ಕರಾವಳಿ

ಕೋಟೇಶ್ವರದಲ್ಲಿ ‘ಚಿರಂತನ’ ಶಿಕ್ಷಣ ಸಂಸ್ಥೆಗಳನ್ನು ಉದ್ಘಾಟಿಸಿದ ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ

Pinterest LinkedIn Tumblr

ಕುಂದಾಪುರ: ಸಮಾಜದ ಕಟ್ಟ ಕಡೆಯ ಮಗು ವಿದ್ಯಾವಂತನಾದರೆ ಸಮಾಜದ ಸುಧಾರಣೆ ಆಗುತ್ತದೆ. ಅದಕ್ಕೆ ವಿದ್ಯಾರ್ಜನೆ ನೀಡುವುದು ದೇವರಿಗೆ ಇಷ್ಟವಾಗುವ ಕಾರ್ಯ. ಆ ನಿಟ್ಟಿನಲ್ಲಿ ಆರಂಭಗೊಂಡಿರುವ ಈ ಚಿರಂತನ ಶಿಕ್ಷಣ ಸಂಸ್ಥೆಯು ಈ ಭಾಗದ ಮಕ್ಕಳಿಗೆ ಅನುಕೂಲವಾಗಲಿ, ಯಶಸ್ವಿಯಾಗಿ ಮುನ್ನಡೆಯಲಿ ಎಂದು ಬೈಂದೂರಿನ ಮಾಜಿ ಶಾಸಕ, ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು.

ಅವರು ಗುರುವಾರ ಕೋಟೇಶ್ವರದ ಯುವ ಮೆರಿಡಿಯನ್ ಸಮೀಪ ಲೋಟಸ್ ಎಡ್ಜ್ ಸಂಕೀರ್ಣದಲ್ಲಿ ಸುಲೋಚನಾ ಸರ್ವೋತ್ತಮ ಎಜುಕೇಷನಲ್ ಟ್ರಸ್ಟ್‌ನ ಅಂಗಸಂಸ್ಥೆಯಾದ ಚಿರಂತನ ಶಿಕ್ಷಣ ಸಂಸ್ಥೆಗಳನ್ನು ಉದ್ಘಾಟಿಸಿ, ಮಾತನಾಡಿದರು.

ಹದಿಹರೆಯದ ಮಕ್ಕಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮನೋ ವೈಜ್ಞಾನಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಅಂತವರನ್ನು ಅರಿತು, ಬೋಧನೆ ಮಾಡುವ ಶಿಕ್ಷಕರ ಅಗತ್ಯವಿದೆ. ಡಾ| ಚಿಂತನಾ ರಾಜೇಶ್ ಅವರು ಮಕ್ಕಳ ಮನೋ ವಿಜ್ಞಾನ ವಿಷಯದಲ್ಲಿ ಬಹಳಷ್ಟು ಅಧ್ಯಯನ ಮಾಡಿದ್ದು, ಮಾತ್ರವಲ್ಲದೆ ಶಿಕ್ಷಣ ರಂಗದ ಬಗ್ಗೆ ತನ್ನದೇ ಆದ ದೂರದೃಷ್ಟಿ ಹೊಂದಿದ್ದಾರೆ. ಹಾಗಾಗಿ ಈ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುವ ವಿಶ್ವಾಸವಿದೆ ಎಂದವರು ಹಾರೈಸಿದರು.

ಕುಂದಾಪುರದ ಮನೋ ವೈದ್ಯ ಡಾ| ಪ್ರಕಾಶ್ ಸಿ. ತೋಳಾರ್ ಮಾತನಾಡಿ, ನರ್ಸರಿಯಿಂದ ಪಿಯುವರೆಗೆ ಮಕ್ಕಳಿಗೆ ಉತ್ತಮ ತರಬೇತಿ ಅಗತ್ಯ. ಮಕ್ಕಳಲ್ಲಿನ ಕಲಿಕಾ ನ್ಯೂನ್ಯತೆಗೆ ಕಾರಣ ಹುಡುಕಿ ತರಬೇತಿ ನೀಡುವ ಸಾಮರ್ಥ್ಯ ಶಿಕ್ಷಕರಿಗೆ ಇರಬೇಕು. ಮಕ್ಕಳ ಆಸಕ್ತಿ ಕೇಳಿ ಅವರಿಗೆ ತರಬೇತಿ ಕೊಡಬೇಕೇ ಹೊರತು ಪೋಷಕರ ಆಸಕ್ತಿಯನ್ನು ಮಕ್ಕಳ ಮೇಲೆ ಹೇರಬಾರದು. ಮಕ್ಕಳ ಬಗ್ಗೆ ಪೋಷಕರಿಗೆ ಅತಿಯಾದ ಆತಂಕ ಬೇಡ. ಮಕ್ಕಳ ಮುಂದೆ ನಾವು ದಿನವಿಡೀ ಮೊಬೈಲ್ ಬಳಸುವುದು ಸರಿಯಲ್ಲ. ಮನೆಯಲ್ಲಿ ಮೊಬೈಲ್ ಇಲ್ಲದೆ ಎಲ್ಲರೊಂದಿಗೆ ಕಾಲಕಳೆಯಬೇಕು. ಕುಂದಾಪುರದಲ್ಲಿ ಮಾದಕ ವ್ಯಸನ ಸೇವೆ ಜಾಸ್ತಿಯಾಗಿದೆ. ಮಕ್ಕಳಿಗೆ ಹಣ ಕೊಟ್ಟಾಗ ಯಾವುದಕ್ಕೆ ಬಳಕೆ ಮಾಡುತ್ತಾರೆ ಎಂಬುದರ ಗಮನವಿರಲಿ ಎಂದವರು ನುಡಿದರು.

ಗುತ್ತಿಗೆದಾರ ಕಮಲ್ ಕಿಶೋರ್ ಹೆಗ್ಡೆ, ಚಿರಂತನ ಶಿಕ್ಷಣ ಸಂಸ್ಥೆ ಸಂಚಾಲಕಿ ಸುಲೋಚನಾ ಸರ್ವೋತ್ತಮ ಶೆಟ್ಟಿ ಉಪಸ್ಥಿತರಿದ್ದರು.

ಚಿರಂತನ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ಡಾ| ಚಿಂತನಾ ರಾಜೇಶ್ ಪ್ರಸ್ತಾವಿಸಿದರು. ಚಿರ ಶೆಟ್ಟಿ ಸ್ವಾಗತಿಸಿ, ನಿವೃತ್ತ ಶಿಕ್ಷಕರ ದಿನಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments are closed.