
ಬ್ರಹ್ಮಾವರ: ಶಿಕ್ಷಕ ವೃತ್ತಿ ಎನ್ನುವುದು ನೊಬೆಲ್ ವೃತ್ತಿಯಾಗಿದೆ. ಮಕ್ಕಳನ್ನು ರೂಪಿಸುವ ಪುಣ್ಯದ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ. ಗುರುಗಳು ಕಲಿಸಿದ್ದನ್ನು ಮಕ್ಕಳು ಕಲಿಯುತ್ತಾರೆ, ಮತ್ತದನ್ನು ಮೈಗೂಡಿಸಿಕೊಳ್ಳುತ್ತಾರೆ. ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆಯಿಂದ ಸರಕಾರಿ ಶಾಲೆಯ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಮಾದರಿ ಕಾರ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನಿತಿನ್ ವೈ. ರಾವ್ ಹೇಳಿದರು.

ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲಾ ಘಟಕ, ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಗೀತಾ ಹೆಚ್.ಎಸ್.ಎನ್ ಫೌಂಡೇಶನ್(ರಿ.) ಕೋಟೇಶ್ವರ, ಗೀತಾನಂದ ಫೌಂಡೇಶನ್ ಮಣೂರು-ಪಡುಕೆರೆ, ಕೋಟ, ಕರ್ನಾಟಕ ಶಿಕ್ಷಣ ಸಮನ್ವಯ ಮತ್ತು ತರಬೇತಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಮಗು ಮತ್ತು ಕಾನೂನು ಕೇಂದ್ರ, ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿರ್ವಸಿಟಿ ಬೆಂಗಳೂರು ಸುಗಮಕಾರರಾಗಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ರವಿವಾರ ಬ್ರಹ್ಮಾವರ ಬಂಟರ ಭವನದಲ್ಲಿ ಹಮ್ಮಿಕೊಂಡ 2026-27 ನೇ ಸಾಲಿನ ‘ಗುರುವಂದನಾ ಕಾರ್ಯಕ್ರಮ’, ‘ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ಮತ್ತು ‘ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್.ಡಿ.ಎಂ.ಸಿ. ಮತ್ತು ಸರಕಾರಿ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ಅವರು ಮಾತನಾಡಿದರು.
ಗೀತಾ ಎಚ್.ಎಸ್.ಎನ್ ಪೌಂಢೇಶನ್ ಕೋಟೇಶ್ವರದ ಅಧ್ಯಕ್ಷ ಶಂಕರ ಐತಾಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಮಕ್ಕಳನ್ನು ತಿದ್ದುವ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕುವ ಭದ್ರ ಬುನಾದಿ ಹಾಕುತ್ತಾರೆ. ಗುರುಗಳು ಸಮಾಜದ ಇಂಜಿನಿಯರ್ ಎಂದರು.
ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಪ್ರಾಸ್ತಾವಿಕ ಮಾತುಗಳನ್ನಾಡಿ, ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಸರಕಾರಿ ಶಾಲೆಗಳು ಉಳಿಯಬೇಕು, ಬೆಳೆಯಬೇಕು ಎಂಬ ನಿಟ್ಟಿನಲ್ಲಿ 15 ವರ್ಷಗಳ ಹಿಂದೆ ಸಮಾನ ಮನಸ್ಕರು ಕಂಡ ಕನಸ್ಸು ಇಂದು ಸಮನ್ವಯ ವೇದಿಕೆಯಾಗಿ ಸೃಷ್ಟಿಯಾಗಿದೆ. ಜಾತಿ,ರಾಜಕೀಯ ರಹಿತವಾಗಿ ನಿಸ್ವಾರ್ಥವಾಗಿ ಸಂಘಟನೆ ದುಡಿಯುತ್ತಿದೆ. ಸರಕಾರಿ ಶಾಲೆಗಳಲ್ಲಿ ದಾಖಲಾತಿ ಶೂನ್ಯದತ್ತ ಸಾಗಿದಾಗ ಶಾಲೆ ಉಳಿಯುವಿಕೆಗೆ ನಡೆದ ಸಂಘಟಿತ ಅಭಿಯಾನವು ಇಂದು ಅವಿರತವಾಗಿ ಪಯಣಿಸುತ್ತಿದೆ. 48 ಸಾವಿರ ಸರಕಾರಿ ಶಾಲೆಯಲ್ಲಿರುವ ಎಸ್ಡಿಎಂಸಿ ಸದಸ್ಯರುಗಳ ಜವಬ್ದಾರಿ, ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ನಿರಂತರ ತರಬೇತಿ ನೀಡಲಾಗುತ್ತಿದೆ. ಸಮಾಜದಲ್ಲಿ ಒಳ್ಳೆಯ ವ್ಯಜ್ತಿಯಾಗಲು ಮೌಲ್ಯಾಧಾರಿತ ಶಿಕ್ಷಣ ಅಗತ್ಯವಿದ್ದು ಸರಕಾರಿ ಶಾಲೆಯಲ್ಲಿ ಇಂತಹ ನೈತಿಕ ಶಿಕ್ಷಣ ಸಿಗುತ್ತದೆ. ಸರ್ವ ಧರ್ಮದ ದೇಗುಲವಾದ ಶಾಲೆ ಅಭಿವೃದ್ಧಿಗೆ ಎಸ್ಡಿಎಂಸಿ ಪಾತ್ರ ದೊಡ್ಡದು. ಎಲ್ಲಾ ಸರಕಾರಿ ಶಾಲೆಗಳ ಎಸ್ಡಿಎಂಸಿ ಬಲವರ್ಧನೆಗೊಳ್ಳಬೇಕು ಎಂದರು.
