ಕರಾವಳಿ

ಉಡುಪಿ-ಕುಂದಾಪುರ ಸರ್ವೀಸ್ ರಸ್ತೆಯಲ್ಲಿ KSRTC ಬಸ್ ಸಂಚಾರಕ್ಕೆ ಅಶೋಕ್ ಪೂಜಾರಿ ಬೀಜಾಡಿ ಆಗ್ರಹ

Pinterest LinkedIn Tumblr

ಕುಂದಾಪುರ: ಕೋಟದಿಂದ ಬಾಳೆಬೆಟ್ಟು ಹಾಗೂ ಕೋಟೇಶ್ವರದಿಂದ ಕುಂದಾಪುರದವರೆಗೆ ಸರ್ವೀಸ್ ರಸ್ತೆಗಳು ನಿರ್ಮಾಣಗೊಂಡಿದ್ದರೂ ಗ್ರಾಮಾಂತರ ಹಾಗೂ ನಗರ ಸಾರಿಗೆ ಬಸ್‌ಗಳು ಸರ್ವೀಸ್ ರಸ್ತೆಗೆ ಇಳಿಯದೆ ಹೆದ್ದಾರಿಯಲ್ಲೇ ಸಂಚರಿಸುತ್ತಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋಟ- ಬಾಳೆಬೆಟ್ಟು ತನಕದ ಎರಡುವರೆ ಕಿ.ಮೀ ಉದ್ದದ ಸರ್ವೀಸ್ ರಸ್ತೆಯ ಎರಡೂ ಬದಿಯಲ್ಲಿ ಐದಾರು ಬಸ್ ನಿಲ್ದಾಣಗಳಿದ್ದರೂ ಬಸ್‌ಗಳು ಅಲ್ಲಿಗೆ ತೆರಳದೆ ಹೆದ್ದಾರಿಯಲ್ಲೇ ನಿಲ್ಲಿಸುತ್ತಿರುವುದರಿಂದ ಪ್ರಯಾಣಿಕರು ಬಸ್ ಹತ್ತಲು ಹೆದ್ದಾರಿಯ ಗ್ರಿಲ್‌ಗಳನ್ನು ಹಾರಿ ರಸ್ತೆ ದಾಟಬೇಕಾದ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿಯಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿ ಇಳಿಸುವುದರಿಂದ ಹಿಂದಿನಿಂದ ವೇಗವಾಗಿ ಬರುವ ವಾಹನಗಳಿಂದ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ.

ಕೋಟೇಶ್ವರದಿಂದ ಕುಂದಾಪುರದವರೆಗೂ ಇದೇ ಸಮಸ್ಯೆ ಮುಂದುವರಿದಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಸರ್ವೀಸ್ ರಸ್ತೆಯನ್ನು ಸಾರಿಗೆ ಬಸ್‌ಗಳು ಬಳಸದೆ ಇರುವುದರಿಂದ ಅದರ ಉದ್ದೇಶವೇ ವಿಫಲವಾಗುತ್ತಿದೆ. ಬಸ್ ನಿಲ್ದಾಣಗಳಿದ್ದರೂ ಅವುಗಳನ್ನು ನಿರ್ಲಕ್ಷಿಸಿ ಹೆದ್ದಾರಿಯಲ್ಲೇ ಬಸ್ ನಿಲ್ಲಿಸುವ ಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದ್ದು, ಸರ್ವೀಸ್ ರಸ್ತೆಯ ನಿಲ್ದಾಣಗಳಿಗೆ ಬಸ್‌ಗಳು ತೆರಳದಿರುವುದು ಯೋಜನೆಯ ಫಲಾನುಭವಿಗಳಿಗೂ ಅನಾನುಕೂಲ ಉಂಟುಮಾಡುತ್ತಿದೆ. ವಿಶೇಷವಾಗಿ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳು ಹೆದ್ದಾರಿಗೆ ಬಂದು ಬಸ್ ಹತ್ತಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಶಕ್ತಿ ಯೋಜನೆಯ ಸಮರ್ಪಕ ಅನುಷ್ಠಾನವನ್ನು ಗಮನದಲ್ಲಿಟ್ಟುಕೊಂಡು ಕೋಟ–ಬಾಳೆಬೆಟ್ಟು ಮತ್ತು ಕೋಟೇಶ್ವರ–ಕುಂದಾಪುರ ಮಾರ್ಗದಲ್ಲಿ ಬಸ್‌ಗಳು ಸರ್ವೀಸ್ ರಸ್ತೆಯಲ್ಲೇ ಸಂಚರಿಸಿ, ನಿಗದಿತ ನಿಲ್ದಾಣಗಳಲ್ಲಿ ನಿಲುಗಡೆ ಮಾಡುವಂತೆ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಶೋಕ ಪೂಜಾರಿ ಆಗ್ರಹಿಸಿದ್ದಾರೆ.

Comments are closed.