ಮನೋರಂಜನೆ

ಸಿಡಿದೆದ್ದ ಯೂಸುಫ್ ಪಠಾಣ್ ! ಆರ್ ಸಿಬಿಯನ್ನು ತವರಿನಲ್ಲಿ 5 ವಿಕೆಟ್ ಅಂತರದಿಂದ ಸೋಲಿಸಿದ ಕೆಕೆಆರ್

Pinterest LinkedIn Tumblr

yusuf-pathan-kkr-rcb

ಬೆಂಗಳೂರು: ಸೋಲಿನ ಸರಪಳಿಗೆ ಸಿಲುಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದರಿಂದ ಹೊರಬರುವ ಲಕ್ಷಣಗಳೇ ತೋರುತ್ತಿಲ್ಲ. ಇಂದು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ ಕೋಲ್ಕತಾ ವಿರುದ್ಧ 5 ವಿಕೆಟ್ ಅಂತರದ ಸೋಲು ಕಂಡಿದೆ.

ಬೆಂಗಳೂರು ತಂಡ ನೀಡಿದ 186 ರನ್ ಗಳ ಬೃಹತ್ ಗುರಿಯನ್ನು ಬೆನ್ನುಹತ್ತಿದ ಕೋಲ್ಕತಾ ಆರಂಭಿಕ ಆಘಾತದ ನಡುವೆಯೂ ಚೇತರಿಸಿಕೊಂಡಿತು. ಉತ್ತಪ್ಪ ಕೇವಲ 1ರನ್ ಗಳಿಸಿ ಔಟ್ ಆಗುವುದರೊಂದಿಗೆ ಮತ್ತೆ ನಿರಾಸೆ ಮೂಡಿಸಿದರೆ, ನಾಯಕ ಗೌತಮ್ ಗಂಭೀರ್ 37 ರನ್ ಸಿಡಿಸಿ ಔಟ್ ಆದರು. ಗಂಭೀರ್ ಔಟ್ ಆದ ಬಳಿಕ ಕೋಲ್ಕತಾದ ಮಧ್ಯಮ ಕ್ರಮಾಂಕ ದಿಢೀರ್ ಕುಸಿತಕಂಡಿತು. ಲಿನ್ನ್ (15 ರನ್) ಮತ್ತು ಪಾಂಡೇ (8 ರನ್) ಬೇಗನೇ ಔಟ್ ಆದರು. ಈ ಹಂತದಲ್ಲಿ ಜೊತೆಗೂಡಿದ ಯೂಸುಫ್ ಪಠಾಣ್ ಮತ್ತು ರಸೆಲ್ ಜೋಡಿ ನಿಜಕ್ಕೂ ಆರ್ ಸಿಬಿ ಬೌಲರ್ ಗಳ ಮೇಲೆ ಸವಾರಿ ಮಾಡಿದರು. ರಸೆಲ್ 39 ರನ್ ಗಳಿಸಿ ಔಟ್ ಆದರೆ, ಯೂಸುಫ್ ಪಠಾಣ್ ಆಕರ್ಷಕ ಅರ್ಧಶತಕ (ಅಜೇಯ 60 ರನ್) ಗಳಿಸಿ ಕೋಲ್ಕತಾ ತಂಡವನ್ನು ಗೆಲುವಿನ ದಡ ಸೇರಿಸಿದರು.

ಅಂತಿಮವಾಗಿ ಕೋಲ್ಕತಾ ತಂಡ ಇನ್ನೂ ಐದು ಎಸೆತ ಬಾಕಿ ಇರುವಂತೆಯೇ 19.1 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿ ಜಯಭೇರಿ ಭಾರಿಸಿತು. ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೆಎಸ್ ರಾಹುಲ್ ಅವರ ಅರ್ಧಶತಕದ ನೆರವಿನಿಂದ 185 ರನ್ ಗಳನ್ನು ಕಲೆಹಾಕಿತ್ತು.

Write A Comment