ಕೊಲ್ಲೂರು: ಯುವಕನೋರ್ವನನ್ನು ಮರಕ್ಕೆ ಕಟ್ಟಿ ಥಳಿಸಿದ ಪ್ರಕರಣವೊಂದರಲ್ಲಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದ್ದು ಎರಡು ಪ್ರಕರಣಗಳಲ್ಲಿ ಒಟ್ಟು ಮೂವರು ಆರೋಪಿಗಳನ್ನು ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ತಂಡದವರು ಬಂಧಿಸಿದ್ದಾರೆ. ಯುವಕನನ್ನು ಮರಕ್ಕೆ ಕಟ್ಟಿಹಾಕಿದ್ದ ಫೋಟೋ ಜಾಲತಾಣದಲ್ಲಿ ವೈರಲ್ ಆಗಿತ್ತು.

ದಲಿತ ದೌರ್ಜನ್ಯ ಪ್ರಕರಣ: ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಗ್ರಾಮದಲ್ಲಿ ಆ.6 ರಂದು ಮನೆಗೆ ನುಗ್ಗಿದ ಸನತ್ ಮೊಗವೀರ ಎಂಬಾತ ಅವಿವಾಹಿತ ಯುವತಿ ಜೊತೆಗೆ ಅನುಚಿತವಾಗಿ ವರ್ತಿಸಿ ಜಾತಿ ನಿಂದನೆ ಮಾಡಿದ ಬಗ್ಗೆ ನೊಂದ ಯುವತಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸನತ್ನನ್ನು ಬಂಧಿಸಿದ್ದಾರೆ.
ಮರಕ್ಕೆ ಕಟ್ಟಿ ಹಲ್ಲೆ: ಸನತ್ ಮನೆಗೆ ನುಗ್ಗಿದ ಸಂದರ್ಭ ನೊಂದ ಯುವತಿಯ ಕುಟುಂಬಸ್ಥರು ಆತನನ್ನು ಕಟ್ಟಿ ಹಲ್ಲೆ ನಡೆಸಿದ ಕುರಿತಂತೆ ಸನತ್ ನೀಡಿದ ದೂರಿನ ಮೇರೆಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಮತ್ತು ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಯುವತಿಯ ತಂದೆ ರಾಮಕುಮಾರ್, ಸಹೋದರ್ ನಂದೀಶ್ ಎನ್ನುವರನ್ನು ಬಂಧಿಸಲಾಗಿದೆ. ಇತರ ಆರೋಪಿಗಳು ಪರಾರಿಯಾಗಿದ್ದಾರೆ.
ಎರಡೂ ಪ್ರಕರಣಗಳು ತನಿಖೆಯಲ್ಲಿದ್ದು ಶೀಘ್ರದಲ್ಲಿ ಇನ್ನುಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
Comments are closed.