ಕುಂದಾಪುರ: ಕುಂದಾಪುರ-2 ತಾಲೂಕಿನ ಹೆಸ್ಕುತ್ತೂರು ಗ್ರಾಮದ ಹಾರ್ಯಾಡಿಯ ಸುವರ್ಣ ಯಕ್ಷೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ರೂ.1 ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದು, ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರು ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ವ್ಯವಸ್ಥಾಪನಾ ಸಮಿತಿಯವರಿಗೆ ಹಸ್ತಾಂತರಿಸಿದರು.

ಯೋಜನಾಧಿಕಾರಿ ಸುಧೀರ್ ಮಾತನಾಡಿ, ಗ್ರಾಮದಲ್ಲಿ ನೆಮ್ಮದಿಯ ವಾತಾವರಣ ಇರಬೇಕೆಂದರೆ ಶ್ರದ್ಧಾ ಕೇಂದ್ರಗಳಾಗಿರುವ ದೇವಸ್ಥಾನಗಳು ಅತ್ಯಗತ್ಯವೆಂದು ಮನಗಂಡಿರುವ ವೀರೇಂದ್ರ ಹೆಗ್ಗಡೆಯವರು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧರ್ಮೋತ್ಥಾನ ಟ್ರಸ್ಟ್ ಮೂಲಕ ದೇಣಿಗೆಯನ್ನು ಒದಗಿಸಿಕೊಡುತ್ತಿದ್ದಾರೆ. ಇದಲ್ಲದೇ ವಾರ್ಷಿಕವಾಗಿ ಎರಡು ಬಾರಿ ಯೋಜನೆಯ ಸದಸ್ಯರ ಹಾಗೂ ಸ್ಥಳೀಯರ ಸಹಕಾರದಿಂದ ಗ್ರಾಮದ ದೇವಸ್ಥಾನದ, ಚರ್ಚ್, ಮಸೀದಿಗಳ ಸ್ವಚ್ಛತೆಯನ್ನು ಮಾಡಲಾಗುತ್ತಿದ್ದು, ಕಸಗಳ ವಿಲೇವಾರಿಗೆ ಕಸದ ಡಬ್ಬಿಯನ್ನು ಕೂಡ ಒದಗಿಸಿಕೊಡಲಾಗಿದ್ದು, ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಚತೆಗೆ ಪ್ರಮುಖ ಆದ್ಯತೆ ನೀಡಲಾಗಿದೆ.
ತಾಲೂಕಿನಲ್ಲಿ ದೇವಸ್ಥಾನದ ಜೀರ್ಣೋದ್ಧಾರಗಳಿಗೆ ಕಳೆದ 5 ವರ್ಷಂದೀಚೆಗೆ ಒಟ್ಟು 98 ಲಕ್ಷದ 35 ಸಾವಿರ ಅನುದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒದಗಿಸಿಕೊಡಲಾಗಿದ್ದು, ಇದು ನೆರವು ನೀಡುತ್ತಿರುವ 40ನೇ ದೇವಸ್ಥಾನವಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಸದಾಶಿವ ಐತಾಳ್, ಅರ್ಚಕ ಪ್ರಶಾಂತ್ ಐತಾಳ್, ಕೊರ್ಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ದೇವಸ್ಥಾನದ ಸಮಿತಿಯ ಆನಂದ ಶೆಟ್ಟಿ, ಬಾಡು ಶೆಟ್ಟಿ, ಪ್ರಭಾಕರ ಶೆಟ್ಟಿ, ಶೋಭಾ ಶೆಟ್ಟಿ, ವನಜ ಶೆಟ್ಟಿ, ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ಶರ್ಮಿಳಾ ಹಾಗೂ ಸೇವಾಪ್ರತಿನಿಧಿ ಸುಕನ್ಯಾ ಉಪಸ್ಥಿತರಿದ್ದರು.
Comments are closed.