ಉಡುಪಿ ಡಯಟ್ ಪ್ರಾಂಶುಪಾಲ ಅಶೋಕ್ ಕಾಮತ್ ಟಿ.ಆರ್. ಲೋಗೋ ಅನಾವರಣಗೊಳಿಸಿದರು.
ಎಸ್.ಡಿ.ಎಂ.ಸಿ.ಸಿ.ಸಿ.ಎಫ್ ಬ್ರಹ್ಮಾವರ ತಾಲೂಕು ಘಟಕಾಧ್ಯಕ್ಷ ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಗೀತಾನಂದ ಫೌಂಡೇಶನ್ ಮಣೂರು-ಪಡುಕೆರೆಯ ಪ್ರವರ್ತಕರಾದ ಆನಂದ ಸಿ. ಕುಂದರ್, ಮಂಗಳೂರು ಪಡಿ ನಿರ್ದೇಶಕ ರೆನ್ನಿ ಡಿಸೋಜಾ, ಬ್ರಹ್ಮಾವರ ಬಂಟರ ಭವನದ ಸಂಚಾಲಕ ಭುಜಂಗ ಶೆಟ್ಟಿ, ಹಳಗೇರಿ ಜೋಗಿಮನೆ ಟ್ರಸ್ಟ್ ಅಧ್ಯಕ್ಷ ವಸಂತ ಜೋಗಿ, ಎಸ್.ಡಿ.ಎಂ.ಸಿ.ಸಿ.ಸಿ.ಎಫ್ ರಾಜ್ಯ ಸಂಚಾಲಕ ಮೊಯ್ದಿನ್ ಕುಟ್ಟಿ, ಉಡುಪಿ ಜಿಲ್ಲಾ ಘಟಕದ ಗೌರವ ಸಲಹೆಗಾರರಾದ ಮಲ್ಲಿಕಾ ಬಾಲಕೃಷ್ಣ ಪೂಜಾರಿ ಮೊದಲಾದವರಿದ್ದರು.
ಎಸ್.ಡಿ.ಎಂ.ಸಿ.ಸಿ.ಸಿ.ಎಫ್ ಕುಂದಾಪುರ ತಾಲೂಕು ಅಧ್ಯಕ್ಷ ಎಸ್.ವಿ. ನಾಗರಾಜ್ ಸ್ವಾಗತಿಸಿದರು. ಕೃಷ್ಣಾನಂದ ಶಾನುಭಾಗ್ ಪ್ರಾರ್ಥಿಸಿ, ಅಶ್ವಥ್ ಕುಮಾರ್ ಆಶಯಗೀತೆ ಹಾಡಿದರು. ಶೋಭಾ ಶಾಂತರಾಜ್, ಮನೀಷಾ ಬಿ. ಪೂಜಾರಿ ನಿರೂಪಿಸಿ, ಬಾಲಕೃಷ್ಣ ಪೂಜಾರಿ ವಂದಿಸಿದರು.
