿಯು ಅರಣ್ಯದುದ್ದಕ್ಕೂ ಹರಿಯುತ್ತದೆ. ಆದ್ದರಿಂದ ಕಬಿನಿ ಹರಿಯುವ ಪ್ರದೇಶವನ್ನು ಕಬಿನಿ ಅರಣ್ಯವೆಂದು ಹೆಸರಿಸಲಾಗಿದೆ.
ಕಬಿನಿ ಅರಣ್ಯ ಸಂರಕ್ಷಿತ ಪ್ರದೇಶವು ಸುಮಾರು 55 ಎಕರೆಯಷ್ಟು ದಟ್ಟ ಅರಣ್ಯವನ್ನು ಹೊಂದಿದೆ. ಸುಂದರ ಬೆಟ್ಟಗುಡ್ಡಗಳ ಸಾಲು, ಕೆರೆ, ನದಿ ನೀರಿನ ಹರಿವು ಮುಂತಾದವುಗಳನ್ನು ಕಬಿನಿ ಅರಣ್ಯ ಪ್ರದೇಶದ ಜೀವಾಳವಾಗಿದೆ. ಕಬಿನಿ ಅಣೆಕಟ್ಟು ಹಿನ್ನೀರಿನಿಂದ ನಿರ್ಮಾಣಗೊಂಡಿರುವ ದೊಡ್ಡ ನೀರಿನ ಸಂಗ್ರಹಕ್ಕೆ ಮಾಸ್ತಿಗುಡಿ ಕೆರೆ ಎಂದು ಕರೆಯಲಾಗುತ್ತದೆ. ಇಲ್ಲಿದ್ದ ಮಾಸ್ತಿಗುಡಿ ಎಂಬ ಗ್ರಾಮವು ಕಬಿನಿ ಅಣೆಕಟ್ಟು ಹಿನ್ನೀರಿನಿಂದ ಮುಳುಗಿದೆ. ಆ ಗ್ರಾಮ ಇದ್ದ ಪ್ರದೇಶದಲ್ಲಿ ಬರುವ ಹಿನ್ನೀರಿಗೆ ಮಾಸ್ತಿಗುಡಿ ಕೆರೆ ಎಂದು ಕರೆಯಲಾಗುತ್ತಿದೆ. ಈ ಅಣೆಕಟ್ಟು ನಾಗರಹೊಳೆ ಸಂರಕ್ಷಿತ ಅರಣ್ಯ ಪ್ರದೇಶ ಮತ್ತು ಬಂಡೀಪುರ ಅರಣ್ಯಪ್ರದೇಶವನ್ನು ಎರಡು ವಿಭಾಗಗಳನ್ನಾಗಿಸಿದೆ.
ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಅನೇಕ ವನಸ್ಪತಿ ಗಿಡಗಳು ಇಲ್ಲಿ ಬೆಳೆಯುತ್ತವೆ. ಮಳೆಗಾಲದ ಹೊರತಾಗಿಯೂ ಇಲ್ಲಿ ತೇವಾಂಶ ಪ್ರಮಾಣ ಹೆಚ್ಚಿರುವುದರಿಂದ ಹೆಚ್ಚಿನ ಗಿಡ,ಮರಗಳು ಬೆಳೆಯಲು ಅನುಕೂಲಕರವಾದ ವಾತಾವರಣವಿದೆ. ಪ್ರತಿವರ್ಷ ಇಲ್ಲಿ 1000 ಮಿ.ಮೀ. ನಷ್ಟು ಮಳೆಯ ಪ್ರಮಾಣ ದಾಖಲಾಗುತ್ತದೆ.
ಕಬಿನಿ ಅರಣ್ಯದಲ್ಲಿನ ವಿಶಾಲವಾದ ಹುಲ್ಲುಗಾವಲು, ದಟ್ಟವಾದ ಪೊದೆ ಮತ್ತು ಆಳವಾದ ಕಂದಕಗಳು ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತವೆ. ಇದಕ್ಕಾಗಿಯೇ ನಾಗರಹೊಳೆ ಅರಣ್ಯ ಪ್ರದೇಶದಿಂದ ಬಹಳಷ್ಟು ಸಂಖ್ಯೆಯ ಸಸ್ಯಾಹಾರಿ ಪ್ರಾಣಿಗಳು ಮುಖ್ಯವಾಗಿ ಕಾಡಾನೆಗಳು ಕಬಿನಿ ಪ್ರದೇಶಕ್ಕೆ ಆಹಾರ ಅರಸಿ ಬರುತ್ತವೆ. ಏಶಿಯನ್ ಆನೆಗಳೆಂದೇ ಹೆಸರುವಾಸಿಯಾಗಿರುವ ನಾಗರಹೊಳೆ ಅರಣ್ಯದಲ್ಲಿರುವ ಆನೆಗಳು ಸೇರಿದಂತೆ, ಜಿಂಕೆ, ಕಾಡೆಮ್ಮೆ, ಕಾಡುಕೋಣ, ಸಂಬಾರ, ಕಾಡುಹಂದಿ, ಲಂಗೂರ್ ಮುಂತಾದ ಪ್ರಾಣಿಗಳು ಭಾರಿ ಸಂಖ್ಯೆಯಲ್ಲಿ ಕಬಿನಿ ಅರಣ್ಯ ಪ್ರದೇಶಕ್ಕೆ ಆಹಾರ ಅರಸಿಕೊಂಡು ಬರುತ್ತವೆ.
