ಕರಾವಳಿ

ಬಿದ್ಕಲ್‌ಕಟ್ಟೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಸಭಾಭವನ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2 ಲಕ್ಷದ ನೆರವು

Pinterest LinkedIn Tumblr

ಕುಂದಾಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ-2 ವ್ಯಾಪ್ತಿಯ ಬಿದ್ಕಲ್‌ಕಟ್ಟೆಯ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಸಭಾಭವನ ನಿರ್ಮಾಣಕ್ಕೆ ಡಾ. ಡಿ.ವೀರೇಂದ್ರ ಹೆಗ್ಗಡೆಯವರು 2 ಲಕ್ಷ ಅನುದಾನ ಮಂಜೂರು ಮಾಡಿದ್ದು, ತಾಲೂಕು ಯೋಜನಾಧಿಕಾರಿ ಸುಧೀರ್‌ ಹಂಗಳೂರು ಅವರು ಶಾಲಾ ಉಪಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.

ಯೋಜನಾಧಿಕಾರಿ ಸುಧೀರ್ ಮಾತನಾಡಿ, ಗ್ರಾಮದ ಪ್ರತೀ ಮಕ್ಕಳೂ ಶಾಲಾ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಉತ್ತಮ ಶಿಕ್ಷಣ ದೊರೆಯಬೇಕಾದರೆ, ಮೂಲಭೂತ ಸೌಕರ್ಯಗಳಿರುವ ಶಾಲೆಯು ಕೂಡ ಗ್ರಾಮಕ್ಕೆ ಅತೀ ಮುಖ್ಯ. ಪ್ರತೀ ಗ್ರಾಮದಲ್ಲಿಯೂ ಶಿಕ್ಷಣದ ಕ್ರಾಂತಿ ಆಗಬೇಕು. ಈ ನಿಟ್ಟಿನಲ್ಲಿ ಶಾಲೆಗಳ ತರಗತಿ ಕೊಠಡಿ ನಿರ್ಮಾಣಕ್ಕೆ, ಶಾಲಾ ಸಭಾಭವನ ನಿರ್ಮಾಣಕ್ಕೆ, ಶಾಲಾ ಶೌಚಾಲಯ ನಿರ್ಮಾಣಕ್ಕೆ, ಹಲವಾರು ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅನುದಾನವನ್ನು ಒದಗಿಸಿಕೊಡಲಾಗುತ್ತಿದೆ. ಇಷ್ಟೇ ಅಲ್ಲದೇ ಮಕ್ಕಳು ಸರಿಯಾಗಿ ಕುಳಿತು ಪಾಠವನ್ನು ಕೇಳಲು ಅನುಕೂಲವಾಗುವಂತೆ ಬೆಂಚು ಡೆಸ್ಕ್‌ಗಳು, ಶಿಕ್ಷಕರಿಲ್ಲದ ಅಗತ್ಯ ಶಾಲೆಗಳಿಗೆ ಜ್ಞಾನದೀಪ ಶಿಕ್ಷಕರ ನೇಮಕಾತಿಯನ್ನ ಕೂಡ ಮಾಡಲಾಗುತ್ತಿದೆ. ಇದರೊಂದಿಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಗೊಳ್ಳಲು ಸಹಕಾರಿಯಾಗುವಂತೆ ವಾರ್ಷಿಕ ಮೂರು ತಿಂಗಳುಗಳ ಕಾಲ ಶಾಲಾ ಎಲ್ಲಾ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್‌ ಕ್ಲಾಸ್‌ನ್ನು ಕೂಡ ಯೋಜನೆಯ ವತಿಯಿಂದ ನೀಡಲಾಗುತ್ತಿದೆ. ಈವರೆಗೆ ತಾಲೂಕಿನಲ್ಲಿ ವರ್ಷಂದೀಚೆಗೆ ಒಟ್ಟು 47 ಲಕ್ಷದ 25 ಸಾವಿರ ಅನುದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒದಗಿಸಿಕೊಡಲಾಗಿದ್ದು, ಇದು ನೆರವು ನೀಡುತ್ತಿರುವ 17 ನೇ ಶಾಲೆಯಾಗಿದೆ ಎಂದರು.

ಈ ಸಂದರ್ಭ ಶಾಲಾ ಉಪಪ್ರಾಂಶುಪಾಲ ಕರುಣಾಕರ ಶೆಟ್ಟಿ, ಉದ್ಯಮಿಗಳಾದ ಮಹೇಶ್‌ ಶೆಣೈ, ದಯಾನಂದ ಬಾಸ್‌ಬೈಲು, ದೀಪಕ್‌ ಶೆಟ್ಟಿ, ಕಿಶೋರ್‌ ಶೆಟ್ಟಿ, ಮೊಳಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ದೀನ್‌ಪಾಲ್‌ ಶೆಟ್ಟಿ, ಒಕ್ಕೂಟದ ಅಧ್ಯಕ್ಷೆ ಸುಮನಾ, ಕಾರ್ಯದರ್ಶಿ ಸಂಗೀತಾ ಮೇಲ್ವಿಚಾರಕಿ ಶರ್ಮಿಳಾ ಜಿ., ಸೇವಾಪ್ರತಿನಿಧಿ ಶೋಭಾ ಮೊದಲಾದವರು ಉಪಸ್ಥಿತರಿದ್ದರು.

Comments are closed.