
ಮ೦ಗಳೂರು, ಜೂ.22 : ಖಾಸಗಿ ವಾಹನ ಸೇರಿದಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಟ್ರಿಪ್ ನಡೆಸುವ ಎಲ್ಲಾ ವಾಹನಗಳು ಕಡ್ಡಾಯವಾಗಿ ಹಳದಿ ಬಣ್ಣ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.
ಅವರು ಬುಧವಾರ ತಮ್ಮ ಕಚೇರಿಯಲ್ಲಿ ಶಾಲಾ ವಾಹನಗಳ ಸುರಕ್ಷತೆ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಿದ್ದರು. ನಿಯಮ ಉಲ್ಲಂಘಿಸಿ ಶಾಲಾ ಮಕ್ಕಳನ್ನು ಕೊಂಡೊಯ್ಯುವ ವಾಹನಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಪೊಲೀಸ್ ಮತ್ತು ಆರ್‌ಟಿಓ ಇಲಾಖೆಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಶಾಲಾ ವಾಹನಗಳ ಸಂಬಂಧ ಜಾರಿಯಲ್ಲಿರುವ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಜೂನ್ 30ರೊಳಗೆ ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸು ವಂತೆ ಅವರು ಆರ್‌ಟಿಓಗೆ ಸೂಚಿಸಿದರು.
ಶಾಲಾ ಟ್ರಿಪ್ ನಡೆಸುವ ಆಟೋರಿಕ್ಷಾಗಳಲ್ಲಿ 12 ವರ್ಷಕ್ಕಿಂತ ಕೆಳಗಿನ 6 ಮಕ್ಕಳು ಹಾಗೂ ಮಾರುತಿ ಓಮಿನಿಗಳಲ್ಲಿ 8 ಮಕ್ಕಳನ್ನು ಮಾತ್ರ ನಿಯಮಾನುಸಾರ ಸಾಗಿಸಬೇಕಿದೆ. 12 ವರ್ಷಕ್ಕಿಂತ ಮೇಲಿನ ಮಕ್ಕಳನ್ನು ವಾಹನದ ಸೀಟಿನ ಸಾಮರ್ಥ್ಯದಷ್ಟೇ ಕರೆದುಕೊಂಡು ಹೋಗಬೇಕು. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಆರ್‌ಟಿಓ ಹಾಗೂ ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕು. ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಈ ಕ್ರಮ ಜಾರಿಗೆ ತರಲಾಗುತ್ತಿದ್ದು, ಪಾಲಕರು ಇದಕ್ಕೆ ಸಹಕರಿಸಬೇಕು ಎಂದು ಎ.ಬಿ. ಇಬ್ರಾಹಿಂ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷನ್ ಗುಲಾಬ್‌ರಾವ್ ಬೊರಸೆ, ಡಿಸಿಪಿ ಶಾಂತರಾಜು, ಆರ್‌ಟಿಓ ಜಿ.ಎಸ್.ಹೆಗಡೆ, ಡಿಡಿಪಿಐ ವಾಲ್ಟರ್ ಡಿಮೆಲ್ಲೋ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ವಾಹನಗಳ ನಿರ್ವಹಣೆ:
ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಈಗಾಗಲೇ ಜಾರಿಯಲ್ಲಿರುವ ಈ ಕೆಳಗಿನ ನಿಯಮಗಳನ್ನು ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಶಾಲಾ ವಾಹನಗಳು ಕಡ್ಡಾಯವಾಗಿ ಹಳದಿ ಬಣ್ಣದಲ್ಲಿರಬೇಕು.
ಶಾಲಾ ವಾಹನಗಳ ಹಿಂದೆ ಹಾಗೂ ಮುಂಭಾಗ ಬಾಡಿಗೆಗೆ ಪಡೆದುಕೊಂಡ ವಾಹನವಾಗಿದ್ದಲ್ಲಿ ‘ಸ್ಕೂಲ್‌ಡ್ಯೂಟಿ ಮೇಲೆ’ ಎಂದು ಸ್ಪಷ್ಟವಾಗಿ ನಮೂದಿಸಬೇಕು.
ಶಾಲಾ ವಾಹನದಲ್ಲಿ ಪ್ರಥಮ ಚಿಕಿತ್ಸೆ ಬಾಕ್ಸ್ ಇರಬೇಕು
ಶಾಲಾ ವಾಹನದಲ್ಲಿ ನಿರ್ದಿಷ್ಟಪಡಿಸಿದ ಗುಣಮಟ್ಟದ ಸ್ಪೀಡ್ ಗವರ್‍ನರ್ ಅಳವಡಿಸಬೇಕು.
ವಾಹನದ ಕಿಟಕಿಗಳಲ್ಲಿ ಸಮತಲ ಗ್ರಿಲ್ಸ್‌ಗಳನ್ನು ಅಳವಡಿಸಿರಬೇಕು.
ವಾಹನದಲ್ಲಿ ಬೆಂಕಿ ನಂದಿಸುವ ಅಗ್ನಿ ಶಾಮಕ ಇರಬೇಕು.
ಶಾಲೆಯ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ವಾಹನದ ಮೇಲೆ ಬರೆಯಬೇಕು.
ವಾಹನದ ಬಾಗಿಲುಗಳಿಗೆ ವಿಶ್ವಾಸಾರ್ಹ ಬೀಗಗಳನ್ನು ಅಳವಡಿಸಿರಬೇಕು.
ಶಾಲಾ ಮಕ್ಕಳನ್ನು ನೋಡಿಕೊಳ್ಳಲು ವಾಹನದಲ್ಲಿ ಒಬ್ಬ ಅಟೆಂಡರ್ ಇರಬೇಕು
ವಿದ್ಯಾರ್ಥಿಗಳ ತಂದೆ/ತಾಯಿ, ಪೋಷಕರು/ ಶಾಲಾ ಶಿಕ್ಷಕರು ವಾಹನದಲ್ಲಿನ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ವಾಹನದಲ್ಲಿ ಕುಳಿತು ಪ್ರಯಾಣಿಸಬಹುದು.
Comments are closed.