ಈ ರೀತಿ ವಲಸೆ ಬರುವ ಸಸ್ಯಾಹಾರಿ ಪ್ರಾಣಿಗಳಿಂದ ಕಬಿನಿ ಅರಣ್ಯ ಪ್ರದೇಶದಲ್ಲಿ ಇರುವ ಕಾಡುಮೃಗಗಳಾದ ಹುಲಿ, ಚಿರತೆ, ಕಾಡುನಾಯಿ, ನರಿ, ತೋಳಗಳಿಗೆ ಆಹಾರದ ವಿಫುಲ ಅವಕಾಶ ಸಿಗುತ್ತದೆ. ಕಾಡಿನಲ್ಲಿ ಸಫಾರಿ ಮಾಡುವಾಗ ಅಲ್ಲಿ ನಡೆಯುವ ಕಾಡುಪ್ರಾಣಿಗಳು ಬೇಟೆಯಾಡುವುದನ್ನು ನೋಡಬಹುದು.
ಆನೆಗಳ ಹಿಂಡು ಮತ್ತು ಚಿರತೆ, ಜಿಂಕೆ, ಲಂಗೂರ, ಕರಡಿ, ಮೊಸಳೆ ಕಬಿನಿ ಅರಣ್ಯದಲ್ಲಿ ಸಫಾರಿ ಮಾಡುವಾಗ ನೋಡಬಹುದಾದ ಪ್ರಾಣಿಗಳು. ಕಬಿನಿಯಲ್ಲಿ ಸುಮಾರು 200 ಕ್ಕೂ ಬಗೆಯ ವಿವಿಧ ಪಕ್ಷಿ ಸಂಕುಲಗಳ ಕಲರವ ಕೇಳಿ ಆನಂದಿಸಬಹುದು. ಇಲ್ಲಿ ಆನೆ ಸಫಾರಿ ಮತ್ತು ಜಂಗಲ್ ಸಫಾರಿ, ಬೋಟಿಂಗ್ ಮಾಡುತ್ತ ಕಾಡಿನ ಸೌಂದರ್ಯ ಸವಿಯಬಹುದಾಗಿದೆ. ನದಿ ದಂಡೆಯಲ್ಲಿ ಬಿಸಿಲಿನ ಪ್ರಖರತೆಗೆ ಮೈಯೊಡ್ಡಿರುವ ಭಾರಿ ಗಾತ್ರದ ಮೊಸಳೆಗಳನ್ನು ಇಲ್ಲಿ ಕಾಣಬಹುದಾಗಿದೆ.
ಇದರೊಂದಿಗೆ ಪ್ರವಾಸಿಗರು ಇಲ್ಲಿ ಸೈಕ್ಲಿಂಗ್, ಪಕ್ಷಿ ವೀಕ್ಷಣೆ, ಕ್ಯಾಂಪ್ ಫೈರ್ ಮಾಡಬಹುದು. ಜತೆಗೆ ಹತ್ತಿರದ ಹಳ್ಳಿಗಳಿಗೆ ವಾಕಿಂಗ್ ಮಾಡುತ್ತ ಪ್ರಕೃತಿಯ ಸೌಂದರ್ಯ ಸವಿಯಹುದು. ಕಬಿನಿ ನಿಸರ್ಗಧಾಮವು ದೇಶದ ಬಹಳಷ್ಟು ಪ್ರವಾಸಿಗರ ಅಚ್ಚಮೆಚ್ಚಿನ ಪ್ರವಾಸಿ ತಾಣವಾಗಿದೆ. ಇಲ್ಲಿನ ಪ್ರಶಾಂತತೆ ಮತ್ತು ಪ್ರಕೃತಿಯ ಮಡಿಲಲ್ಲಿ ದಿನ ಕಳೆಯುವುದರಿಂದ ಪ್ರವಾಸಿಗರು ಹೊಸ ಉತ್ಸಾಹ, ಉಲ್ಲಾಸ ಪಡೆಯುವುದರಲ್ಲಿ ಸಂದೇಹವೇ ಇಲ್ಲ. ಇಲ್ಲಿನ ವನ್ಯಜೀವಿ ಸಂಕುಲಗಳ ಸುಂದರ ಜೀವನಶೈಲಿ ಪ್ರವಾಸಿಗರಿಗೆ ಮನದುಂಬಿಸುತ್ತದೆ. ಅದಕ್ಕೆಂದೇ ಪ್ರವಾಸಿಗರು ಒಮ್ಮೆಯಾದರೂ ಕಬಿನಿ ಅರಣ್ಯ ಪ್ರದೇಶವನ್ನು ನೋಡಬೇಕು.
Comments are closed.