ಹಾಸನ: ಹುಡುಗಿ ಒಬ್ಬಳು, ಆದ್ರೆ ಆಕೆಯ ಹಿಂದೆ ಬಿದ್ದಿದ್ದು ಇಬ್ಬರು ಹುಡುಗರು. ಇವನು ಪ್ರೀತಿ ಮಾಡುತ್ತಿರುವ ವಿಷ್ಯ ಅವನಿಗೆ ಗೊತ್ತಿಲ್ಲ. ಅವನು ಆಕೆಯನ್ನು ಪ್ರೀತಿಸ್ತೀರೋದು ಇವನಿಗೂ ಗೊತ್ತಿಲ್ಲ. ಯಾವಾಗ ಈ ವಿಚಾರ ಇಬ್ಬರಿಗೆ ತಿಳಿಯಿತೋ ಆಕೆಗಾಗಿ ಇಬ್ಬರೂ ಎಲ್ಲರ ಮುಂದೆಯೇ ಜಗಳವಾಡಿಕೊಂಡಿದ್ದಾರೆ.
ಹೌದು. ಹುಡುಗಿಯೊಬ್ಬಳ ವಿಚಾರಕ್ಕೆ ಯುವಕನೊಬ್ಬ ಇಬ್ಬರಿಗೆ ಚಾಕುವಿನಿಂದ ಇರಿದಿರುವ ಘಟನೆ ಮಂಗಳವಾರ ಸಂಜೆ ಹಾಸನ ಬಸ್ ನಿಲ್ದಾಣದಲ್ಲಿ ನಡೆದಿದೆ. ಧನುಷ್ ಒಂದು ಹುಡುಗಿಯ ಹಿಂದೆ ಬಿದ್ದಿದ್ದು, ಈ ವಿಷಯ ಅದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಸುನೀಲ್ ಎಂಬುವವನ ಕಿವಿಗೆ ಬಿದ್ದಿತ್ತು. ಇದೇ ಜಿದ್ದಿನಿಂದ ಧನುಷ್‍ನನ್ನು ಹಿಂಬಾಲಿಸಿದ ಸುನೀಲ್, ಬೇಕಂತಲೇ ಕೆಣಕಿ ಜಗಳ ತೆಗೆದಿದ್ದಾನೆ. ಈ ವೇಳೆ ದೊಡ್ಡ ಜಗಳವೇ ನಡೆದುಹೋಗಿದೆ.
ಚಾಕು ಇರಿತ: ಧನುಷ್‍ಗೆ ಹಲ್ಲೆ ಮಾಡುವಾಗ ಧನುಷ್‍ನ ಅಣ್ಣ ಸುದೀಪ್ ಮತ್ತು ಗೆಳೆಯ ಹೇಮಂತ್ ಸುನೀಲ್‍ನನ್ನು ತಡೆಯಲು ಮುಂದಾಗಿದ್ದಾರೆ. ತಕ್ಷಣ ಜೇಬಿನಲ್ಲಿದ್ದ ಚಾಕು ತೆಗೆದ ಸುನೀಲ್, ಸುದೀಪ್ ಮತ್ತು ಆತನೊಂದಿಗಿದ್ದ ಹೇಮಂತ್‍ಗೆ ಇರಿದಿದ್ದಾನೆ.
ಇದರಿಂದ ಸಿಟ್ಟಿಗೆದ್ದ ಧನುಷ್, ಹೇಮಂತ್ ಮತ್ತು ಸುದೀಪ್ ಸುನೀಲ್‍ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಸುದೀಪ್‍ನ ಹೊಟ್ಟೆ ಮತ್ತು ಎದೆ ಭಾಗಕ್ಕೆ ಇರಿತದಿಂದ ಗಂಭೀರವಾಗಿ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.