ಕರ್ನಾಟಕ

ಬೆಂಗಳೂರಿನಲ್ಲಿ ಯುವತಿ ಎತ್ತೊಯ್ದು ಅತ್ಯಾಚಾರ ಯತ್ನ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Pinterest LinkedIn Tumblr

https://youtu.be/11B55H4eqX8

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯುವತಿಯೊಬ್ಬರನ್ನು ಎತ್ತೊಯ್ದು ನಿರ್ಮಾಣ ಹಂತದ ಕಟ್ಟದಲ್ಲಿ ಅತ್ಯಾಚಾರ ಮಾಡಲು ಯತ್ನಿಸಿದ ಘಟನೆ ಕಳೆದ ಏಪ್ರಿಲ್ 23ರಂದು ನಡೆದಿದೆ.

ಈ ಸಂಬಂಧ ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅವರು, ಏಪ್ರಿಲ್ 23ರಂದು ಕತ್ರಿಗುಪ್ಪೆಯಲ್ಲಿ ರಾತ್ರಿ 9.40ರ ಸುಮಾರಿಗೆ ಯುವತಿಯೊಬ್ಬರನ್ನು ದುಷ್ಕರ್ಮಿ ಎತ್ತಿಕೊಂಡು ಹೋಗಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಅಂದೇ ಸ್ಥಳೀಯ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ದೂರು ನೀಡುವಂತೆ ಯುವತಿಗೆ ಹಾಗೂ ಪಿಜಿ ಮಾಲೀಕರಿಗೆ ಪೊಲೀಸರು ಸೂಚಿಸಿದ್ದರು. ಆದರೆ ಇಬ್ಬರೂ ದೂರು ನೀಡಲು ಹಿಂಜರಿದಿದ್ದರು. ಇಂತಹ ಪ್ರಕರಣಗಳಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಬರುವುದಿಲ್ಲ. ಹೀಗಾಗಿ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿಲ್ಲ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಇಂದು ಮಾಧ್ಯಮಗಳ ಮೂಲಕ ವಿಚಾರ ಬಹಿರಂಗವಾದ ನಂತರ ಯುವತಿ ವಾಸಿಸುತ್ತಿದ್ದ ಪಿಜಿ ಮಾಲೀಕ ಮಂಜುನಾಥ್ ಹಾಗೂ ಸಂತ್ರಸ್ಥೆಯಿಂದ ದೂರು ಪಡೆದಿದ್ದು, ಮಾಹಿತಿ ಪಡೆದು ತನಿಖೆ ನಡೆಸುವಂತೆ ಡಿಸಿಪಿಗೆ ಸೂಚಿಸಿರುವುದಾಗಿ ಮೇಘರಿಕ್ ತಿಳಿಸಿದ್ದಾರೆ. ಅಲ್ಲದೆ ಆದಷ್ಟು ಬೇಗ ಆರೋಪಿಯನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ಪಿಜಿ ಬಳಿ ಮೊಬೈಲ್ ನಲ್ಲಿ ಮಾತನಾಡುತ್ತ ನಿಂತಿದ್ದ ಮಣಿಪುರ ಮೂಲದ 22 ವರ್ಷದ ಯುವತಿನ್ನು ಯುವಕನೊಬ್ಬ ಎತ್ತೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ ಕೂಡಲೇ ಯುವತಿ ಆತನ ಕೈಗೆ ಕಚ್ಚಿ ಅಲ್ಲಿಂದ ತಪ್ಪಿಸಿಕೊಂಡು ಪಿಜಿ ಸೇರಿದ್ದಾಳೆ. ಯುವತಿಯನ್ನು ಎಳೆದೊಯ್ಯುತ್ತಿರುವ ದೃಶ್ಯ ಪಿಜಿ ಎದುರುಗಡೆ ಇರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Write A Comment