ಸನ್ಮಾನ, ಪ್ರಶಸ್ತಿ ಪ್ರದಾನ: ನಿವೃತ್ತ ಮುಖ್ಯೋಪಧ್ಯಾಯ ನೂಜಾಡಿ ಬಗ್ವಾಡಿ ಮೆತ್ತಿನಮನೆ ಬಿ. ರಾಜೀವ ಶೆಟ್ಟಿ ಅವರಿಗೆ ‘ಗುರುವಂದನೆ’ ಸಲ್ಲಿಸಲಾಯಿತು. ಲೆಕ್ಕಪರಿಶೋಧಕ ಕಮಲಾಕ್ಷ ಕಾಮತ್ ಕಾರ್ಕಳ ಅವರಿಗೆ ‘ಸರಕಾರಿ ಶಾಲೆಗಳ ಅಭಿವೃದ್ಧಿ ಹರಿಕಾರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2026-27ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಬೀಜಾಡಿ ಸರಕಾರಿ ಪ್ರೌಢಶಾಲೆ ಸಹಶಿಕ್ಷಕ ಡಾ. ಸದಾನಂದ ಬೈಂದೂರ್, ಹೊಸ್ಮಾರು ಕೆ.ಪಿ.ಎಸ್ ಪ್ರಾಥಮಿಕ ವಿಭಾಗದ ಹಿರಿಯ ಮುಖ್ಯಶಿಕ್ಷಕ ನಾಗೇಶ, ಗುಜ್ಜಾಡಿ ಭಾಸ್ಕರ್ ಪೈ ಸ್ಮಾರಕ ಸರಕಾರಿ ಪ್ರೌಢಶಾಲೆ ಮುಖ್ಯೋಪಧ್ಯಾಯ ಉದಯ ಗಾಂವ್ಕರ್, ನಕ್ರೆ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಸಂತೋಷ್ ಕುಮಾರ್ ಶೆಟ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರೂರು (ಉರ್ದು) ಸಹಶಿಕ್ಷಕಿ ಸಂಧ್ಯಾ ಕುಮಾರಿ ಬಿ., ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾಪು ಇಲ್ಲಿನ ಮುಖ್ಯೋಪಧ್ಯಾಯಿನಿ ಕಮಲಾಕ್ಷಿ, ಉದ್ಯಾವರ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲೆ ವಿಭಾಗದ ಸಹಶಿಕ್ಷಕಿ ತಾರಾಮತಿ, ದೊಡ್ಡಣಗುಡ್ಡೆ ಸ.ಹಿ.ಪ್ರಾ. ಶಾಲೆ ಪ್ರಭಾರ ಮುಖ್ಯೋಪಧ್ಯಾಯಿನಿ ನಿರ್ಮಲಾ ಸುರೇಂದ್ರ, ಹೈಕಾಡಿ ಸ.ಹಿ.ಪ್ರಾ. ಶಾಲೆ ಹಿರಿಯ ಮುಖ್ಯೋಪಧ್ಯಾಯ ಶೇಖರ ಕುಮಾರ್, ಸೈಬ್ರಕಟ್ಟೆ ಸ.ಹಿ.ಪ್ರಾ. ಶಾಲೆ ಮುಖ್ಯೋಪಧ್ಯಾಯಿನಿ ಜಯಂತಿ, ಪೊಲಿಪು ಸ. ಪ. ಪೂ. ಕಾಲೇಜು ಪ್ರೌಢಶಾಲಾ ವಿಭಾಗದ ಸಹಶಿಕ್ಷಕಿ ಶುಭ ಎಸ್. ಸುವರ್ಣ, ಕೆಪಿಎಸ್ ವಂಡ್ಸೆ-ನೆಂಪು ಪ್ರೌಢಶಾಲೆ ವಿಭಾಗದ ಪ್ರಭಾರ ಮುಖ್ಯೋಪಧ್ಯಾಯ ಶ್ರೀಧರ ಭಟ್, ಸ.ಕಿ.ಪ್ರಾ. ಶಾಲೆ ಕೊಂಜಾಡಿ-ಆಲ್ಬಾಡಿಯ ಪ್ರಭಾರ ಮುಖ್ಯೋಪಧ್ಯಾಯ ನಾರಾಯಣ ನಾಯ್ಕ, ಪರ್ಕಳ ಶೆಟ್ಟಿಬೆಟ್ಟು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಧ್ಯಾಯ ರಾಮಕೃಷ್ಣ ನಾಯಕ್ ಅವರಿಗೆ ನೀಡಲಾಯಿತು. ಕುಂದಾಪುರ ವಡೇರಹೋಬಳಿ ಪಿಎಂಶ್ರೀ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ರಾಜ್ಯಮಟ್ಟದ ಕ್ರೀಡಾಪಟು ವಿಠಲ ಬಾಳಪ್ಪ ಮುನವಳ್ಳಿ ಹಾಗೂ ದೈಹಕ ಶಿಕ್ಷಕಿಯನ್ನು ಸನ್ಮಾನಿಸಲಾಯಿತು. ಮಲ್ಪೆಯ ಗಾಂಧಿ ಶತಾಬ್ದಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕಂಡ್ಲೂರು ರಾಮ್ಸನ್ ಸರಕಾರಿ ಪ್ರೌಢಶಾಲೆ, ಜಾನುವಾರುಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಪು ಪೊಲಿಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಗ್ವಾಡಿ ನೂಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುದ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ‘ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್.ಡಿ.ಎಂ.ಸಿ. ಮತ್ತು ಸರಕಾರಿ ಶಾಲೆ ಪ್ರಶಸ್ತಿ’ ನೀಡಲಾಯಿತು.
Comments are closed.