ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ತಾಲೂಕಿನಾದ್ಯಂತ ಸೋಮವಾರ ಸಂಜೆಯಿಂದ ಎಡಬಿಡದೇ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ವಿವಿದೆಡೆ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಗಳಲ್ಲಿ ಮಳೆ ನೀರು ನಿಂತು ಕೃತಕ ಕೆರೆ ಸೃಷ್ಟಿಯಾದ ಘಟನೆಗಳು ವರದಿಯಾಗಿದೆ.

ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಸಮೀಪ ಕಾಮಗಾರಿ ಅವೈಜ್ಞಾನಿಕತೆಯಿಂದ ಹೋಟೆಲ್ ಕೆಲಸಗಾರ ರಮೇಶ್ ಗಾಣಿಗ ಎನ್ನುವರ ಮನೆಗೆ ನೀರು ನುಗ್ಗಿದ ಘಟನೆ ವರದಿಯಾಗಿದೆ.

ಕುಂದಾಪುರದ ಸಂತೆ ಮಾರ್ಕೆಟ್‌ನೊಳಗೆ ಮಂಗಳವಾರ ಆರ್.ಟಿ.ಓ ಇಲಾಖೆಯಿಂದ ವಾಹನ ಪಾಸಿಂಗ್ ನಡೆಯುತ್ತಿದ್ದು ಮಳೆಯ ನಡುವೆಯೂ ವಾಹನ ಮಾಲೀಕರು ತಮ್ಮ ವಾಹನಗಳ ಪಾಸಿಂಗ್ ಕಾರ್ಯಕ್ಕೆ ಹೋಗುವ ದೃಶ್ಯ ಕಂಡುಬಂತು.

ಇನ್ನು ಬೀಜಾಡಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಮಳೆನೀರು ನಿಂತು ಕೆರೆಯಂತಾಗಿದೆ. ಅಲ್ಲದೆ ಬೀಜಾಡಿಯ ಮೀನುಗಾರಿಕಾ ರಸ್ತೆಯಲ್ಲೂ ನೀರು ನಿಂತು ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.

ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಟಿ.ಟಿ ರಸ್ತೆ ಅಂಡರ್‌ಪಾಸ್ ಬಳಿ ಮಳೆ ನೀರು ನಿಂತು ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಮೊಣಕಾಲೆತ್ತರ ನೀರು ನಿಂತ ಕಾರಣ ಹಲವರ ವಾಹನಗಳು ಬಂದ್ ಬಿದ್ದ ಘಟನೆಯೂ ನಡೆಯಿತು. ಇದರಿಂದ ಆಕ್ರೋಷಗೊಂಡ ಸ್ಥಳೀಯತು ‘ನವಯುಗ-ಮಹಿಮೆ. ದ್ವಿಚಕ್ರ ವಾಹನಗಳ ರಸ್ತೆ ಸಾರಿಗೆ ನಿಷೇದ. ಜಲಸಾರಿಗೆಗೆ ಮಾತ್ರ ಅವಕಾಶ-ಟಿ.ಟಿ ರಸ್ತೆ ಕುಂದಾಪುರ’ ಎಂಬ ಫಲಕ ಹಾಕಿ ಸಂಬಂದಪಟ್ಟವರನ್ನು ಅಣಕಿಸಿದ್ದಾರೆ.
ಇನ್ನೂ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಪ್ರಮುಖ ನದಿಗಳು ತುಂಬಿ ಹರಿಯುತ್ತಿದೆ. ಮಳೆ ಮುಂದುವರಿದರೆ ಅಲ್ಲಲ್ಲಿ ನೆರೆ ಪ್ರಮಾಣ ಹೆಚ್ಚುವ ಸಾಧ್ಯತೆಗಳಿದೆ. ಕುಬ್ಜಾ ನದಿಯೂ ಉಕ್ಕಿ ಹರಿಯುತ್ತಿದ್ದು ಕಮಲಶಿಲೆ ದೇವಳಕ್ಕೆ ನೀರು ಪ್ರವೇಶಿಸುವ ಸಾಧ್ಯತೆಯಿದೆ. ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಸಮೀಪದ ನದಿಯೂ ತುಂಬಿ ಹರಿಯುತ್ತಿದೆ.
Comments are closed.